Advertisement

ಶಿವರಾಮ್ ನಟರಷ್ಟೇ ಅಲ್ಲ, ಸ್ಟಾರ್ ನಟರ ಸಿನಿಮಾ ನಿರ್ಮಾಪಕ, ನಿರ್ದೇಶಕರೂ ಆಗಿ ಮನಗೆದ್ದಿದ್ರು…

02:33 PM Dec 04, 2021 | Team Udayavani |

ಕನ್ನಡ ಚಿತ್ರರಂಗದಲ್ಲಿ ಸುಮಾರು ಆರು ದಶಕಗಳಿಂದ ಪೋಷಕನಟನಾಗಿ, ಹಾಸ್ಯನಟನಾಗಿ ನಟಿಸುವ ಮೂಲಕ ಅಪಾರ ಜನಮೆಚ್ಚುಗೆ ಗಳಿಸಿದವರಲ್ಲಿ ಎಸ್.ಶಿವರಾಮ್ ಅಲಿಯಾಸ್ ಶಿವರಾಮಣ್ಣ ಕೂಡಾ ಒಬ್ಬರಾಗಿದ್ದಾರೆ. ಇವರು ನಟನಾಗಿ ಮಾತ್ರವಲ್ಲ, ನಿರ್ದೇಶಕರಾಗಿ, ನಿರ್ಮಾಪಕರಾಗಿಯೂ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.

Advertisement

ತನ್ನ ಸಹೋದರ ಎಸ್.ರಾಮನಾಥ್ ಅವರೊಂದಿಗೆ ಜತೆಗೂಡಿ “ರಾಶಿ ಬ್ರದರ್ಸ್” ಎಂಬ ಸಂಸ್ಥೆಯನ್ನು ಕಟ್ಟಿ, ಹಲವಾರು ಚಿತ್ರಗಳನ್ನು ನಿರ್ಮಾಣ ಮಾಡಿದ್ದರು. 1972ರಲ್ಲಿ ಹೃದಯ ಸಂಗಮ ಎಂಬ ಸಿನಿಮಾವನ್ನು ನಿರ್ದೇಶಿಸಿದ್ದರು. ಪುಟ್ಟಣ್ಣ ಕಣಗಾಲ್ ನಿರ್ದೇಶನದ ಗೆಜ್ಜೆ ಪೂಜೆ ಮತ್ತು ಉಪಾಸನೆ ಸಿನಿಮಾವನ್ನು ರಾಶಿ ಬ್ರದರ್ಸ್ ನಿರ್ಮಾಣ ಮಾಡಿದ್ದರು. ಡಾ.ರಾಜ್ ಕುಮಾರ್ ಅವರ 175ನೇ ಸಿನಿಮಾ ನಾನೊಬ್ಬ ಕಳ್ಳ ಸಿನಿಮಾವನ್ನು ನಿರ್ಮಾಣ ಮಾಡಿದ್ದು ಕೂಡಾ ಶಿವರಾಮ್ ಬ್ರದರ್ಸ್. 1985ರಲ್ಲಿ ರಾಮನಾಥನ್ ಮತ್ತು ಶಿವರಾಮ್ ಜತೆಯಾಗಿ ಬಾಲಿವುಡ್ ನ ಗಿರಫ್ತಾರ್ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಈ ಚಿತ್ರದಲ್ಲಿ ಸ್ಟಾರ್ ಗಳಾದ ಅಮಿತಾಬ್ ಬಚ್ಚನ್, ಕಮಲ್ ಹಾಸನ್ ಹಾಗೂ ರಜನಿಕಾಂತ್ ನಟಿಸಿದ್ದರು. ಮೂವರು ಸೂಪರ್ ಸ್ಟಾರ್ ಗಳು ನಟಿಸಿದ್ದ ಭಾರತದ ಏಕೈಕ ಸಿನಿಮಾ ಎಂಬ ಹೆಗ್ಗಳಿಕೆ ಕೂಡಾ ಇದರದ್ದಾಗಿದೆ.

ಇದನ್ನೂ ಓದಿ:“ಹಸುಗಳು ಹಾಲು ಕೊಡುತ್ತಿಲ್ಲ, ನೀವೇ ಬುದ್ದಿ ಹೇಳಿ”; ಪೊಲೀಸ್ ಠಾಣೆ ಮೆಟ್ಟಿಲೇರಿದ ರೈತ!

ಶಿವರಾಮ್ ಅವರು ಕರ್ನಾಟಕ ಮತ್ತು ತಮಿಳುನಾಡು ರಾಜ್ಯದ ಗಡಿಭಾಗದ ಚೂಡಸಂದ್ರ ಎಂಬ ಗ್ರಾಮದಲ್ಲಿ 1938ರಲ್ಲಿ ಜನಿಸಿದ್ದರು. ಪ್ರಾಥಮಿಕ ಶಿಕ್ಷಣದ ನಂತರ ತಮ್ಮ ಹಿರಿಯ ಸಹೋದರ ಶ್ರೀಕಂಠೇಶ್ವರ ಅಯ್ಯರ್ ಅವರ ಜತೆಗೆ ಬೆಂಗಳೂರಿಗೆ ವಲಸೆ ಬಂದಿದ್ದರು. ಅಯ್ಯರ್ ಅವರು ಬೆಂಗಳೂರಿನಲ್ಲಿ ಪ್ರತಿಷ್ಠಿತ ವಾಣಿ ಟೈಪ್ ರೈಟಿಂಗ್ ತರಗತಿಯನ್ನು ನಡೆಸುತ್ತಿದ್ದರು. ಬೆಂಗಳೂರಿಗೆ ಬಂದ ಶಿವರಾಮ್ ಅವರು ಗುಬ್ಬಿ ವೀರಣ್ಣ ಕಂಪನಿಯ ನಾಟಕಗಳನ್ನು ಕಂಡು ಪ್ರಭಾವಿತರಾಗಿದ್ದರು. ಬಳಿಕ ಸಿನಿಮಾ ನಿರ್ಮಾಣ ಮತ್ತು ನಟನೆಯಲ್ಲಿ ಹೆಚ್ಚು ಆಸಕ್ತಿ ಹೊಂದತೊಡಗಿದ್ದರು. ಹಲವು ನಾಟಕಗಳಲ್ಲಿ ಅಭಿನಯಿಸಿದ್ದ ಶಿವರಾಮ್ ಅವರು 1958ರಲ್ಲಿ ಕು.ರಾ.ಸೀತಾರಾಮ್ ಶಾಸ್ತ್ರಿಗಳಂತಹ ಪ್ರಸಿದ್ಧ ನಿರ್ದೇಶಕರ ಜತೆ ಸಹಾಯಕರಾಗಿ ಕಾರ್ಯನಿರ್ವಹಿಸಲು ಆರಂಭಿಸಿದ್ದರು. ಕುತೂಹಲದ ಸಂಗತಿ ಏನೆಂದರೆ ಹಿರಿಯ ಸಿನಿಮಾಟೋಗ್ರಾಫರ್ ಬೊಮನ್ ಡಿ ಇರಾನಿ ಅವರ ಜತೆಯೂ ಕ್ಯಾಮರಾ ಅಸಿಸ್ಟೆಂಟ್ ಆಗಿ ಶಿವರಾಮ್ ಕೆಲಸ ಮಾಡಿದ್ದರು.

ತೆರೆಯ ಹಿಂದೆ ಸಾಕಷ್ಟು ಕೆಲಸ ಮಾಡಿದ್ದ ಶಿವರಾಮ್ ಅವರು 1965ರಲ್ಲಿ ಬೆರೆತ ಜೀವ ಸಿನಿಮಾದಲ್ಲಿ ನಟಿಸುವ ಮೂಲಕ ಬೆಳ್ಳಿಪರದೆಗೆ ಪ್ರವೇಶಿಸಿದ್ದರು. ಶಿವರಾಮ್ ಅವರು ಖ್ಯಾತ ನಿರ್ದೇಶಕರಾಗಿದ್ದ ಕೆ.ಎಸ್.ಎಲ್.ಸ್ವಾಮಿ, ಗೀತಪ್ರಿಯ, ಸಂಗೀತಂ ಶ್ರೀನಿವಾಸ್ ರಾವ್ ಮತ್ತು ಪುಟ್ಟಣ್ಣ ಕಣಗಾಲ್ ಅವರ ಜತೆಯೂ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.

Advertisement

ಕಲ್ಯಾಣ್ ಕುಮಾರ್ ನಟನೆಯ ಬೆರೆತ ಜೀವ ಸಿನಿಮಾದಲ್ಲಿ ಶಿವರಾಮ್ ಅವರು ನಟಿಸಿದ್ದ ನಂತರ 1970, 80ರ ದಶಕದಿಂದ 2000 ಇಸವಿಯವರೆಗೆ ಶರಪಂಜರ, ನಾಗರಹಾವು, ಶುಭಮಂಗಳ, ಚಲಿಸುವ ಮೋಡಗಳು, ಶ್ರಾವಣ ಬಂತು, ಹಾಲು ಜೇನು, ಹೊಂಬಿಸಿಲು, ಹೊಸ ಬೆಳಕು, ಗುರು ಶಿಷ್ಯರು, ಸಿಂಹದ ಮರಿ ಸೈನ್ಯ, ಮಕ್ಕಳ ಸೈನ್ಯ, ಆಪ್ತಮಿತ್ರ, ಹುಚ್ಚ, ಬರ, ತಾಯಿ ಸಾಹೇಬ ಸೇರಿದಂತೆ 600ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರ ಮನ ಗೆದ್ದಿದ್ದರು.

ಶಿವರಾಮ್ ಅವರ ನಟನೆ, ಹಾಸ್ಯಪಾತ್ರ, ನಿರ್ದೇಶನ ಸೇರಿದಂತೆ ಸಿನಿಮಾರಂಗಕ್ಕೆ ನೀಡಿದ ಕೊಡುಗೆಗಾಗಿ 2013ರಲ್ಲಿ ಪದ್ಮಭೂಷಣ ಡಾ.ಬಿ.ಸರೋಜಾದೇವಿ ರಾಷ್ಟ್ರೀಯ ಪ್ರಶಸ್ತಿ ಹಾಗೂ 2010-11ರಲ್ಲಿ ಡಾ.ರಾಜ್ ಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next