Advertisement

ಸಂಕಷ್ಟದಲ್ಲಿ ಕನ್ನಡ ಪುಸ್ತಕೋದ್ಯಮ; ಕೋವಿಡ್‌ದಿಂದಾಗಿ ಬಿದ್ದಿದೆ ಪೆಟ್ಟು

12:38 AM Oct 28, 2021 | Team Udayavani |

ಬೆಂಗಳೂರು: ಕನ್ನಡದ ಶ್ರೀಮಂತಿಕೆ ಇರುವುದೇ ಸಾಹಿತ್ಯದಲ್ಲಿ…. ಸಾಹಿತ್ಯವೆಂದರೆ ಪುಸ್ತಕ… ಆದರೆ, ಕನ್ನಡವನ್ನು ಪೋಷಿಸಿ, ಬೆಳೆಸುವ ಪುಸ್ತಕೋದ್ಯಮಕ್ಕೆ ಕಳೆದ ಎರಡು ವರ್ಷಗಳಲ್ಲಿ ಕೋವಿಡ್‌ ನೀಡಿದ ಪೆಟ್ಟು ಮಾತ್ರ ಸಹಿಸಲು ಸಾಧ್ಯವೇ ಇಲ್ಲದಂಥದ್ದು!

Advertisement

ಕೋವಿಡ್‌ ಮತ್ತು ಲಾಕ್‌ಡೌನ್‌ ಕಾಲದಲ್ಲಿ ಸಾಹಿತ್ಯ ಬರೆಯುವವವರಿಗೆ ಯಾವುದೇ ರೀತಿಯಲ್ಲೂ ಕೊರತೆಯಾಗಲಿಲ್ಲ. ಆದರೆ, ಬರೆದ ಮೇಲೆ ಪುಸ್ತಕ ರೂಪದಲ್ಲಿ ಪ್ರಿಂಟ್‌ ಮಾಡಿ ಮಾರಾಟ ಮಾಡುವ ಪ್ರಕ್ರಿಯೆಗೆ ಮಾತ್ರ ದೊಡ್ಡ ಪೆಟ್ಟು ಬಿದ್ದಿರುವುದು ಸತ್ಯ.

ಕೋವಿಡ್‌ ಎರಡು ಬಾರಿಯ ಲಾಕ್‌ಡೌನ್‌ ಹಾಗೂ ಇತರ ನಿರ್ಬಂಧಗಳ ಹಿನ್ನೆಲೆಯಲ್ಲಿ ಪುಸ್ತಕ ಮಾರಾಟ ಹಾಗೂ ಪ್ರಕಾಶಕರ ವಲಯಕ್ಕೂ ದೊಡ್ಡ ಮಟ್ಟದ ಹೊಡೆತ ಬಿದ್ದಿದೆ.

ಎರಡು ಹಂತಗಳ ಲಾಕ್‌ಡೌನ್‌ ವೇಳೆ ಕನ್ನಡ ಪುಸ್ತಕ ಪ್ರಕಾಶನ ವಲಯಕ್ಕೆ ಸುಮಾರು 3 ಕೋಟಿ ರೂ. ನಷ್ಟವಾಗಿದೆ. ಈ ಅವಧಿಯಲ್ಲಿಯೇ ಪುಸ್ತಕ ಪ್ರಕಾಶಕರು ಮತ್ತು ಮಾರಾಟಗಾರರು ತಲಾ 20ರಿಂದ 30 ಲಕ್ಷ ರೂ.ನಷ್ಟ ಅನುಭವಿಸಿದ್ದಾರೆ.

ಆನ್‌ಲೈನ್‌ ಮಾರಾಟಕ್ಕೆ ಅವಕಾಶ ಇತ್ತಾದರೂ ಮಾರಾಟದ ಪ್ರಮಾಣ ತುಂಬಾ ಕಡಿಮೆ ಅಂದರೆ ಶೇ.5ರಷ್ಟು ಮಾತ್ರ ಇತ್ತು. ಹೀಗಾಗಿ ಪುಸ್ತಕ ಮಳಿಗೆಗಳು ಬಂದ್‌ ಆದ ಕಾರಣ ಮಾರಾಟದ ಮೇಲೂ ಪರಿಣಾಮ ಬೀರಿತ್ತು. ಎಲ್ಲ ಓದುಗರಿಗೂ ಆನ್‌ಲೈನ್‌ನಲ್ಲಿ  ಪ್ರಕ್ರಿಯೆ ಬಗ್ಗೆ ಪೂರ್ಣ ಮಾಹಿತಿಯಿಲ್ಲದ ಕಾರಣ ಹೆಸರಾಂತ ಲೇಖಕರ ಕೆಲವು ಪುಸ್ತಕಗಳು ಮಾರಾಟವಾಗಿದ್ದು ಆನ್‌ಲೈನ್‌ ವಹಿವಾಟು 5 ಲಕ್ಷ ರೂ.ನಡೆದಿದೆ.

Advertisement

ಅರ್ಧದಷ್ಟು ನಷ್ಟ: ಕನ್ನಡ ಪುಸ್ತಕೋದ್ಯಮದಲ್ಲಿ ಪ್ರತೀ ವರ್ಷ ಸುಮಾರು 100 ಕೋಟಿ ರೂ. ವ್ಯಾಪಾರ ವಹಿವಾಟು ನಡೆಯುತ್ತಿತ್ತು. ಆದರೆ ಕೋವಿಡ್‌ ಹಿನ್ನೆಲೆಯಲ್ಲಿ ದಿಢೀರ್‌ ಎಂದು ಖರೀದಿ ಪ್ರಕ್ರಿಯೆ ಜತೆಗೆ ಓದುಗರ ಸಂಖ್ಯೆ ಕುಸಿಯಿತು. ಒಟ್ಟಾರೆ ವ್ಯಾಪಾರ ವಹಿವಾಟು 50 ಕೋಟಿ ರೂ.ದಿಂದ 60 ಕೋಟಿ ರೂ.ಗೆ ಇಳಿಕೆಯಾಗಿದೆ ಎಂದು ನವ ಕರ್ನಾಟಕ ಪುಸ್ತಕ ಪ್ರಕಾಶನದ ಕಾರ್ಯ ನಿರ್ವಾಹಕ ನಿರ್ದೇಶಕ ಎ.ರಮೇಶ್‌ ಉಡುಪ ಮಾಹಿತಿ ನೀಡುತ್ತಾರೆ.

ಶಾಲಾ ಕಾಲೇಜುಗಳು ಆರಂಭವಾದರೆ ಅಧಿಕ ಸಂಖ್ಯೆಯಲ್ಲಿ ಪುಸ್ತಕಗಳ ಖರೀದಿ ಪ್ರಕ್ರಿಯೆ ನಡೆಯುತ್ತಿತ್ತು. ಸುಮಾರು 10ರಿಂದ 20 ಕೋಟಿ ರೂ.ಗಳಿಕೆ ಆಗುತ್ತಿತ್ತು. ಆದರೆ ಕೋವಿಡ್‌ ಅವಾಂತರದಿಂದಾಗಿ ಕಳೆದ 2 ವರ್ಷಗಳಿಂದ ಸಮ ಪ್ರಮಾಣದಲ್ಲಿ ಶಾಲೆಗಳು ತೆರೆದಿರಲಿಲ್ಲ. ಇದು ಕನ್ನಡ ಪುಸ್ತಕೋದ್ಯಮಕ್ಕೆ ಪೆಟ್ಟು ನೀಡಿದೆ ಎನ್ನುತ್ತಾರೆ.

ಇದನ್ನೂ ಓದಿ:5000 ಕಿಮೀ ದೂರ ಕ್ರಮಿಸಬಲ್ಲ ಅಗ್ನಿ 5 ಬ್ಯಾಲಿಸ್ಟಿಕ್‌ ಕ್ಷಿಪಣಿ ಪರೀಕ್ಷೆ ಯಶಸ್ವಿ

ಇಲಾಖೆಗಳು ಖರೀದಿ ಪ್ರಕ್ರಿಯೆ ನಿಲ್ಲಿಸಿವೆ: ಕೋವಿಡ್‌ ಹಿನ್ನೆಲೆಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಸೇರಿದಂತೆ ಕಂಪೆನಿ ವಿವಿಧ ಇಲಾಖೆಗಳು ಕಳೆದ ಒಂದು ವರ್ಷದಿಂದ ಪ್ರಕಾಶಕರಿಂದ ಪುಸ್ತಕ ಖರೀದಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿವೆ. ಕೆಲವು ಇಲಾಖೆಗಳು ಪ್ರಕಾಶಕರಿಂದ ಖರೀದಿ ಮಾಡಿರುವ ಹಣ ಸಂಪೂರ್ಣವಾಗಿ ನೀಡಿಲ್ಲ. ಹೀಗಾಗಿ ಕನ್ನಡ ಪುಸ್ತಕೋದ್ಯಮ ತೀವ್ರ ಸಂಕಷ್ಟದ ಸ್ಥಿತಿಯಲ್ಲಿದೆ ಎಂದು ಪ್ರಕಾಶಕರು ಹೇಳುತ್ತಾರೆ.

ಲೇಖಕರಿಗೆ ನೀಡುವ ಗೌರವ ಧನದ ಮೇಲೆ ಕಂಪೆನಿ ಜಿಎಸ್‌ಟಿ ಶುಲ್ಕ ವಿಧಿಸುತ್ತಿದೆ. ಇದರಿಂದಾಗಿಯೇ ಪುಸ್ತಕ ಪ್ರಕಾಶಕರು ಶೇ.12ರಷ್ಟು ನಷ್ಟ ಅನುಭವಿಸುತ್ತಾರೆ. ಆ ಹಿನ್ನೆಲೆಯಲ್ಲಿ ಇದನ್ನು ರದ್ದುಪಡಿಸುವಂತೆ ಕರ್ನಾಟಕ ಪ್ರಕಾಶಕರ ಸಂಘ ಹಿರಿಯ ಕಾದಂಬರಿಕಾರ ಎಸ್‌.ಎಲ್‌. ಭೈರಪ್ಪ ಮತ್ತು ಕನ್ನಡ ಸಾಹಿತ್ಯ ಪರಿಷತ್‌ನ ಮೂಲಕ ರಾಜ್ಯ ಮತ್ತು ಕೇಂದ್ರ ಕಂಪೆನಿಕ್ಕೆ ಪತ್ರ ಬರೆಯಿಸಿತ್ತು. ಆದರೆ ಯಾವುದೇ ರೀತಿಯ ಫ‌ಲ ದೊರೆತಿಲ್ಲ ಎಂದು ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷ ಪ್ರಕಾಶ ಕಂಬತ್ತಹಳ್ಳಿ ತಿಳಿಸಿದ್ದಾರೆ.

ಕನ್ನಡ ಪುಸ್ತಕ ಪ್ರಾಧಿಕಾರ ಈ ಹಿಂದೆ ಪುಸ್ತಕ ಪ್ರಕಾಶಕರಿಂದ ತಲಾ 1ಲಕ್ಷ ರೂ.ಮೊತ್ತದ ಪುಸ್ತಕಗಳನ್ನು ಖರೀದಿ ಮಾಡುತ್ತಿತ್ತು. ಆದರೆ ಅದನ್ನು ಈಗ ನಿಲ್ಲಿಸಿದೆ ಈ ಪ್ರಕ್ರಿಯೆಯನ್ನು  ಪ್ರಾಧಿಕಾರ ಮತ್ತೆ ಆರಂಭಿಸಬೇಕು.
-ಆರ್‌.ದೊಡ್ಡೇಗೌಡ, ಸ್ವಪ್ನ ಬುಕ್‌ ಹೌಸ್‌

-ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next