Advertisement

ಗ್ರಾಮ್ಯ ಬದುಕಿನ ರೂಪಕ

02:17 AM Nov 01, 2020 | sudhir |

ಈ ಅಂಕಣ ರಾಜ್ಯೋತ್ಸವ ವಿಶೇಷ. ರಾಜ್ಯದ ಯುವ ಬರಹಗಾರರು ದಿನಕ್ಕೆ ಒಂದು ಕನ್ನಡದ ಕೃತಿ ಕುರಿತು ಬರೆಯುತ್ತಾರೆ. ಇದು ಒಂದು ರೀತಿಯಲ್ಲಿ ಓದುವ ಪಂದ್ಯ.

Advertisement

ಪಠ್ಯದಲ್ಲಿ ಮಾತ್ರ ಸಾಹಿತಿ ಗೀತಾ ನಾಗಭೂಷಣರ ಸಾಹಿತ್ಯಗಳನ್ನು ಓದಿದ್ದ ನಾನು ಅವರ ಕೃತಿಗಳನ್ನು ಓದಿರಲಿಲ್ಲ. ಅಷ್ಟಕ್ಕೂ ಅವರು ನಮ್ಮೂರಿನವರೆಂದು ಗೊತ್ತಾಗಿದ್ದು ಇತ್ತೀಚೆಗಷ್ಟೆ. ಕುತೂಹಲದಿಂದ ಅವರ ಬದುಕು ಕಾದಂಬರಿಯನ್ನು ಖರೀದಿಸಿ ದಾಗ ಇಷ್ಟು ದಪ್ಪದ ಪುಸ್ತಕವನ್ನು ಯಾರು ಓದುತ್ತಾರೆ ಅಂತ ನಾನೇ ಗೊಣಗಿ ಕೊಂಡೆ. ಪುಟ ತೆರೆದಂತೆ ಓದಿನ ಖುಷಿ ಹೆಚ್ಚಿ ಪೂರ್ತಿಗೊಳಿಸುವ ವರೆಗೆ ವಿರಮಿಸಲಿಲ್ಲ.

ಅವರು ಬರಹಗಳಲ್ಲಿ ಬಳಸುತ್ತಿದ್ದ ನಮ್ಮೂರಿನ ಭಾಷೆಯನ್ನು ಓದುವುದ ರಲ್ಲೇ ಒಂದು ಖುಷಿಯಿದೆ. ಬೆಳಗು ಸತ್ತು ಸಂಜೆ ಹುಟ್ಟು ತಿತ್ತು, ಸಂಜೆ ಸತ್ತು ಬೆಳಗು ಹುಟ್ಟುತ್ತಿತ್ತು…ಹೀಗೆ ಹುಟ್ಟು ಸಾವುಗಳ ನಡುವೆ ಬದುಕು ತೂಗುತ್ತಿತ್ತು.

ಚಿತ್ತಾಲರು, ದೇಸಾಯಿಯವರು, ಅನಂತ ಮೂರ್ತಿಯವರು ಮತ್ತು ಕಾರಂತರನ್ನು ಓದಿದಾಗ ನಮಗೆಲ್ಲ ಬದುಕುವುದಕ್ಕೆ ಅನೇಕ ಮಾರ್ಗಗಳು ಸಿಕ್ಕಂತಾಗುತ್ತದೆ. ಅಂಥದ್ದೇ ಒಂದು ಮಾರ್ಗ ಈ ಕೃತಿಯಲ್ಲೂ ಕಂಡು ಬಂದಿತು. ಈ ಕೃತಿಯಲ್ಲಿರುವ ಕೆಳವರ್ಗದ ಜನರ ಬವಣೆ, ಕಷ್ಟ-ಕಾರ್ಪಣ್ಯಗಳು ಮತ್ತು ದೈನಂದಿನ ಬದುಕುಗಳೆಲ್ಲವೂ ನಮ್ಮನ್ನು ಬಡಿದೆಬ್ಬಿಸುತ್ತವೆ.

ಲೇಖಕಿಯ ಬರಹಗಳಲ್ಲಿನ ಸ್ತ್ರೀ ಪರ ನಿಲುವು, ಸಮಾನತೆ, ಜಾತಿ ಮೌಡ್ಯತೆ, ಜನರ ಆಚಾರ-ವಿಚಾರ, ಪ್ರಕೃತಿ ವರ್ಣನೆಗಳೆಲ್ಲವೂ ಓದುಗನನ್ನು ಆಕರ್ಷಿಸುತ್ತವೆ. ಜತೆಗೆ ಅವರ ಚಿಂತನೆಗಳು ಇವತ್ತಿಗೂ ಸತ್ಯ ಎಂದನ್ನಿಸುತ್ತವೆ.
ಮೊಘಲಾಯಿ ಪ್ರದೇಶದ ಅಪ್ಪಟ ಗ್ರಾಮ್ಯ ಭಾಷೆ ಈ ಕೃತಿಯಲ್ಲಿರುವ ಮತ್ತೂಂದು ವಿಶೇಷತೆ.

Advertisement

ಹಾಡ್ರೆ ದುರ್ಗಿ ಅಂದ್ರ ಏಟಕಿ ನಖರಾ
ಮಾಡ್ತಿರಲ್ರೆ ಹೊಯ್ಮಲ್ಲೇರೇ…
ಮ್ಯಾಲ ನೋಡಿದರ ಮುಗಲ ತುಂಬ
ಚುಕ್ಕಿಗೊಳ ನೆರೆದಾವ
ತೆಳಗ ನೋಡಿದರ ಬಯಲು ತುಂಬಾ
ಸಿಂದಿ ಬುರುಗಿನಂತ ಬೆಳ್ಳನ ಬೆಳದಿಂಗಳ ಬಿದ್ದಾದ
ನಿಮ್ಮುಂದ ತುಂಬಿದ ಸಿಂದಿ ಮಗಿಗೊಳು
ಎಲ್ಲೋರ ತಲ್ಯಾಗ ನಿಶಾ ಏರಾದ … ಹಾಡ್ರಿ ಚೌಡಕಿ
ಬಾರಸ್ಗೋತ ಒಂದೆಡ್ಡು ಹಾಡ ಹಾಡ್ರಿ ನಿಮ್ಮದನಿ ಕೇಳಿ
ಬಾಳದಿನ ಆಯ್ತು
ಇಂಥ ವರ್ಣನೆ ತುಂಬಾ ಖುಷಿ ಕೊಡುತ್ತದೆ.

ಗೀತಾ ನಾಗಭೂಷಣರವರು ಬದುಕಿನ ಏಳು- ಬೀಳುಗಳ ಮಧ್ಯೆಯೂ ಅನೇಕ ವಿಶಿಷ್ಟ ಮತ್ತು ವಿಶೇಷ ಕಥೆ, ಕಾದಂಬರಿಗಳನ್ನು ನಮಗೆ ಕೊಟ್ಟವರು.

ನವೋದಯ, ಪ್ರಗತಿಶೀಲ, ನವ್ಯ ಸಾಹಿತ್ಯ ಘಟ್ಟಗಳ ಸೆರಗು ಹಿಡಿದು ಬಂದ ಗೀತಾರವರು ಬಂಡಾಯ-ದಲಿತ ಸಾಹಿತ್ಯ ಚಳವಳಿಯಂತಹ ಸಂವೇದನೆಗಳಲ್ಲೂ ಗಮನ ಸೆಳೆದವರು. ಶೋಷಿತ ವರ್ಗದವರ ಈ ಬದುಕು ಕಾದಂಬರಿಯನ್ನು ವಿಶಿಷ್ಟ ರೀತಿಯಲ್ಲಿ ಹೆಣೆದಿದ್ದಲ್ಲದೆ, ಅವರ ನೋವಿಗೂ ನಲಿವನ್ನು ಒದಗಿಸಿದ್ದು ಉಲ್ಲೇಖನೀಯ.

– ಸಂಗಮೇಶ ಸಜ್ಜನ, ಕಲಬುರ್ಗಿ

Advertisement

Udayavani is now on Telegram. Click here to join our channel and stay updated with the latest news.

Next