Advertisement

ಪೊರ್ಕಿ ಹುಡುಗಿಯ  ಪರಭಾಷಾ ಪರಸಂಗ

03:25 PM Oct 26, 2017 | |

“ಪೊರ್ಕಿ’ ಸಿನಿಮಾ ಮೂಲಕ ಕನ್ನಡಕ್ಕೆ ಎಂಟ್ರಿಕೊಟ್ಟ ಬೆಂಗಳೂರಿನ ಹುಡುಗಿ ಪ್ರಣೀತಾ ಈಗ ತೆಲುಗು, ತಮಿಳಿನಲ್ಲೂ ಬಿಝಿ. ಕನ್ನಡದಲ್ಲಿ ದರ್ಶನ್‌, ವಿಜಯ್‌, ಉಪೇಂದ್ರ, ಶಿವರಾಜಕುಮಾರ್‌ರಂತಹ ಸ್ಟಾರ್‌ಗಳ ಸಿನಿಮಾದಲ್ಲಿ ನಟಿಸಿರುವ ಪ್ರಣೀತಾ ಪರಭಾಷೆಯಲ್ಲೂ ಸೂರ್ಯ, ಮಹೇಶ್‌ ಬಾಬು, ಪವನ್‌ ಕಲ್ಯಾಣ್‌ರಂತಹ ಸ್ಟಾರ್‌ಗಳ ಜೊತೆ ನಟಿಸಿದ್ದಾರೆ. ಕನ್ನಡದ ಹುಡುಗಿಯಾಗಿ ಪರಭಾಷೆಯಲ್ಲಿ ಸದ್ದು ಮಾಡುತ್ತಿರುವ ಪ್ರಣೀತಾ ಇತ್ತೀಚೆಗೆ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ತಮಿಳು, ತೆಲುಗು ಎಂದು ಓಡಾಡಿಕೊಂಡೇ ಇರುತ್ತಾರೆ. ಇಂತಿಪ್ಪ, ಪ್ರಣೀತಾ ಅಪರೂಪಕ್ಕೆ ಸಿಕ್ಕಿ ಮಾತನಾಡಿದ್ದಾರೆ…

Advertisement

1. ಪ್ರಣೀತಾ ಈಗ ಕನ್ನಡಕ್ಕಿಂತ ತೆಲುಗಿನಲ್ಲೇ ಹೆಚ್ಚು ಬಿಜಿಯಾಗಿರುವಂತಿದೆ?
   – ಬಿಝಿ ಅನ್ನೋದಕ್ಕಿಂತ ಅಲ್ಲೂ ನನಗೆ ಒಳ್ಳೊಳ್ಳೆ ಆಫ‌ರ್‌ಗಳು ಸಿಗುತ್ತಿವೆ. ಹೋಮ್ಲಿ ಪಾತ್ರದಿಂದ ಹಿಡಿದು ಗ್ಲಾಮರಸ್‌ ಪಾತ್ರಗಳವರೆಗೂ ನನ್ನನ್ನು ಹುಡುಕಿಕೊಂಡು ಬರುತ್ತಿವೆ. ಹಾಗಂತ ನಾನು ಬಂದ ಆಫ‌ರ್‌ಗಳನ್ನೆಲ್ಲಾ ಒಪ್ಪಿಕೊಳ್ಳುತ್ತಿಲ್ಲ. ಪರಭಾಷೆಗೆ ಹೋಗಿ ಸಿನಿಮಾ ಪಟ್ಟಿ ಬೆಳೆಯಬೇಕೆಂಬ ಆಸೆ ನನಗಿಲ್ಲ. ನನಗೆ ತುಂಬಾ ಇಷ್ಟವಾದ ಪಾತ್ರಗಳನ್ನಷ್ಟೇ ಮಾಡುತ್ತಿದ್ದೇನೆ. ಹಾಗಂತ ಕೇವಲ ತೆಲುಗುವೊಂದರಲ್ಲೇ ಬಿಝಿಯಾಗಿರಬೇಕೆಂಬ ಆಸೆ ನನಗಿಲ್ಲ. ಯಾವುದೇ ಭಾಷೆಯ ಸಿನಿಮಾವಾದರೂ ಪಾತ್ರ ಇಷ್ಟವಾದರೆ ಮಾಡುತ್ತೇನೆ. 
  
2. ಕನ್ನಡ ಅವಕಾಶಗಳನ್ನು ಪ್ರಣೀತಾ ಒಪ್ಪಿಕೊಳ್ಳುತ್ತಿಲ್ಲ, ಸರಿಯಾಗಿ ರೆಸ್ಪಾಂಡ್‌ ಮಾಡುತ್ತಿಲ್ಲ ಎಂಬ ಮಾತಿದೆಯಲ್ಲ?

– ಅದು ಸುಳ್ಳು. ಮೊದಲೇ ಹೇಳಿದಂತೆ ನನಗೆ ಇಷ್ಟವಾದ ಪಾತ್ರಗಳನ್ನು ನಾನು ಮಾಡುತ್ತಲೇ ಬಂದಿದ್ದೇನೆ. ನಾನು ಕನ್ನಡ ಸಿನಿಮಾಗಳನ್ನು ಒಪ್ಪಿಕೊಳ್ಳದಿದ್ದರೆ ಈಗ “ಲೀಡರ್‌’ ಸಿನಿಮಾದಲ್ಲಿ ನಟಿಸಲು ಸಾಧ್ಯವಿತ್ತಾ? ಕೆಲವೊಮ್ಮೆ ಎಲ್ಲಾದರೂ ಹೊರಗಡೆ ಶೂಟಿಂಗ್‌ನಲ್ಲಿದ್ದರೆ ಅಥವಾ ಇನ್ನೇನಾದರೂ ಬಿಝಿ ಇದ್ದರೆ ನನಗೆ ಫೋನ್‌ ರಿಸೀವ್‌ ಮಾಡಲು ಅಥವಾ ಸರಿಯಾಗಿ ರೆಸ್ಪಾಂಡ್‌ ಮಾಡಲು ಸಾಧ್ಯವಾಗೋದಿಲ್ಲ. ಹಾಗಂತ ನಾನು ಕನ್ನಡವನ್ನು ಕಡೆಗಣ್ಣಿಂದ ನೋಡುತ್ತೇನೆ ಎಂದರ್ಥವಲ್ಲ. ಏಕೆಂದರೆ ಇದು ನನ್ನ ಮನೆ. 

3. “ಲೀಡರ್‌’ನಲ್ಲಿ ನಿಮಗೇನು ಇಷ್ಟವಾಯಿತು?
– ಮುಖ್ಯವಾಗಿ ಕತೆ ತುಂಬಾ ಚೆನ್ನಾಗಿದೆ. ದೇಶಪ್ರೇಮದೊಂದಿಗೆ ಸಾಗುವ ಕಥೆ. ಅಲ್ಲಿ ನನ್ನ ಪಾತ್ರ ಕೂಡಾ ಭಿನ್ನವಾಗಿದೆ. ನಾನು ಈವರೆಗೆ ಇಂತಹ ಪಾತ್ರ ಮಾಡಿಲ್ಲ. ತುಂಬಾ ಸೆನ್ಸಿಟಿವ್‌ ಆದ ಪಾತ್ರ. ಜೊತೆಗೆ ಸಂದರ್ಭಕ್ಕೆ ತಕ್ಕಂತ ಸ್ಟ್ರಾಂಗ್‌ ಆಗುವ ಪಾತ್ರ. ಶಿವರಾಜಕುಮಾರ್‌ ಅವರ ಹೋರಾಟದಲ್ಲಿ ಅವರಿಗೆ ಸಾಥ್‌ ನೀಡುವಂತಹ ಪಾತ್ರ. ಕಥೆ, ಪಾತ್ರದ ಜೊತೆಗೆ ಇಡೀ ತಂಡ ಕೂಡಾ ಇಷ್ಟವಾಯಿತು. ಶಿವರಾಜಕುಮಾರ್‌ ಅವರ ಎನರ್ಜಿಗೆ ಈಗ ನಾನು ಮ್ಯಾಚ್‌ ಮಾಡಿಕೊಳ್ಳಬೇಕು. ಏಕೆಂದರೆ ಅವರು ಡ್ಯಾನ್ಸ್‌ ಸೇರಿದಂತೆ ಎಲ್ಲದರಲ್ಲೂ ಅದ್ಭುತ ಎನರ್ಜಿ ಇರೋದು ಗೊತ್ತೇ ಇದೆ.

4. ಕನ್ನಡದಲ್ಲಿ ಸ್ಟಾರ್‌ ನಟರ ಚಿತ್ರಗಳಲ್ಲೇ ಹೆಚ್ಚಾಗಿ ನಟಿಸುತ್ತಿರುವ ನೀವು ತೆಲುಗಿನಲ್ಲೂ ಸ್ಟಾರ್‌ಗಳ ಸಿನಿಮಾದಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದೀರಿ?
– ಅದಕ್ಕೆ ನಾನು ಹೇಗೆ ಉತ್ತರಿಸಲಿ ಹೇಳಿ. ಸ್ಟಾರ್‌ಗಳ ಸಿನಿಮಾದಿಂದ ಅವಕಾಶ ಬರುತ್ತದೆ. ಪಾತ್ರ ಇಷ್ಟವಾದರೆ ಒಪ್ಪಿಕೊಳ್ಳುತ್ತೇನೆ. ಪರಭಾಷೆಯಲ್ಲೂ ಜೂ.ಎನ್‌ಟಿಆರ್‌, ಪವನ್‌ ಕಲ್ಯಾಣ್‌, ಮಹೇಶ್‌ ಬಾಬು, ಸೂರ್ಯ ಸೇರಿದಂತೆ ಅನೇಕ ಸ್ಟಾರ್‌ ನಟರ ಸಿನಿಮಾಗಳಲ್ಲಿ ಅವಕಾಶ ಸಿಕ್ಕಿತು. ಆ ಬಗ್ಗೆ ಖುಷಿ ಇದೆ. ಏಕೆಂದರೆ ಎಲ್ಲರಿಗೂ ಇಂತಹ ಅವಕಾಶ ಸಿಗುವುದಿಲ್ಲ. ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುತ್ತಿದ್ದೇನೆ ಅಷ್ಟೇ. ಹಾಗಂತ ನನಗೆ ಸ್ಟಾರ್‌ ಸಿನಿಮಾಗಳೇ ಆಗಬೇಕೆಂದಿಲ್ಲ. ಮೊದಲೇ ಹೇಳಿದಂತೆ ಕಥೆ, ಪಾತ್ರ ಇಷ್ಟವಾದರೆ ಮಾಡುತ್ತೇನೆ. 

5. ತಮಿಳು, ತೆಲುಗು ಚಿತ್ರರಂಗ ತುಂಬಾ ಓಡಾಡುತ್ತಿರೋ ನಿಮಗೆ ಆ ಭಾಷೆ ಬರುತ್ತಾ?
– ಆರಂಭದಲ್ಲಿ ಸ್ವಲ್ಪ ಕಷ್ಟವಾಗುತ್ತಿತ್ತು. ಆದರೆ ಈಗ ಕಲಿತಿದ್ದೇನೆ. ಮ್ಯಾನೇಜ್‌ ಮಾಡುವಷ್ಟು ಬರುತ್ತದೆ. ಮುಖ್ಯವಾಗಿ ಚಿತ್ರರಂಗದಲ್ಲಿ ಭಾಷೆಗಿಂತ ನಮ್ಮ ಅಪ್ರೋಚ್‌ ಮುಖ್ಯ. ಅವರ ಕಲ್ಪನೆ ನಮಗೆ ಅರ್ಥವಾದರೆ ಸಾಕು. 

Advertisement

6. ಕನ್ನಡ, ತಮಿಳು, ತೆಲುಗು ಚಿತ್ರರಂಗದಲ್ಲಿ ಯಾವುದು ನಿಮಗೆ ಕಂಫ‌ರ್ಟ್‌?
– ಅಪ್‌ಕೋರ್ಸ್‌ ಕನ್ನಡ. ನಾವು ಬೇರೆ ಭಾಷೆಯಲ್ಲಿ ಎಷ್ಟೇ ಸಿನಿಮಾ ಮಾಡಬಹುದು ಅಥವಾ ಬೆಳೆಯಬಹುದು, ಆದರೆ ಹೋಮ್ಲಿ ಫೀಲಿಂಗ್‌ ಬರೋದು ನಮ್ಮೂರಲ್ಲೇ. ಹಾಗಾಗಿ ನನಗೆ ಕನ್ನಡ ಚಿತ್ರರಂಗವೇ ಇಷ್ಟ. ಬೇರೆ ಚಿತ್ರರಂಗದಲ್ಲಾದರೆ ನಾವು ಎಲ್ಲೋ ಬೇರೆ ಕಡೆ, ಬೇರೆಯವರ ಜಾಗದಲ್ಲಿದ್ದೇವೆ ಎಂಬ ಭಾವನೆ ಬರುತ್ತದೆ. ಆದರೆ, ಇಲ್ಲಿ ಹಾಗಲ್ಲ, ಎಲ್ಲಾ ನಮ್ಮವರು. ಇಲ್ಲಿ ಯಾವುದೇ ಒಂದು ಸೆಟ್‌ಗೆ ಹೋದರೂ ಎಲ್ಲರನ್ನು ಮಾತನಾಡಿಸಲು ತುಂಬಾ ಹೊತ್ತು ಬೇಕಾಗುತ್ತದೆ. ಏಕೆಂದರೆ ಆ ಆತ್ಮೀಯತೆ ಇದೆ. ನನ್ನ ಮೊದಲ ಆದ್ಯತೆ ಕನ್ನಡ. 

7. ನಿಮಗೆ ಪರಭಾಷೆಯಲ್ಲಿ ಯಾವ ತರಹದ ಪಾತ್ರ ಸಿಗುತ್ತಿದೆ?
– ಇಲ್ಲಿಗೆ ಹೋಲಿಸಿದರೆ ಅಲ್ಲಿನ ಪಾತ್ರ ಬೇರೆ ರೀತಿ ಇರುತ್ತದೆ. ಔಟ್‌ ಅಂಡ್‌ ಔಟ್‌ ಮಾಸ್‌ ಅಂಡ್‌ ಕಮರ್ಷಿಯಲ್‌. ಜೊತೆಗೆ ಮಸಾಲಾ ಜಾಸ್ತಿ. ಕಲರ್‌ಫ‌ುಲ್‌ ಹಾಡು, ಡ್ಯಾನ್ಸ್‌ ಎಲ್ಲವೂ ಇರುತ್ತದೆ. ನನಗೆ ಹೋಮ್ಲಿಯಿಂದ ಗ್ಲಾಮರಸ್‌ ಪಾತ್ರಗಳು ಕೂಡಾ ಸಿಗುತ್ತಿವೆ. 

8. ಅಲ್ಲಿ ಪಾತ್ರಗಳನ್ನು ನೀವು ಆಯ್ಕೆ ಮಾಡುತ್ತೀರಾ ಅಥವಾ ನಿರ್ದೇಶಕರ ಆಯ್ಕೆಗೆ ಓಕೆ ಅಂತೀರಾ?
– ಈಗಷ್ಟೇ ಪರಭಾಷೆಗೆ ಹೋಗಿದ್ದೇನೆ. ಸಹಜವಾಗಿಯೇ ನಿರ್ದೇಶಕರಿಗೆ ಒಂದು ಕಲ್ಪನೆ ಇರುತ್ತದೆ. ಹಾಗಾಗಿ ನನಗೆ ಇಷ್ಟವಾದ ಪಾತ್ರಗಳನ್ನು ನಿರ್ದೇಶಕರು ಹೇಳಿದರೆ ಒಪ್ಪುತ್ತೇನೆ. ನಾವೇ ಪಾತ್ರವನ್ನು ಆಯ್ಕೆ ಮಾಡೋದಾಗಿದ್ದರೆ ಸಂಜಯ್‌ ಲೀಲಾ ಬನ್ಸಾಲಿ ತರಹದ ನಿರ್ದೇಶಕರ ಸಿನಿಮಾ ಬಯಸುತ್ತಿದ್ದೆವು. 

9. ಬೇರೆ ಬೇರೆ ಚಿತ್ರರಂಗದಲ್ಲಿ ಓಡಾಡಿಕೊಂಡಿರುವ ನಿಮ್ಮ ಆ ಅನುಭವ ಹೇಗಿರುತ್ತದೆ?
– ಪ್ರತಿ ಚಿತ್ರರಂಗದಲ್ಲೂ ಹೊಸ ಹೊಸ ಜನರ ಜೊತೆ ಕೆಲಸ ಮಾಡುವ ಅವಕಾಶ ಸಿಗುತ್ತದೆ. ಸಹಜವಾಗಿಯೇ ಆಗ ಹೊಸತನ ನೋಡುವ, ಹೊಸದನ್ನು ಕಲಿಯುವ ಅವಕಾಶ ಕೂಡಾ ಸಿಗುತ್ತದೆ. ಆ ವಿಷಯದಲ್ಲಿ ನಾನು ಲಕ್ಕಿ. 

10. ತೆಲುಗಿನಲ್ಲಿ ಬಿಝಿಯಾಗಿರುವ ನೀವು ಅಲ್ಲೇ ಸೆಟ್ಲ ಆಗಿದ್ದೀರಾ?
– ಇಲ್ಲ, ನಾನು ಫ್ಯಾಮಿಲಿ ಬಿಟ್ಟು ಇರಲ್ಲ. ಇಲ್ಲೇ ಬೆಂಗಳೂರಲ್ಲೇ ಇದ್ದೇನೆ. ನನಗೆ ಅಪ್ಪ-ಅಮ್ಮನ ಜೊತೆ ಇರೋದೇ ಖುಷಿ.

11. ನಿಮ್ಮ ಈ ಬೆಳವಣಿಗೆ ನೋಡಿ ಅಪ್ಪ-ಅಮ್ಮ ಏನನ್ನಾಗುತ್ತಾರೆ?
– ಈಗ ಖುಷಿ ಇದೆ. ಆರಂಭದಲ್ಲಿ ಅವರಿಗೆ ಯಾಕಾಗಿ ಚಿತ್ರರಂಗ ಬೇಕು, ಅದರಿಂದ ಏನಾಗುತ್ತದೆ ಎಂಬ ಪ್ರಶ್ನೆ ಇತ್ತು. ನಾನು ಚಿತ್ರರಂಗಕ್ಕೆ ಬಂದು ಎರಡು ವರ್ಷವಾದರೂ ಅವರಿಗೆ ಆ ತರಹದ ಪ್ರಶ್ನೆ ಕಾಡುತಿತ್ತು. ಏಕೆಂದರೆ ಅವರು ಡಾಕ್ಟರ್. ಈ ಕ್ಷೇತ್ರ ಹೊಸದು. ಆದರೆ ಈಗ ಖುಷಿಯಾಗಿದ್ದಾರೆ. ಬೇರೆ ಬೇರೆ ಭಾಷೆಗಳಲ್ಲಿ ಸಿನಿಮಾ ಮಾಡುತ್ತಿರುವ ಬಗ್ಗೆ ಅವರಿಗೂ ಖುಷಿ ಇದೆ. 

12. ನಿಮ್ಮ ಮುಂದಿನ ಟಾಗೇìಟ್‌ ಬಾಲಿವುಡ್‌?
– ಗೊತ್ತಿಲ್ಲ. ಸದ್ಯ ಕನ್ನಡ, ತೆಲುಗು, ತಮಿಳಿನಲ್ಲಿ ಸಿನಿಮಾ ಮಾಡುತ್ತಿದ್ದೇನೆ. ಬಾಲಿವುಡ್‌ಗೆ ಹೋಗಬೇಕಾದರೆ ಮುಂಬೈಗೆ ಹೋಗಿ ಮನೆ ಮಾಡಿ ಅವಕಾಶಕ್ಕೆ ಓಡಾಡಬೇಕು. ಸದ್ಯ ಅಂತಹ ಯೋಚನೆ ಏನಿಲ್ಲ. ಅಲ್ಲಿಂದ ಆಫ‌ರ್‌ ಬಂದರೆ ನೋಡೋಣ.

ಬರಹ: ರವಿಪ್ರಕಾಶ್‌ ರೈ; ಚಿತ್ರಗಳು: ಮನು ಮತ್ತು ಸಂಗ್ರಹ

Advertisement

Udayavani is now on Telegram. Click here to join our channel and stay updated with the latest news.

Next