Advertisement

ಕೋವಿಡ್‌ ನೆಗೆಟಿವ್‌: ಪಾಸಿಟಿವ್‌ ಮೂಡ್‌ ನಲ್ಲಿ ಸಿನಿಮಾ ರಂಗ

12:42 PM Sep 24, 2021 | Team Udayavani |

ಹಬ್ಬಗಳ ಸೀಸನ್‌ ಬಂದಾಗಿದೆ, ನಿಧಾನವಾಗಿ ಕೋವಿಡ್‌ ಇಳಿಕೆಯಾಗುತ್ತಿದೆ, ಸ್ಟಾರ್‌ ಸಿನಿಮಾಗಳು ಬಿಡುಗಡೆಗೆ ರೆಡಿಯಾಗುತ್ತಿವೆ, ಸ್ಟಾರ್‌ ಡೈರೆಕ್ಟರ್‌ಗಳು ತಮ್ಮ ಹೊಸ ಸಿನಿಮಾಗಳ ಟೈಟಲ್‌ ಲಾಂಚ್‌ ಮಾಡುತ್ತಿದ್ದಾರೆ…. ಇವೆಲ್ಲದರ ಒಟ್ಟು ಪರಿಣಾಮ ಕನ್ನಡ ಚಿತ್ರರಂಗದಲ್ಲಿ ಪಾಸಿಟಿವ್‌ ಫೀಲಿಂಗ್‌.

Advertisement

ಹೌದು, ಕೋವಿಡ್‌ ನೆಗೆಟಿವ್‌ ಹೆಚ್ಚಾಗುತ್ತಿದ್ದಂತೆ ಕನ್ನಡ ಚಿತ್ರರಂಗದಲ್ಲಿ ಪಾಸಿಟಿವ್‌ ಫೀಲಿಂಗ್‌ ಹೆಚ್ಚಾಗುತ್ತಿದೆ. ಚಿತ್ರರಂಗದ ಪ್ರತಿಯೊಂದು ವಿಭಾಗ ಕೂಡಾ ಮತ್ತೆ ಹಳೆಯ ಜೋಶ್‌ನೊಂದಿಗೆ ಮುನ್ನುಗ್ಗಲು ರೆಡಿಯಾಗಿವೆ. ಇದಕ್ಕೆ ಮುಖ್ಯಕಾರಣ, ಚಿತ್ರಮಂದಿರಗಳಿಗೆ ಶೀಘ್ರದಲ್ಲಿ ಪೂರ್ಣ ಪ್ರವೇಶಾತಿ ನೀಡುವ ನಿರೀಕ್ಷೆ. ಈ ಒಂದು ನಿರೀಕ್ಷೆ ಕನ್ನಡ ಚಿತ್ರರಂಗದಲ್ಲಿ ಟಾನಿಕ್‌ನಂತೆ ಕೆಲಸ ಮಾಡಲಾರಂಭಿಸಿದೆ.

ಈಗಾಗಲೇ ಸಿನಿಮಾಗಳ ಚಿತ್ರೀಕರಣಕ್ಕೆ ಅನುಮತಿ ಸಿಕ್ಕಿದೆಯಾದರೂ ಚಿತ್ರಮಂದಿರಗಳಿಗೆ ಪೂರ್ಣ ಪ್ರವೇಶಾತಿ ಇಲ್ಲದ ಕಾರಣ, ಎಲ್ಲವೂ ಇದ್ದು, ಏನೋ ಕೊರತೆಯಂತೆ ಸಿನಿಮಾ ಮಂದಿಯಲ್ಲೊಂದು ಕೊರಗಿತ್ತು. ಆದರೆ, ಈಗ ಸರ್ಕಾರ ಶೀಘ್ರದಲ್ಲಿ ಕನ್ನಡ ಚಿತ್ರರಂಗಕ್ಕೆ ಗುಡ್‌ನ್ಯೂಸ್‌ ನೀಡುವುದಾಗಿ ಹೇಳಿದೆ. ಈಗಾಗಲೇ ಶೇ 50 ಪ್ರವೇಶಾತಿಯಲ್ಲಿ ಒಂದಷ್ಟು ಹೊಸಬರ ಸಿನಿಮಾಗಳು ಬಿಡುಗಡೆಯಾದರೂ ಕನ್ನಡ ಚಿತ್ರರಂಗ ಇನ್ನೂ ರಂಗೇರಿಲ್ಲ. ಚಿತ್ರರಂಗದಲ್ಲಿ ನಿಜವಾದ ಸಂಭ್ರಮ ಕಾಣಬೇಕಾದರೆ ಸ್ಟಾರ್‌ ಸಿನಿಮಾಗಳು ಅದ್ಧೂರಿಯಾಗಿ ಬಿಡುಗಡೆಯಾಗಬೇಕು. ಅಭಿಮಾನಿಗಳ ಜೈಕಾರ, ಚಿತ್ರಮಂದಿರ ಮುಂದೆ, ಕಟೌಟ್‌, ಪಟಾಕಿಯ ಸದ್ದು ಕೇಳಿದಾಗಲೇ ಚಿತ್ರಪ್ರೇಮಿಗಳಿಗೆ ಸಂಭ್ರಮ.

ಪೂರ್ವ ತಯಾರಿ ಜೋರು:  ಅಕ್ಟೋಬರ್‌ನಿಂದ ಸಿನಿಮಾ ಮಂದಿರಗಳು ಪೂರ್ಣ ಪ್ರಮಾಣದಲ್ಲಿ ತೆರೆಯುವ ನಿರೀಕ್ಷೆ ಇರುವುದರಿಂದ ಸಿನಿಮಾ ತಂಡಗಳು ಕೂಡಾ ತಮ ಬಿಡುಗಡೆಯ ಕುರಿತು ಪ್ಲ್ರಾನ್‌ ಮಾಡಿಕೊಳ್ಳುತ್ತಿದೆ. ಮುಖ್ಯವಾಗಿ ಸ್ಟಾರ್‌ ಸಿನಿಮಾಗಳ ನಿರ್ಮಾಪಕರು ಈಗಾಗಲೇ ಸಭೆ ಸೇರಿ ಚರ್ಚಿಸಲಾರಂಭಿಸಿದ್ದಾರೆ. ಏಕೆಂದರೆ ಇವರೆಲ್ಲರೂ ಸಿನಿಮಾ ರೆಡಿ ಮಾಡಿಟ್ಟುಕೊಂಡು ಕಳೆದ ಒಂದೂವರೆ ವರ್ಷದಿಂದ ಕಾಯುತ್ತಲೇ ಇದ್ದಾರೆ. ಜೊತೆಗೆ ಕೋಟಿಗಟ್ಟಲೇ ಬಂಡವಾಳ ಕೂಡಾ ಹೂಡಿದ್ದಾರೆ. ಆ ಬಂಡವಾಳ ವಾಪಾಸ್‌ ಬರಬೇಕಾದರೆ ಸಿನಿಮಾ ರಿಲೀಸ್‌ ಆಗಿ ಹಿಟ್‌ ಆಗಲೇಬೇಕು. ಅದೇ ಕಾರಣದಿಂದ ಸ್ಟಾರ್‌ ಸಿನಿಮಾಗಳ ನಿರ್ಮಾಪಕರು ಈಗ ತಮ್ಮ ಸಿನಿಮಾಗಳ ಪ್ರಮೋಶನ್‌ ಜೊತೆಗೆ ಚಿತ್ರ ಬಿಡುಗಡೆ ಕುರಿತು ಚರ್ಚಿಸುತ್ತಿದ್ದಾರೆ. ಮೂರ್‍ನಾಲ್ಕು ಸ್ಟಾರ್‌ ಸಿನಿಮಾಗಳಂತೂ ಪೂರ್ಣ ಪ್ರವೇಶಾತಿ ಸಿಕ್ಕ ಬೆನ್ನಿಗೆ ಬಿಡುಗಡೆಯಾಗಲಿದೆ.

ಇದನ್ನೂ ಓದಿ:‘ಸುಕನ್ಯ ದ್ವೀಪ’ದಲ್ಲಿ ಫ್ಯಾಮಿಲಿ ಡ್ರಾಮಾ

Advertisement

“ಕೋಟಿಗೊಬ್ಬ-3′, “ಭಜರಂಗಿ-2′ ಹಾಗೂ “ಸಲಗ’ ಚಿತ್ರಗಳು ಮೊದಲ ಹಂತವಾಗಿ ಬಿಡುಗಡೆಯಾಗಲಿದೆ. ಹಾಗಾದರೆ ಯಾವ ಸಿನಿಮಾ ಮೊದಲು ಬಿಡುಗಡೆ ಯಾಗುತ್ತದೆ ಎಂಬ ಪ್ರಶ್ನೆ ಸಹಜ. ಈ ಪ್ರಶ್ನೆಗೆ ಈಗಲೇ ಉತ್ತರಿಸೋದು ಕಷ್ಟ. ಏಕೆಂದರೆ ಯಾವ ಸ್ಟಾರ್‌ ಸಿನಿಮಾಗಳು ಕೂಡಾ ಡೇಟ್‌ ಅನೌನ್ಸ್‌ ಮಾಡಿಲ್ಲ.

ಈ ಬಗ್ಗೆ ಮಾತನಾಡುವ “ಕೋಟಿಗೊಬ್ಬ-3′ ನಿರ್ಮಾಪಕ ಸೂರಪ್ಪ ಬಾಬು, “ನಾನು ರಿಲೀಸ್‌ ಡೇಟ್‌ ಬಗ್ಗೆ ಈಗಲೇ ಹೇಳ್ಳೋದು ಕಷ್ಟ. ಚಿತ್ರಮಂದಿರ ಪೂರ್ಣ ಪ್ರವೇಶದ ಕುರಿತು ಸರ್ಕಾರ ಅನುಮತಿ ನೀಡದೇ ನಾವು ಈಗಲೇ ಹೇಳಿದರೆ ತಪ್ಪಾದೀತು. ಅನುಮತಿ ಸಿಕ್ಕ ಕೂಡಲೇ ನಾವು ಮೂವರು ನಿರ್ಮಾಪಕರು ಜೊತೆಯಾಗಿ ಬಂದು ನಮ್ಮ ಸಿನಿಮಾಗಳ ಡೇಟ್‌ ಅನೌನ್ಸ್‌ ಮಾಡುತ್ತೇವೆ. ಈ ಬಾರಿಯೂ ಯಾವುದೇ ಗೊಂದಲವಿಲ್ಲ ದಂತೆ ಪ್ಲ್ರಾನ್‌ ಮಾಡಿಕೊಳ್ಳುತ್ತಿದ್ದೇವೆ’ ಎನ್ನುತ್ತಾರೆ. ಅದೇನೇ ಆದರೂ ಅಕ್ಟೋಬರ್‌ನಿಂದ ಸ್ಟಾರ್‌ ಅಭಿಮಾನಿಗಳಿಗೆ ಚಿತ್ರಮಂದಿರದಲ್ಲಿ ಶಿಳ್ಳೆ, ಜೈಕಾರ ಹಾಕುವ ಅವಕಾಶ ಸಿಗೋದು ಬಹುತೇಕ ಪಕ್ಕಾ.

ಟೈಟಲ್‌, ಪೋಸ್ಟರ್‌ ತಂದ ಸಂಭ್ರಮ:  ಒಂದು ಕಡೆ ಸಿನಿಮಾ ಬಿಡುಗಡೆ ಕುರಿತಾದ ಸಂಭ್ರಮವಾದರೆ, ಒಂದಷ್ಟು ಸ್ಟಾರ್‌ ಸಿನಿಮಾಗಳ ಟೈಟಲ್‌, ಫ‌ಸ್ಟ್‌ಲುಕ್‌, ಮೋಶನ್‌ ಪೋಸ್ಟರಗಳು ಸದ್ದು ಮಾಡುವ ಮೂಲಕ ಚಿತ್ರರಂಗವನ್ನು ಚಟುವಟಿಕೆ ಯಲ್ಲಿಟ್ಟಿವೆ. ಮುಖ್ಯವಾಗಿ ಉಪೇಂದ್ರ ನಿರ್ದೇಶನದ ಹೊಸ ಚಿತ್ರದ ಟೈಟಲ್‌ ಲಾಂಚ್‌ ಆಗಿರೋದು ಕೂಡಾ ಚಿತ್ರರಂಗದಲ್ಲಿ ಪಾಸಿಟಿವ್‌ ಫೀಲಿಂಗ್‌ ಹೆಚ್ಚಾಗಲು ಕಾರಣ. ಏಕೆಂದರೆ ಉಪೇಂದ್ರ ನಿರ್ದೇಶನ ಮಾಡದೇ ತುಂಬಾ ಗ್ಯಾಪ್‌ ಆಗಿತ್ತು. ಈಗ ಮತ್ತೆ ನಿರ್ದೇಶನಕ್ಕೆ ಮರಳುತ್ತಿರುವುದರಿಂದ ಅಭಿಮಾನಿಗಳು ಖುಷಿಯಾಗಿದ್ದಾರೆ. ಜೊತೆಗೆ ಹೊಂಬಾಳೆ ಸೇರಿದಂತೆ ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಸತತವಾಗಿ ಸಿನಿಮಾ ಅನೌನ್ಸ್‌ ಮಾಡುತ್ತಿವೆ. ಇದೆಲ್ಲದರ ಪರಿಣಾಮ ಕನ್ನಡ ಚಿತ್ರರಂಗ ಮತ್ತೆ ಬ್ಯಾಕ್‌ ಟು ನಾರ್ಮಲ್‌.

ರವಿಪ್ರಕಾಶ್ ರೈ

Advertisement

Udayavani is now on Telegram. Click here to join our channel and stay updated with the latest news.

Next