ಮಂಗಳೂರು: “ನಾನು ಕೊರಗಜ್ಜನ ಭಕ್ತ. ಬಿಗ್‌ಬಾಸ್ ಮನೆಯಲ್ಲಿ ಟಾಸ್ಕ್ಗಳು ಸೇರಿದಂತೆ ಇಡೀ ಸೀಸನ್ ಗೆಲ್ಲಲು ಕೊರಗಜ್ಜನ ಆಶೀರ್ವಾದವೇ ಕಾರಣ. ಮಂಗಳೂರಿಗೆ ಆಗಮಿಸಿದಾಗ ಮೊದಲು ಕೊರಗಜ್ಜನ ಸನ್ನಿಧಿಗೆ ಹೋಗಬೇಕು ಅಂದುಕೊಂಡಿದ್ದೆ. ಅದರಂತೆ ತೆರಳುತ್ತಿದ್ದೇನೆ’ ಎಂದು ಬಿಗ್‌ಬಾಸ್ ಕನ್ನಡ 9ನೇ ಆವೃತ್ತಿ ಮತ್ತು ಒಟಿಟಿ ಬಿಗ್‌ಬಾಸ್ ವಿಜೇತ ರೂಪೇಶ್ ಶೆಟ್ಟಿ ಹೇಳಿದರು.
ರೂಪೇಶ್ ಗೆಲುವಿನ ಬಳಿಕ ಮೊದಲ ಬಾರಿ ರವಿವಾರ ಮಂಗಳೂರಿಗೆ ಆಗಮಿಸಿದ್ದು, ನೆಹರೂ ಮೈದಾನದಿಂದ ಕುತ್ತಾರಿನ ಕೊರಗಜ್ಜನ ಕ್ಷೇತ್ರದವರೆಗೆ ವಿಜಯ ಯಾತ್ರೆ ನಡೆಯಿತು.
ಮಾಧ್ಯಮದವರ ಜತೆ ಮಾತನಾಡಿದ ಅವರು, ನಾನೊಬ್ಬ ತುಳುವ. ನನ್ನ ಬಿಗ್‌ಬಾಸ್ ಯಾನಕ್ಕೆ ತುಳುನಾಡಿಗರು ಸೇರಿದಂತೆ ರಾಜ್ಯದ ಜನತೆ ಪ್ರೀತಿ ತೋರಿಸಿದ್ದಾರೆ ಎಂದರು. ಬಿಗ್‌ಬಾಸ್ ಮನೆಯಲ್ಲಿ ತುಳುನಾಡಿನ ಸಂಸ್ಕೃತಿ ಹುಲಿವೇಷವನ್ನು ಪ್ರದರ್ಶಿಸಲು ಅವಕಾಶ ನೀಡಿದ್ದು ತುಂಬಾ ಖುಷಿ ಯಾಯಿತು. ಬಿಗ್‌ಬಾಸ್ ಮತ್ತು ಒಟಿಟಿ ಸೀಸನ್ ಇತಿಹಾಸದಲ್ಲಿ ಅತ್ಯಂತ ಹೆಚ್ಚಿನ ಮತ ಪಡೆದವ ನಾನು ಎಂದು ತಿಳಿದು ಖುಷಿಯಾಗಿದೆ. ಇದು ಪ್ರತಿ ಅಭಿಮಾನಿಯ ಗೆಲುವು ಎಂದರು.
ಕನ್ನಡದಲ್ಲೂ ಅವಕಾಶ
ಕೆಲವೇ ದಿನಗಳಲ್ಲಿ ನನ್ನ ನಿರ್ದೇಶನದ “ಸರ್ಕಸ್’ ಎಂಬ ತುಳು ಚಲನಚಿತ್ರ ಬಿಡುಗಡೆಯಾಗಲಿದೆ. ಬಿಗ್‌ಬಾಸ್ ಗೆದ್ದ ಬಳಿಕ ಕನ್ನಡ ಚಲನಚಿತ್ರಗಳಿಂದಲೂ ಅವಕಾಶ ಒದಗಿ ಬರುತ್ತಿದೆ. ಐದಾರು ಚಿತ್ರಗಳಿಗೆ ಕರೆ ಬಂದಿದ್ದು, ಮುಂದಿನ ವಾರ ಸಂಪೂರ್ಣ ಮಾಹಿತಿ ನೀಡುತ್ತೇನೆ ಎಂದರು.
ಮೆರವಣಿಗೆಯುದ್ದಕ್ಕೂ ಹುಲಿ ವೇಷ, ಬೈಕ್ ರ್ಯಾಲಿ, ಚೆಂಡೆ ಆಕರ್ಷಣೆ ಪಡೆದಿತ್ತು. ಅಭಿಮಾನಿಗಳು ಸೆಲ್ಫಿ, ಫೋಟೋ ಕ್ಲಿಕ್ಕಿಸುತ್ತಿದ್ದರು.
ಶೇ. 50ರಷ್ಟು ಹಣ ಸಮಾಜ ಸೇವೆಗೆ
ಬಿಗ್‌ಬಾಸ್‌ನಲ್ಲಿ ಗೆದ್ದ ಶೇ. 50ರಷ್ಟು ಹಣವನ್ನು ಸ್ವಂತಕ್ಕೆ ಬಳಸುತ್ತೇನೆ. ಉಳಿದ ಶೇ. 50ರಷ್ಟನ್ನು ಸೂರಿಲ್ಲದೆ ಕಷ್ಟಪಡುತ್ತಿರುವ ಮೂರು ಕುಟುಂಬಗಳ ಸಹಾಯಕ್ಕೆ ಮತ್ತು ಆರ್ಥಿಕವಾಗಿ ಸಂಕಷ್ಟದಲ್ಲಿರುವ ತುಳು, ಕನ್ನಡ ಕಲಾವಿದರಿಗೆ ವಿನಿಯೋಗಿಸಬೇಕು ಎಂದು ಅಂದುಕೊಂಡಿದ್ದೇನೆ ಎಂದು ರೂಪೇಶ್ ಶೆಟ್ಟಿ ತಿಳಿಸಿದ್ದಾರೆ.