ಸಂಸಾರ ನೌಕೆ ಎನ್ನುವುದು ಎರಡು ಕೈ ಜೋಡಿಸಿ ನಡೆಸುವ ಪ್ರಯಾಣ. ಈ ಪ್ರಯಾಣದಲ್ಲಿ ಎದುರಾಗುವ ಕಷ್ಟ-ಸುಖಗಳನ್ನು ಸಮಾನವಾಗಿ ಹಂಚಿಕೊಂಡು, ಒಬ್ಬರಿಗೊಬ್ಬರು ಹೆಗಲಾಗಿ, ಅರ್ಥೈಸಿಕೊಂಡು ಸಾಗುವುದೇ ಜೀವನದ ಸತ್ಯ. ಇಂತ ಹ ಸುಂದರ ಸಂಸಾರದ ಆಧಾರವೇ “ರಾಜಿ’. ಎರಡು ಮನಸ್ಸುಗಳು ಪರಸ್ಪರ ಅರಿತು ಒಂದು ಸುಂದರ ಒಪ್ಪಂದದಲ್ಲಿ ಜೀವಿಸುವುದೇ ಸಂಸಾರ ಎಂಬ ಈ ಸಾರದೊಂದಿಗೆ ಮೂಡಿಬಂದಿರುವ ಚಿತ್ರ “ರಾಜಿ’.
ಮದುವೆಯಾಗಿ ವರ್ಷಗಳು ಕಳೆದರು ಮಕ್ಕಳಿಲ್ಲ ಎಂಬ ಕೊರಗು ಕಿಂಚಿತ್ತು ಭಾದಿಸದೆ, ಒಬ್ಬರನ್ನು ಒಬ್ಬರು ಮಕ್ಕಳಂತೆ ಕಂಡು ಸುಂದರವಾಗಿ ಸಂಸಾರ ನಡೆಸುತ್ತಿದ್ದ ಜೋಡಿ ರಾಘವ್ ಮತ್ತು ಜೀವಿತಾ. ಇವರಿಬ್ಬರ ಈ ತಡೆಯಿಲ್ಲದೆ ಸಾಗುವ
ಪಯಣಕ್ಕೆ ದೊಡ್ಡ ತಿರುವಾಗಿ ಪರಿಣಮಿಸಿದ್ದು ಒಂದು ಘಟನೆ. ನಡೆದ ಆ ಒಂದು ಘಟನೆ ಇವರ ಜೀವನದ ಮಗ್ಗುಲನ್ನೇ ಬದಲಿಸಿತ್ತು. ಈ ಜೋಡಿಗೆ ಎದುರಾದ ಕಷ್ಟಗಳನ್ನು ಹೇಗೆ ನಿಭಾಯಿಸುತ್ತದೆ. ಜೀವಿತಾ ಹೇಗೆ ತನ್ನ ಗಂಡನಿಗೆ ಬೆನ್ನೆಲುಬಾಗಿ, ಬರುವ ಕಷ್ಟಗಳನ್ನು ದಾಟಿ ನಿಲ್ಲುತ್ತಾಳೆ ಎಂದು ಹೇಳುವ ಚಿತ್ರವೇ ರಾಜಿ.
ಕಡಿಮೆ ಸಮಯದಲ್ಲಿ ಒಂದು ಕಥೆಯನ್ನು ಚಿತ್ರಿಸಿದ್ದು, ಚಿತ್ರದ ಮೊದಲ ಭಾಗ ವರ್ತಮಾನ ಹಾಗೂ ಹಳೆ ನೆನಪುಗಳ ಮೆಲುಕಿನಲ್ಲೇ ಕಳೆದು ಹೋಗುತ್ತದೆ. ಕಥೆಯ ನಿಜ ರೂಪ ಎರಡನೇ ಭಾಗದಲ್ಲಿ ತೆರೆದುಕೊಂಡು ಅಷ್ಟೆ ಬೇಗ ಚಿತ್ರಕ್ಕೆ ಒಂದು ಅಂತಿಮ ಘಟ್ಟ ನೀಡುತ್ತದೆ.
ಸಾಕಷ್ಟು ಧಾರಾವಾಹಿಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ ಪ್ರೀತಿ ಎಸ್ ಬಾಬು ಮುಖ್ಯಭೂಮಿಕೆಯಲ್ಲಿ ನಟಿಸಿ ನಿದೇರ್ಶಿಸಿರುವ ಮೊದಲ ಚಿತ್ರ ಇದಾಗಿದೆ. ಅವರ ಮೊದಲ ಪ್ರಯತ್ನ ಒಪ್ಪುವಂತದ್ದು. ಹೆಣ್ಣು ಸಂಸರಾದ ಕಣ್ಣು ಎನ್ನುವಂತೆ ಕುಟುಂಬ ನಿರ್ವಹಣೆಗೆ ಹೆಣ್ಣು ಪಡುವ ಕಷ್ಟ, ಚುಚ್ಚುಮಾತು, ಅನುಮಾನಗಳನ್ನು ಸಹಿಸಿ ಗಂಡನನ್ನು ಮಗುವಂತೆ ಕಾಣುವ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ರಾಘವೇಂದ್ರ ರಾಜ್‌ಕುಮಾರ್ ಎಂದಿನಂತೆ ತಮ್ಮ ಅಭಿನಯದ ಮೂಲಕ ಪಾತ್ರಕ್ಕೆ ಜೀವತುಂಬಿದ್ದು, ಪ್ರತಾಪ್ ಸಿಂಹ, ಎಂ ಡಿ ಕೌಶಿಕ್ ಅವರ ಪಾತ್ರಗಳು ಕಥೆಗೆ ಸಾಥ್ ನೀಡುವಂತಿದೆ.
ಚಿತ್ರದಲ್ಲಿ ಮೂಡಿಬಂದಿರುವ ಎಚ್.ಎಸ್.ವೆಂಕಟೇಶ್‌ಮೂರ್ತಿ ಅವರ ಸಾಹಿತ್ಯ ಹಾಗೂ ಉಪಾಸನಾ ಮೋಹನ್ ಅವರ ಸಂಗೀತ ಕಥೆಗೆ ಪುಷ್ಠಿ ಕೊಡುವಂತಿದ್ದು ಸಂಸಾರದ ನಿಜ ಅರ್ಥ ಸಾರಿದೆ. ಪಿ.ವಿ ಆರ್ ಸ್ವಾಮಿ ತಮ್ಮ ಕ್ಯಾಮರಾ ಕೈ ಚಳಕದಲ್ಲಿ “ರಾಜಿ’ಯನ್ನು ಸುಂದರವನ್ನಾಗಿಸಿದ್ದಾರೆ
ವಾಣಿ ಭಟ್ಟ