ಕನ್ನಡ ಚಿತ್ರರಂಗ ಮತ್ತೆ ಚೇತರಿಕೆಯ ಹಾದಿಯಲ್ಲಿದೆ. ಅದಕ್ಕೆ ಸಾಕ್ಷಿ ಎಂಬಂತೆ ಈಗ ಪ್ರತಿವಾರ ಸಾಲು ಸಾಲು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಬಿಡುಗಡೆಯಾದ ಸಿನಿಮಾಗಳನ್ನು ಪ್ರೇಕ್ಷಕ ಕೂಡಾ ಕಣ್ತುಂಬಿಕೊಳ್ಳುವ ಮೂಲಕ ಚಿತ್ರರಂಗವನ್ನು ಪ್ರೋತ್ಸಾಹಿಸುತ್ತಿದ್ದಾನೆ. ಪರಿಣಾಮವಾಗಿ ಸಿನಿಮಾ ಮಂದಿ ಮೊಗದಲ್ಲಿ ನಗು ಮೂಡಿದೆ. ತುಂಬಾ ದಿನಗಳಿಂದ “ಸಕ್ಸಸ್ ಮೀಟ್’ ಕಾಣದ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸಕ್ಸಸ್ ಮೀಟ್‌ಗಳು ನಡೆಯುತ್ತಿವೆ. ಇತ್ತೀಚೆಗೆ ತೆರೆಕಂಡ “ಲಂಕ ಕಾಗೆಮೊಟ್ಟೆ’, “ಗ್ರೂಫಿ’ ಚಿತ್ರಗಳು ಸಿನಿಮಾಕ್ಕೆ ಪ್ರೇಕ್ಷಕರು ತೋರಿದ ಬೆಂಬಲವನ್ನು ನೆನೆಯುತ್ತಾ ಸಕ್ಸಸ್ ಮೀಟ್ ಮಾಡಿವೆ. ಇದು ಮುಂದಕ್ಕೆ ಸಿನಿಮಾ ಬಿಡುಗಡೆ ಮಾಡುವವರಿಗೆ ಮತ್ತಷ್ಟು ಪ್ರೋತ್ಸಾಹ ಹಾಗೂ ಧೈರ್ಯ ನೀಡುತ್ತಿರೋದು ಸುಳ್ಳಲ್ಲ.
ಒಂದು ಸಿನಿಮಾ ಗೆದ್ದರೆ ಹತ್ತು ಮಂದಿ ನಿರ್ಮಾಪಕರಿಗೆ ಸಿನಿಮಾ ಮಾಡಲು ದೈರ್ಯ ಬರುತ್ತದೆ. ಇದರಿಂದ ಇಡೀ ಚಿತ್ರರಂಗದಲಿ ಚೇತರಿಕೆಯ ವಾತಾವರಣ ನಿರ್ಮಾಣವಾಗುತ್ತದೆ. ಸದ್ಯ ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಮಂದಿಯ ಮೊಗದಲ್ಲಿ ನಿಧಾನವಾಗಿ ನಗು ಮೂಡುತ್ತಿದೆ.
ಸ್ಟಾರ್‌ಗಳ ಸಿನಿಮಾಗಳಿಗೆ ಹೇಗೋ ಜನ ಬರುತ್ತಾರೆ, ಅವರ ಅಭಿಮಾನಿ ವರ್ಗ ಸಿನಿಮಾಕ್ಕೆ ಒಳ್ಳೆಯ ಓಪನಿಂಗ್ ಕೊಡಿಸುತ್ತದೆ ಎಂಬ ಭರವಸೆ ಇರುತ್ತದೆ. ಆದರೆ, ಹೊಸಬರು ಆರಂಭ ದಿಂದಲೂ ತಮ್ಮ ಕಂಟೆಂಟ್ ಮೂಲಕವೇ ಪ್ರೇಕ್ಷಕರನ್ನು ಸೆಳೆಯಬೇಕು. ಹಾಗೆ ನೋಡಿದರೆ ಈ ಬಾರಿ ಬಿಡುಗಡೆಯಾದ ಹೊಸಬರ ಚಿತ್ರಗಳಾದ “ಗ್ರೂμ’, “ಕಾಗೆ ಮೊಟ್ಟೆ’ ಚಿತ್ರಗಳು ಪ್ರೇಕ್ಷಕರ ಮೆಚ್ಚುಗೆ ಗಳಿಸಿವೆ. ಈ ಮೂಲಕ ಚಿತ್ರತಂಡದ ಮೊಗದಲ್ಲೂ ನಗು ಮೂಡಿಸಿವೆ. ಆ ಖುಷಿಯನ್ನು ಚಿತ್ರತಂಡಗಳು ಕೂಡಾ ಮಾಧ್ಯಮ ಮುಂದೆ ಹಂಚಿಕೊಂಡಿವೆ.
ಸಕ್ಸಸ್ ಹೆಚ್ಚಾಗುತ್ತಿದ್ದಂತೆ ಮುಂದೆ ಕನ್ನಡ ಚಿತ್ರರಂಗದ ಸಕ್ಸಸ್ ರೇಟ್ ಕೂಡಾ ಜಾಸ್ತಿಯಾಗಲಿದೆ. ಮುಂದಿನ ವಾರ ಎರಡು ಸ್ಟಾರ್ ಸಿನಿಮಾಗಳು ಬಿಡುಗಡೆಯಾಗುವ ಮೂಲಕ ಚಿತ್ರರಂಗದ ಕಲರ್ ಕೂಡಾ ಬದಲಾಗಲಿದ್ದು, ಮತ್ತಷ್ಟು ಹುರುಪು ನೀಡಲಿದೆ. ಒಂದು ಸಿನಿಮಾದ ಸಕ್ಸಸ್ ಕೇವಲ ಸಿನಿಮಾ ರಂಗಕ್ಕಷ್ಟೇ ಹುರುಪು ನೀಡುವುದಿಲ್ಲ. ಬದಲಾಗಿ ಸಿನಿಮಾ ಪ್ರೇಕ್ಷಕರಲ್ಲೂ ಚಿತ್ರರಂಗದ ಬಗ್ಗೆ ಒಂದು ಕುತೂಹಲ ಹುಟ್ಟುವಂತೆ ಮಾಡುತ್ತದೆ.
ಪ್ರೀ ರಿಲೀಸ್ ಇವೆಂಟ್ ಶುರು
ಚಿತ್ರತಂಡಗಳು ಮತ್ತೆ ಪ್ರೀ ರಿಲೀಸ್ ಇವೆಂಟ್ ಮೂಲಕ ಪ್ರೇಕ್ಷಕರನ್ನು ತನ್ನತ್ತ ಸೆಳೆಯಲು ಶುರು ಮಾಡಿವೆ. ಕಳೆದ ಬಾರಿ ಅದು “ಪೊಗರು’ ಹಾಗೂ “ರಾಬರ್ಟ್’ ಚಿತ್ರಗಳು ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಮಾಡಿದ್ದವು. ಧ್ರುವ ಸರ್ಜಾ ನಟನೆಯ “ಪೊಗರು’ ಚಿತ್ರ ಬಿಡುಗಡೆಗೆ ಮೊದಲು ದಾವಣಗೆರೆಯಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಿ, ಆ ಮೂಲಕ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಸೇರಿಸಿತ್ತು. ಇನ್ನು ದರ್ಶನ್ ನಟನೆಯ “ರಾಬರ್ಟ್’ ಚಿತ್ರ ಕೂಡಾ ಪ್ರೀ ರಿಲೀಸ್ ಇವೆಂಟ್ ಮೂಲಕ ಅಭಿಮಾನಿಗಳನ್ನು ಸೆಳೆದಿದ್ದು ಸುಳ್ಳಲ್ಲ. ಮೊದಲು ಹೈದರಾಬಾದ್‌ನಲ್ಲಿ ಕಾರ್ಯಕ್ರಮ ಮಾಡಿ, ತೆಲುಗು ಪ್ರೇಕ್ಷಕರ ಮನಗೆದ್ದ “ರಾಬರ್ಟ್’ ತಂಡ ಬಳಿಕ ಹುಬ್ಬಳ್ಳಿಯಲ್ಲಿ ಅದ್ಧೂರಿ ಕಾರ್ಯಕ್ರಮ ಮಾಡಿತ್ತು. ಈಗ “ಸಲಗ’, “ಕೋಟಿಗೊಬ್ಬ-3′ ಹಾಗೂ “ಭಜರಂಗಿ-2′ ಚಿತ್ರಗಳು ಇವೆಂಟ್ ಪ್ಲ್ರಾನ್ ಮಾಡಿಕೊಳ್ಳುತ್ತಿವೆ. ಈ ಮೂಲಕ ದೊಡ್ಡ ಮಟ್ಟದಲ್ಲಿ ಸಿನಿಮಾ ಪ್ರಚಾರ ಮಾಡುತ್ತಿವೆ
ರವಿಪ್ರಕಾಶ್ ರೈ