Advertisement

ಸ್ಕ್ರಿಪ್ಟ್ ಚೆನ್ನಾಗಿದ್ದರೆ ಮಾರ್ಕೆಟ್‌ ಚಿಂತೆ ಬೇಡ; ಅನಂತ  ಮಾತು

06:00 AM May 25, 2018 | |

ಅಂಬಾನಿಯವರಿಗಿಂತ ದೊಡ್ಡ ಮಾರ್ಕೆಟ್‌ ಬೇಕಾ?’
– ಹೀಗೇಳಿ ಒಂದು ಕ್ಷಣ ಮುಖ ನೋಡಿದರು ಅನಂತ್‌ ನಾಗ್‌. ಮಾತು ಮುಂದುವರೆಯಿತು. “ಒಂದು ಸಿನಿಮಾಕ್ಕೆ ಮಾರ್ಕೆಟ್‌ ಅಂತ ಬರೋದು, ತಲೆಕೆಡಿಸಿಕೊಳ್ಳಬೇಕಾದ್ದು ಕೊನೆಯ ಹಂತದಲ್ಲಿ. ಅದು ಸಿನಿಮಾ ಆರಂಭವಾಗಿ ಒಂದು ವರ್ಷದ ನಂತರ ಕೆಲಸ. ಅದಕ್ಕಿಂತ ಮುಂಚಿನ ಕೆಲಸವನ್ನು ನೀಟಾಗಿ ಮಾಡಿದರೆ, ಮಾರ್ಕೆಟ್‌ ತನ್ನಿಂತಾನೇ ಸೃಷ್ಟಿಯಾಗುತ್ತದೆ’ ಎಂದರು ಅನಂತ್‌ ನಾಗ್‌.

Advertisement

ಅವರ ಮಾತಲ್ಲಿ ಅಷ್ಟೂ ವರ್ಷದ ಅನುಭವ ಎದ್ದು ಕಾಣುತ್ತಿತ್ತು. ಅಂದಹಾಗೆ, ಅನಂತ್‌ ನಾಗ್‌ ಅವರು ಮಾರ್ಕೆಟ್‌ ಬಗ್ಗೆ ಮಾತ‌ನಾಡಿದ್ದು ಸಿನಿಮಾ ಕುರಿತಾಗಿ. ಇವತ್ತು ಒಳ್ಳೆಯ ಸಿನಿಮಾಗಳು ಜನರಿಗೆ ತಲುಪುತ್ತಿಲ್ಲ, ಸರಿಯಾಗಿ ಬಿಡುಗಡೆಯಾಗುತ್ತಿಲ್ಲ, ಸಿನಿಮಾ ಮಾಡುವುದಕ್ಕಿಂತ ಬಿಡುಗಡೆ ಮಾಡೋದೇ ಕಷ್ಟ ಎಂಬ ಮಾತು ಜೋರಾಗಿ ಕೇಳಿಬರುತ್ತಿದೆ. ಅದೇ ಕಾರಣಕ್ಕಾಗಿ ಅನೇಕರು ಸಿನಿಮಾವನ್ನು ಮಾರ್ಕೆಟ್‌ ಮಾಡೋದು ಹೇಗೆ ಎಂಬ ಬಗ್ಗೆಯೂ ತಲೆಕೆಡಿಸಿಕೊಳ್ಳುತ್ತಿದ್ದಾರೆ. ಆದರೆ, ಅನಂತ್‌ ನಾಗ್‌ ಅವರು ಹೇಳುವಂತೆ, ಸಿನಿಮಾವೊಂದಕ್ಕೆ ಮಾರ್ಕೆಟ್‌ಗಿಂತ ಮುಖ್ಯವಾದುದು ಸ್ಕ್ರಿಪ್ಟ್. ಮೊದಲು ನೀವು ಅದ್ಭುತವಾದ ಕಥೆ ಮಾಡಿ, ಅದನ್ನು ಅಷ್ಟೇ ನೀಟಾಗಿ ಸಿನಿಮಾ ಮಾಡಿ ಒಬ್ಬ ಒಳ್ಳೆಯ ವಿತರಕನ ಮೂಲಕ ಬಿಡುಗಡೆ ಮಾಡಿದರೆ ಖಂಡಿತಾ ಆ ಸಿನಿಮಾವನ್ನು ಜನ ಇಷ್ಟಪಡುತ್ತಾರೆ. ನಿಧಾನವಾಗಿ ಬಾಯಿಮಾತಿನಿಂದ ಸಿನಿಮಾಕ್ಕೆ ಪ್ರಚಾರ ಸಿಗುತ್ತದೆ ಎಂಬುದು ಅನಂತ್‌ ನಾಗ್‌ ಅವರ ಅನುಭವದ ಮಾತು.

“ಒಂದು ಸಿನಿಮಾದ ಗೆಲುವನ್ನು ಆ ಸಿನಿಮಾವನ್ನು ಮಾರ್ಕೆಟ್‌ ಮಾಡುವ ರೀತಿಯಲ್ಲಿ ಅವಲಂಭಿತವಾಗಿರುತ್ತದೆ ಎನ್ನುವುದನ್ನು ನಾನು ನಂಬೋದಿಲ್ಲ. ಏಕೆಂದರೆ, ಅಂಬಾನಿ ಕುಟುಂಬದವರು ಕೂಡಾ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಚೆನ್ನಾಗಿ ಮಾರ್ಕೆಟ್‌ ಕೂಡಾ ಮಾಡಿದ್ದಾರೆ. ಅವರಿಗಿಂತ ದೊಡ್ಡ ಮಾರ್ಕೆಟ್‌ ಬೇಕಾ. ಆದರೆ, ಆ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಹಿಟ್‌ ಆಗಲಿಲ್ಲ. ಇಲ್ಲಿ ನಾವು ಒಂದು ಅಂಶವನ್ನು ಗಮನಿಸಬೇಕು. ಯಾವುದೇ ಒಂದು ಸಿನಿಮಾಕ್ಕೆ ಮುಖ್ಯವಾಗಿ ಬೇಕಾಗೋದು ಒಳ್ಳೆಯ ಸ್ಕ್ರಿಪ್ಟ್. ನೀವು ಎಷ್ಟು ಅದ್ಭುತವಾಗಿ ಸ್ಕ್ರಿಪ್ಟ್ ಮಾಡುತ್ತಿರೋ ಅದರ ಮೇಲೆ ನಿಮ್ಮ ಸಿನಿಮಾದ ಭವಿಷ್ಯ ನಿಂತಿರುತ್ತದೆ. ಅದು ಬಿಟ್ಟು ಸ್ಕ್ರಿಪ್ಟ್ನಲ್ಲಿ ಏನೂ ಸತ್ವವಿಲ್ಲದೇ, ಬರೀ ಮಾರ್ಕೆಟಿಂಗ್‌ ನಂಬಿಕೊಂಡರೆ ಅದಕ್ಕೆ ಅರ್ಥವಿಲ್ಲ’ ಎನ್ನುತ್ತಾರೆ ಅನಂತ್‌ ನಾಗ್‌. 

ಹಾಗಂತ ಸಿನಿಮಾವೊಂದಕ್ಕೆ ಮಾರ್ಕೆಟ್‌ ಅಗತ್ಯವಿಲ್ಲವೇ ಎಂದರೆ ಖಂಡಿತಾ ಇದೆ ಎಂಬ ಉತ್ತರ ಅವರಿಂದ ಬರುತ್ತದೆ. “ಸಿನಿಮಾವನ್ನು ಮಾರ್ಕೆಟ್‌ ಮಾಡುವ ಪ್ರಶ್ನೆ ಯಾವಾಗ ಬರುತ್ತದೆ ಹೇಳಿ, ಸಿನಿಮಾ ಮುಗಿಸಿದ ನಂತರ. ಆದರೆ, ಅದಕ್ಕಿಂತ ಮುಂಚೆ ಒಳ್ಳೆಯ ಸಿನಿಮಾ ಮಾಡಬೇಕು. ಆ ನಂತರ ವಿತರಣೆಯ ಮಾತು. ವಿತರಣೆ ಕೂಡಾ ಒಳ್ಳೆಯ ವಿತರಕನ ಮೂಲಕ, ಸ್ಟ್ರಾಟಜಿ ಮಾಡಿ ವಿತರಣೆ ಮಾಡುವಂಥರವರ ಮೂಲಕ ಬಿಡುಗಡೆ ಆದಾಗ ಸಹಾಯ ವಾಗುತ್ತದೆ. 

ಅದೇ ಕಾರಣದಿಂದ ಈ ಬಾರಿ ನಾನು ನನ್ನ “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಸಿನಿಮಾದ ವಿತರಣೆ ಮಾಡಿಕೊಡುವಂತೆ ಜಯಣ್ಣ ಅವರಲ್ಲಿ ಕೇಳಿಕೊಂಡೆ. ಏಕೆಂದರೆ, ಅವರಿಗೆ ಯಾವ ಚಿತ್ರವನ್ನು ಹೇಗೆ ಬಿಡುಗಡೆ ಮಾಡಬೇಕು, ಎಷ್ಟು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಬೇಕು ಎಂಬ ಐಡಿಯಾ ಇದೆ. ಒಮ್ಮೆಲೇ 200-300 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿ ಎರಡು ವಾರಕ್ಕೆ ದುಡ್ಡು ವಾಪಾಸ್‌ ಪಡೆಯುವ ಟ್ರೆಂಡ್‌ ಈಗ ನಡೆಯುತ್ತಿದೆ. ಎರಡು ವಾರದ ನಂತರ ಕಥೆಯೇನು ಎಂದು ನಾವು ಯೋಚಿಸಬೇಕು’ ಎಂದು ಸಿನಿಮಾ ಮಾರುಕಟ್ಟೆಯ ಬಗ್ಗೆ ಹೇಳುತ್ತಾರೆ ಅನಂತ್‌ನಾಗ್‌.

Advertisement

ಸಿನಿಮಾಕ್ಕೆ ಬರುವ ಯುವ ನಿರ್ದೇಶಕರು ಹೊಸ ಹೊಸ ಆಲೋಚನೆಗಳೊಂದಿಗೆ ಬರುತ್ತಾರೆ ಎಂಬುದನ್ನು ಅನಂತ್‌ ನಾಗ್‌ ಅವರು ಕಂಡುಕೊಂಡಿದ್ದಾರೆ. “ಒಂದಷ್ಟು ಯುವ ನಿರ್ದೇಶಕರು ಒಳ್ಳೆಯ ಸಿನಿಮಾಗಳನ್ನು ಮಾಡುತ್ತಿದ್ದಾರೆ. ನನ್ನಲ್ಲಿ ಬರುವ ಹೊಸಬರಿಗೆ ಯಾವುದು ಒಳ್ಳೆಯದು, ಯಾವುದು ಕೆಟ್ಟದು ಎಂಬುದನ್ನು ಹೇಳುತ್ತಿದ್ದೇನೆ. ಸ್ಕ್ರಿಪ್ಟ್ಗೆ ಹೆಚ್ಚು ಗಮನಕೊಡಿ ಎನ್ನುತ್ತೇನೆ. 60 ದೃಶ್ಯಗಳೇ ಇರಲಿ, ಒಂದೊಂದು ದೃಶ್ಯಕ್ಕೆ ಎರಡು ನಿಮಿಷದಂತೆ 120 ನಿಮಿಷದಲ್ಲಿ ಸಿನಿಮಾ ಮುಗಿಸಿದರೂ ಸಮಾಜದಲ್ಲಿ ನಡೆಯುತ್ತಿರುವ ವಿಚಾರಗಳನ್ನು ಗಮನಿಸಿ ಕಥೆ ಮಾಡಿದರೆ ಚೆನ್ನಾಗಿರುತ್ತದೆ. ಕಾಮಿಡಿ, ವ್ಯಂಗ್ಯ, ಸಿಟ್ಟು … ಹೀಗೆ ಯಾವುದೇ ರೂಪದಲ್ಲಾದರೂ ಸಮಸ್ಯೆಗಳನ್ನು ಬಿಂಬಿಸಬಹುದು. ಒಂದು ಮಿತವಾದ ಬಜೆಟ್‌ನಲ್ಲಿ ಸಿನಿಮಾ ಮಾಡಿದರೆ ಕೈ ಸುಟ್ಟುಕೊಳ್ಳಬೇಕಿಲ್ಲ’ ಎಂಬುದು ಅನಂತ್‌ ನಾಗ್‌ ಅವರ ಮಾತು. 

ಇದೇ ವೇಳೆ ಈಗ ಚಿತ್ರರಂಗ ಬದಲಾಗಿರುವ ಬಗ್ಗೆಯೂ ಅನಂತ್‌ ನಾಗ್‌ ಹೇಳುತ್ತಾರೆ. “ಹಿಂದೆಲ್ಲಾ ಕೆಲವೇ ಕೆಲವು ವಿತರಕರಿದ್ದರು. ಒಂದು ಸಿನಿಮಾ ಸೆಟ್ಟೇರುತ್ತದೆ ಎಂದರೆ ಅದಕ್ಕೆ ವಿತರಕರು ಕೂಡಾ ಬೆನ್ನೆಲುಬಾಗಿ ನಿಲ್ಲುತ್ತಿದ್ದರು. ಅದೇ ಕಾರಣದಿಂದ ಸಾಕಷ್ಟು ಒಳ್ಳೆಯ ಸಿನಿಮಾಗಳು ಬರಲು ಕಾರಣವಾಯಿತು. ಆದರೆ ಈಗ ಇಡೀ ಸಿನಿಮಾದ ಜವಾಬ್ದಾರಿ ನಿರ್ಮಾಪಕನ ಹೆಗಲ ಮೇಲಿರುತ್ತದೆ. ಸಹಜವಾಗಿಯೇ ಸಿನಿಮಾವನ್ನು ದಡ ಮುಟ್ಟಿಸುವ ವೇಳೆ ನಿರ್ಮಾಪಕ ಸುಸ್ತಾಗಿರುತ್ತಾನೆ’ ಎನ್ನುತ್ತಾರೆ ಅನಂತ್‌ ನಾಗ್‌. 

ಅಂದಹಾಗೆ, ಅನಂತ್‌ ನಾಗ್‌ ಅವರ “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ. ಇತ್ತೀಚೆಗೆ ಅನಂತ್‌ ನಾಗ್‌ ಅವರು ತುಂಬಾನೇ ಇಷ್ಟಕಥೆಯಿದು. ನರೇಂದ್ರ ಬಾಬು ಅವರು ಕೊಟ್ಟ ಸ್ಕ್ರಿಪ್ಟ್ಗೆ ಒಂದಷ್ಟು ಪೂರಕ ಅಂಶಗಳನ್ನು ಸೇರಿಸಿ ಅಂತಿಮ ರೂಪ ಕೊಟ್ಟವರು ಅನಂತ್‌ ನಾಗ್‌. ಜೊತೆಗೆ “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಎಂಬ ಟೈಟಲ್‌ ಕೂಡಾ ಅನಂತ್‌ ನಾಗ್‌ ಅವರೇ ಇಟ್ಟಿದ್ದು. ಹಣಕಾಸಿನ ತೊಂದರೆಯಿಂದ ಸಿನಿಮಾ ನಿಲ್ಲುವ ಸಂದರ್ಭ ಬಂದಾಗಲೂ ಅನಂತ್‌ನಾಗ್‌ ಅವರು ಸ್ನೇಹಿತ, ಹರೀಶ್‌ ಶೇರಿಗಾರ್‌ ಅವರಿಗೆ ಫೋನ್‌ ಮಾಡಿ, ಸಿನಿಮಾವನ್ನು ಮುಂದುವರೆಸುವಂತೆ ಕೇಳಿಕೊಂಡಿದ್ದಾರೆ. ಅದರ ಪರಿಣಾಮ ಸಿನಿಮಾದ ಚಿತ್ರೀಕರಣ ದುಬೈನ ಬುರ್ಜ್‌ ಖಲೀಫಾದಲ್ಲಿ ನಡೆದಿದೆ. ಈ ಸಿನಿಮಾಕ್ಕೆ ಅನಂತ್‌ ನಾಗ್‌ ಇಷ್ಟೆಲ್ಲಾ ಮಾಡಲು ಕಾರಣ ಸ್ಕ್ರಿಪ್ಟ್ ಮತ್ತು ಸ್ಕ್ರಿಪ್ಟ್. 

  ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next