ಹಾನಗಲ್ಲ: ಸಾಹಿತ್ಯದ ಮೂಲ ಉದ್ದೇಶ ಸಾಮರಸ್ಯ. ಎಲ್ಲರ ಭಾವನೆ ಐಕ್ಯವಾದಾಗ ಭಾವೈಕ್ಯತೆ ಮೂಡಲಿದೆ. ಈ ಮಣ್ಣಿನ ಗುಣಧರ್ಮ ಭಾವೈಕ್ಯತೆ. ಸಾಹಿತ್ಯ ಸಮ್ಮೇಳನಗಳು ಮನುಷ್ಯತ್ವದ ಬೀಜ ಬಿತ್ತುವ ವೇದಿಕೆಗಳಾಗಬೇಕೆಂದು ಶಾಸಕ ಶ್ರೀನಿವಾಸ ಮಾನೆ ಆಶಯ ವ್ಯಕ್ತಪಡಿಸಿದರು.
ಗುರುವಾರ ಹಾನಗಲ್ಲ ತಾಲೂಕಿನ ಹಾವಣಗಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ 4ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಕನ್ನಡದ ಆದಿಕವಿ ಪಂಪ “ಮಾನವ ಕುಲಂ ತಾ ವಂದೇ ವಲಂ’ ಎಂದಿದ್ದಾರೆ. ರಾಷ್ಟ್ರಕವಿ ಕುವೆಂಪು “ಮಾನವ ಜಾತಿ ಒಂದೇ’ ಎಂದು ಹೇಳಿದ್ದಾರೆ. ಯಾರಲ್ಲಿ ಕಲೆ, ಸಾಹಿತ್ಯ, ಸಾಂಸ್ಕೃತಿಕ ಮನಃಸ್ಥಿತಿ ಇರುತ್ತದೋ ಅವರು ಮಾತ್ರ ಸಾಮರಸ್ಯ, ಮಾನವತೆ ಬಿತ್ತುವ ಕಾರ್ಯದಲ್ಲಿ ತೊಡಗುತ್ತಾರೆ. ಈ ಜಗತ್ತಿಗೆ ಇಂದು ಮಾನವೀಯ ಗುಣ ಧರ್ಮದ ಸಹೃದಯಿಗಳ ಅಗತ್ಯ ಹೆಚ್ಚಾಗಿದೆ. ಮನುಷ್ಯ ತನ್ನನ್ನು ತಾನು ಪ್ರೀತಿಸುವ ಜೊತೆಗೆ ಇತರರನ್ನು, ಇತರ ಜೀವಿಗಳನ್ನೂ ಪ್ರೀತಿಸಬೇಕು. ಸೃಷ್ಟಿಯಾಗುವ ಸಾಹಿತ್ಯ ಜೀವ ಪರವಾಗಿರಬೇಕು. ಸಾಹಿತ್ಯ ಸಮ್ಮೇಳ ನಗಳು ಧನಾತ್ಮಕ ಚಿಂತನೆಗಳಿಗೆ ವೇದಿಕೆಯಾಗಬೇಕು. ವಿರಾಟನಗರ ಖ್ಯಾತಿಯ ಹಾನಗಲ್ಲ ಐತಿಹಾಸಿಕ ಪುಣ್ಯಭೂಮಿ. ಇಂಥ ಕ್ಷೇತ್ರವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ. ಪೂರ್ವ ಜನ್ಮದ ಪುಣ್ಯ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿ ಸಂಕಮ್ಮ ಸಂಕಣ್ಣನವರ ಮಾತನಾಡಿ, ಕನ್ನಡದ ಬಳಕೆ ಹೆಚ್ಚಿದಂತೆ ಜಾಗೃತಿ, ಅಭಿಮಾನವೂ ವೃದ್ಧಿಯಾಗಲಿದೆ. ಸುತ್ತಲಿನ ರಾಜ್ಯಗಳ ಭಾಷಿಕರ ಪ್ರಭಾವದಿಂದ ಕನ್ನಡ ಮಂಕಾದಂತೆ ಕಾಣುತ್ತಿದ್ದು, ಬೇರೆ ಭಾಷಿಕ ರನ್ನು ತೃಪ್ತಿಪಡಿಸುವ ಭರಾಟೆಯಲ್ಲಿ ನಮ್ಮ ಮಾತೃಭಾಷೆ ನಿರ್ಲಕ್ಷಿಸುವುದು ಸರಿಯಲ್ಲ. ಕನ್ನಡಿಗರು ತಮ್ಮನ್ನು ತಾವು ಮೋಸ ಮಾಡಿ ಕೊಳ್ಳದೇ ಕನ್ನಡ-ಕನ್ನಡಿಗರ ಕಲ್ಯಾಣಕ್ಕೆ ಕಂಕಣಬದ್ಧರಾಗಬೇಕಿದೆ ಎಂದರು.
ಕನ್ನಡ ಭಾಷೆ ಬೆಳವಣಿಗೆಯ ಕುರಿತು ನಮ್ಮ ಮಾತು ಕಡಿಮೆಯಾಗಿ, ಕೆಲಸ ಹೆಚ್ಚು ಪರಿಣಾಮಕಾರಿಯಾಗಿ ನಡೆಯಬೇಕಿದೆ. ನಮ್ಮ ಭಾಷೆ, ನೆಲ, ಜಲದ ಕುರಿತು ಪ್ರತಿಯೊಬ್ಬರೂ ಪ್ರೀತಿ, ಅಭಿಮಾನ ಮೈಗೂಡಿಸಿಕೊಳ್ಳಬೇಕೆಂದರು.
ಸಾನ್ನಿಧ್ಯ ವಹಿಸಿದ್ದ ಅಕ್ಕಿಆಲೂರು ವಿರಕ್ತ ಮಠದ ಶಿವಬಸವ ಸ್ವಾಮೀಜಿ ಮಾತನಾಡಿ, ಕನ್ನಡವನ್ನು ಇನಷ್ಟು ಸಮೃದ್ಧಗೊಳಿಸಲು ನಾವೆಲ್ಲರೂ ದೀಕ್ಷೆ ತೊಡಬೇಕಿದೆ. ಕರ್ನಾಟಕದಲ್ಲಿ ಕನ್ನಡವನ್ನು ಎಂದಿಗೂ ಅಳಿಯಲು ಬಿಡದಂತೆ ಎಲ್ಲರೂ ಮೈಮನ ಜಾಗೃತಗೊಳಿ ಸಿಕೊಳ್ಳಬೇಕು ಎಂದರು.
ಸಮ್ಮುಖ ವಹಿಸಿದ್ದ ಅಕ್ಕಿಆಲೂರು ಮುತ್ತಿನ ಕಂತಿಮಠದ ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ಆಯಾ ಕಾಲದ ಸನ್ನಿವೇಶ, ಸಾಮಾಜಿಕ ನೋಟದ ಅಭಿವ್ಯಕ್ತಿಯೇ ಸಾಹಿತ್ಯ ಎಂದರು.
ಸಮ್ಮೇಳನದ ಸರ್ವಾಧ್ಯಕ್ಷೆ ಪಾರ್ವತಿಬಾಯಿ ಕಾಶಿಕರ, ನಿಕಟ ಪೂರ್ವ ಸಮ್ಮೇಳನಾಧ್ಯಕ್ಷ ಉದಯ ನಾಸಿಕ್, ಪರಿಷತ್ತಿನ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಮುಚ್ಚಂಡಿ, ವಿಜಯೇಂದ್ರ ಯತ್ನಳ್ಳಿ, ರುಕ್ಮಣ್ಣ ಸಾಳಂಕಿ, ದತ್ತಾತ್ರೇಯ ಕುಲಕರ್ಣಿ, ಎನ್.ಎಸ್.ಜವಳಿ, ಕರಬಸಪ್ಪ ಹೆಬ್ಬಳ್ಳಿ, ಸುನೀಲ್‌ಕುಮಾರ ಬಿ., ಆರ್. ಎನ್.ಹುರುಳಿ, ಎಂ.ಎಸ್.ಬಡಿಗೇರ ಇದ್ದರು. ಚನ್ನವೀರಪ್ಪ ಬೆಲ್ಲದ ಸ್ವಾಗತಿಸಿ, ಜಗದೀಶ್ ಮಡಿವಾಳರ ನಾಡಗೀತೆ ಹಾಡಿದರು. ರಾಜೇಶ್ವರಿ ತಿರುಮಲೆ, ಶ್ರೀಕಾಂತ ಹುಲ್ಮನಿ ನಿರೂಪಿಸಿ, ಪ್ರವೀಣ ಅಪ್ಪಾಜಿ ವಂದಿಸಿದರು.