ಟಗರು ಚಿತ್ರ ನೋಡಿದವರಿಗೆ ಅಲ್ಲಿನ ಡಾಲಿ ಪಾತ್ರದ ಜೊತೆಗೆ ಚಿಟ್ಟೆ ಪಾತ್ರ ಕೂಡಾ ಇಷ್ಟವಾಗಿರುತ್ತದೆ. ಚಿಟ್ಟೆ ಪಾತ್ರ ಮಾಡಿರುವ ವಸಿಷ್ಠ ಸಿಂಹ ಅವರಿಗೆ ಸಿನಿಮಾ ನೋಡಿದವರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆಯಂತೆ. ಸಿನಿಮಾಗಳಲ್ಲಿ ಬಿಝಿಯಾಗಿರುವ ವಸಿಷ್ಠ ತಮ್ಮ ಇಷ್ಟದ ಕೆಲಸವನ್ನು ಬಿಟ್ಟಿಲ್ಲ. ಅದು ಗಾಯನ. ವಸಿಷ್ಠಗೆ ಗಾಯನ ಎಂದರೆ ತುಂಬಾ ಇಷ್ಟವಂತೆ. ಚಿತ್ರರಂಗಕ್ಕೆ ಗಾಯಕರಾಗಬೇಕೆಂಬ ಕನಸಿನೊಂದಿಗೆ ಬಂದ ವಸಿಷ್ಠ ನಟರಾಗಿದ್ದಾರೆ. ಇಂತಿಪ್ಪ ವಸಿಷ್ಠ ಈಗಾಗಲೇ ಅನೇಕ ಸಿನಿಮಾಗಳಿಗೆ ಹಾಡಿದ್ದಾರೆ. “ಕಿರಿಕ್ ಪಾರ್ಟಿ’ ಚಿತ್ರದ “ನೀಚ ಸುಳ್ಳು ಸುತ್ತೋ ನಾಲಿಗೆ’ ಹಾಡನ್ನು ಹಾಡುವ ಮೂಲಕ ಗಾಯಕರಾಗಿ ಎಂಟ್ರಿಕೊಟ್ಟವರು ವಸಿಷ್ಠ.
ಈಗ ಆ ಚಿತ್ರ ತೆಲುಗಿಗೆ ರೀಮೇಕ್ ಆಗುತ್ತಿದೆ. “ಕಿರಿಕ್ ಪಾರ್ಟಿ’ ಎಂಬ ಹೆಸರಿನಲ್ಲಿ ಚಿತ್ರ ತಯಾರಾಗಿದ್ದು, ಈ ಚಿತ್ರದ ಮೂಲಕ ವಸಿಷ್ಠ ಕೂಡಾ ತೆಲುಗಿಗೆ ಹೋಗುತ್ತಿದ್ದಾರೆ. ಅದು ನಾಯಕರಾಗಿ ಅಲ್ಲ, ಗಾಯಕರಾಗಿ. ಹೌದು, ಮೂಲ ಚಿತ್ರದ ಹಾಡನ್ನು ತೆಲುಗಿನಲ್ಲೂ ಬಳಸಿಕೊಳ್ಳುತ್ತಿದ್ದು, ತೆಲುಗು ವರ್ಶನ್‌ಗೂ ವಸಿಷ್ಠ ಸಿಂಹ ಅವರೇ ಹಾಡಿದ್ದಾರೆ. ಈ ಮೂಲಕ ತೆಲುಗಿಗೂ ವಸಿಷ್ಠ ಎಂಟ್ರಿಕೊಟ್ಟಂತಾಗಿದೆ. ತೆಲುಗಿನಲ್ಲಿ ಇದು ಅವರ
ಮೊದಲ ಹಾಡು. “ಕನ್ನಡಕ್ಕೆ ನಾನು ಗಾಯಕನಾಗಬೇಕೆಂದು ಆಸೆ ಪಟ್ಟಿದ್ದೆ. ಆದರೆ ನಟನಾದೆ. ತೆಲುಗಿಗೆ ಆ್ಯಕ್ಟರ್ ಆಗಿ ಹೋಗಬೇಕೆಂದುಕೊಂಡಿದ್ದೆ.
ಆದರೆ ಈಗ ಗಾಯಕನಾಗಿ ಹೋಗುತ್ತಿದ್ದೇನೆ’ ಎನ್ನುತ್ತಾರೆ ವಸಿಷ್ಠ. ತಮ್ಮ ಹಾಡುವ ಹವ್ಯಾಸದ ಬಗ್ಗೆ ಹೇಳುವ ವಸಿಷ್ಠ, “ನಾನು ಹಾಡಿರುವ ಕೆಲವು ಹಾಡುಗಳು ನನಗೆ ಒಳ್ಳೆಯ ಹೆಸರು ತಂದುಕೊಟ್ಟಿವೆ. ಸಾಕಷ್ಟು ಅವಕಾಶಗಳು ಕೂಡಾ ಬರುತ್ತಿವೆ. ಆದರೆ, ನಾನು ಒಪ್ಪುತ್ತಿಲ್ಲ. ನಾನು ನಟನಾಗಿ ದಾರಿ ಕಂಡು ಕೊಂಡಿದ್ದೇನೆ. ಆದರೆ, ಗಾಯಕರಾಗಬೇಕೆಂದು ಸಾಕಷ್ಟು ತಯಾರಿ ಮಾಡಿಕೊಂಡವರು ಇರುತ್ತಾರೆ. ಬಂದ ಅವಕಾಶಗಳನ್ನೆಲ್ಲಾ ನಾವು ಒಪ್ಪಿಕೊಂಡರೇ ಅಂತಹವರು ಅವಕಾಶ ವಂಚಿತರಾಗುತ್ತಾರೆ. ತುಂಬಾ ಇಷ್ಟವಾದರೆ ಮಾತ್ರ ಹಾಡುತ್ತೇನೆ’ ಎನ್ನುತ್ತಾರೆ.
ಸದ್ಯ ವಸಿಷ್ಠ ನಟನೆಯಲ್ಲಿ ಬಿಝಿ. ಇಲ್ಲಿವರೆಗೆ ಅವರು ನಟಿಸಿದ 11 ಸಿನಿಮಾಗಳು ಬಿಡುಗಡೆಯಾಗಿವೆ. ಅವರು ಒಪ್ಪಿಕೊಂಡ ಸಿನಿಮಾಗಳನ್ನು ಸೇರಿಸಿದರೆ ಒಟ್ಟು 24 ಸಿನಿಮಾಗಳಾಗುತ್ತವೆ. ಸದ್ಯ ವಸಿಷ್ಠ “ಕೆಜಿಎಫ್’, “ಮಾಯಾ ಬಜಾರ್’, “ಕವಚ’, “ಗೋಧ್ರಾ’, “8 ಎಂಎಂ’, “ಕಾಲಚಕ್ರ’, “ಯೋಗಿ ದುನಿಯಾ’ ಸೇರಿದಂತೆ ಇನ್ನೂ ಹೆಸರಿಡದ ಚಿತ್ರಗಳಲ್ಲಿ ಬಿಝಿ. ಕೆಲವು ನಿರ್ದೇಶಕರ ಪ್ಲ್ರಾನಿಂಗ್ ಸಮಸ್ಯೆಯಿಂದ ಬೇರೆ ಕೆಲಸಗಳಿಗೆ ತೊಂದರೆಯಾಗುತ್ತದೆ ಎಂಬುದು ವಸಿಷ್ಠ ಮಾತು. ವಸಿಷ್ಠ ಮುಂದಿನ ಸಿನಿಮಾಗಳಿಗೆ ಶೇವ್ ಮಾಡಬೇಕಾಗಿದೆಯಂತೆ. ಆದರೆ, ಈಗಾಗಲೇ ಒಪ್ಪಿಕೊಂಡ ಸಿನಿಮಾಗಳು ಸರಿಯಾದ ಸಮಯಕ್ಕೆ ಮುಗಿಯದ ಕಾರಣ ಅವರು ಶೇವ್ ಮಾಡೋದು ಕೂಡಾ ಮುಂದೆ ಹೋಗಿದೆ.