Advertisement

ʼಕನ್ನಡ ಭವನ’ಕ್ಕೆ ಸಿಗುತ್ತಾ ಅನುದಾನ?

02:59 PM Jun 04, 2022 | Team Udayavani |

ಬೀದರ: ಅಗತ್ಯ ಅನುದಾನದ ಮತ್ತು ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದಾಗಿ ಸಾಂಸ್ಕೃತಿಕ ನಗರಿ ಬೀದರನಲ್ಲಿ ತಲೆ ಎತ್ತಬೇಕಿದ್ದ ಸಾಹಿತ್ಯಾಸಕ್ತರ ಸ್ವಾಭಿಮಾನದ ಹೆಗ್ಗುರುತು “ಕನ್ನಡ ಭವನ’ ನಿರ್ಮಾಣ ನನೆಗುದಿಗೆ ಬಿದ್ದಿದೆ.

Advertisement

ಶನಿವಾರ ಬೀದರ ಪ್ರವಾಸ ಕೈಗೊಂಡಿರುವ ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಚಿವ ಸುನೀಲಕುಮಾರ, ಅರ್ಧಕ್ಕೆ ನಿಂತಿರುವ ಕಾಮಗಾರಿಗೆ ನೆರವು ಘೋಷಿಸುತ್ತಾರೆ ಎಂಬ ಆಶಾಭಾವ ಮೂಡಿದೆ. ಧರಿನಾಡಿನಲ್ಲಿ ಕನ್ನಡ ಭವನಕ್ಕಾಗಿ ಎರಡು ದಶಗಳಿಂದ ಸಂಘರ್ಷ ನಡೆಸಿದ ಕಸಾಪ, ಈಗ ಅರ್ಧಕ್ಕೆ ನಿಂತಿರುವ ಕಟ್ಟಡಕ್ಕೆ ಅನುದಾನಕ್ಕಾಗಿ ಜೋಳಿಗೆ ಹಿಡಿಯಬೇಕಾದ ಪರಿಸ್ಥಿತಿ ಬಂದಿದೆ.

ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದಿಂದ ಕಳೆದ ವರ್ಷ 2 ಕೊಟಿ ರೂ. ಮಂಜೂರು ಮಾಡಲಾಗಿತ್ತು. ಆದರೆ, ಕೋವಿಡ್‌ನಿಂದ ಆರ್ಥಿಕ ನೆಪವೊಡ್ಡಿ ಕೇವಲ 1 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿದೆ. ಇನ್ನೊಂದೆಡೆ ಸಂಸದರು ಮತ್ತು ಬೀದರ ಶಾಸಕರು ತಮ್ಮ ನಿಧಿಯಿಂದ ಘೋಷಿಸಿದ್ದ ತಲಾ 10 ಲಕ್ಷ ರೂ. ಬಿಡುಗಡೆಗೆ ನಿರ್ಲಕ್ಷ ತೋರುತ್ತಿದ್ದಾರೆ. ಹಾಗಾಗಿ ಶೇ.80ರಷ್ಟು ಪೂರ್ಣಗೊಂಡಿರುವ ಕಟ್ಟಡದ ಕಾಮಗಾರಿ ಈಗ ಹಣ ಇಲ್ಲದೇ ಕಳೆದ 5 ತಿಂಗಳಿಂದ ಸ್ಥಗಿತಗೊಂಡಿದೆ. ನಗರದ ಗುರುದ್ವಾರ ಪರಿಸರದ ಸರ್ವೇ ನಂ.60ರಲ್ಲಿ ಸುಮಾರು ಒಂದು ಎಕರೆ ಪ್ರದೇಶದಲ್ಲಿ ಸುಮಾರು 8 ಕೋಟಿ ರೂ. ವೆಚ್ಚದಲ್ಲಿ ಆಧುನಿಕ ತಂತ್ರಜ್ಞಾನ ಮತ್ತು ಸುಸಜ್ಜಿತ ಭವನ ನಿರ್ಮಾಣಕ್ಕೆ ಕಳೆದ ನ.22ರಂದು ಕಾಮಗಾರಿಗೆ ಚಾಲನೆ ನೀಡಲಾಗಿದೆ.

ಮೂರು ಪ್ರತ್ಯೇಕ ಕಟ್ಟಡಗಳನ್ನು ಒಳಗೊಂಡಿರುವ ಯೋಜನೆಯಡಿ ಗ್ರಂಥಾಲಯ, ಆರ್ಟ್‌ ಗ್ಯಾಲರಿ, ವಸತಿ ಗೃಹ, ಕಸಾಪ ಕಚೇರಿ, ಸಭಾಂಗಣವುಳ್ಳ ಒಂದು ಕಟ್ಟಡ, 600 ಜನ ಸಾಮರ್ಥ್ಯದ ಸಭಾ ಭವನ ಮತ್ತು ಬಯಲು ರಂಗ ಮಂದಿರದ ಎರಡು ಕಟ್ಟಡಗಳು ಹೊಂದಿವೆ. ಸದ್ಯ ಯೋಜನೆಯಡಿ ಆಡಳಿತ ಕಚೇರಿ ನಿರ್ಮಾಣ ಮಾತ್ರ ಕೈಗೆತ್ತಿಕೊಳ್ಳಲಾಗಿದೆ. ತಾತ್ಕಾಲಿಕ ಹಾಲ್‌ನ್ನು ಸಹ ಒಳಗೊಂಡಿದ್ದ ಆಡಳಿತ ಕಚೇರಿಯನ್ನು ಒಂದೆರಡು ತಿಂಗಳಲ್ಲಿ ಪೂರ್ಣಗೊಳಿಸಿ, ಅಲ್ಲಿಂದ ಕನ್ನಡದ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗಬೇಕೆಂಬ ಕಸಾಪ ಕನಸಿಗೆ ಅನುದಾನ ಕೊರತೆ ತಣ್ಣೀರೆರಚಿದಂತಾಗಿದೆ.

2ನೇ ಕಂತಿನ ಹಣಕ್ಕಾಗಿ ಪ್ರಾಧಿಕಾರಕ್ಕೆ ನಿರಂತರ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಪ್ರಾಧಿಕಾರದ ಬಳಿ ಹಣ ಇಲ್ಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದಲೇ ಪಡೆಯುವಂತೆ ಕೈ ಚಲ್ಲಿದೆ. ಕನ್ನಡ ಭವನಕ್ಕೆ ಒಂದಾದ ಮೇಲೊಂದು ಅಡೆತಡೆ ಎದುರಾಗುತ್ತಿರುವುದು ಕನ್ನಡಿಗರನ್ನು ಕೆರಳಿಸುತ್ತಿದ್ದು, ಚುನಾಯಿತ ಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

Advertisement

ಜಿಲ್ಲೆಯ ಪ್ರವಾಸ ಕೈಗೊಂಡಿರುವ ಸಚಿವ ಸುನೀಲಕುಮಾರ ಅವರು ಇತ್ತ ಗಮನ ಹರಿಸಿ, ಬಾಕಿ ಅನುದಾನವನ್ನು ಪ್ರಕಟಿಸಿ ಆದಷ್ಟು ಬೇಗ ಕಟ್ಟಡದ ಕಾಮಗಾರಿ ಪೂರ್ಣಗೊಳಿಸಲು ನೆರವಾಗುತ್ತಾರಾ ಎಂಬುದು ಕಾದು ನೋಡಬೇಕಿದೆ.

ಹಲವು ವರ್ಷಗಳ ಸಂಘರ್ಷ, ಅಡೆತಡೆಗಳನ್ನು ಪರಿಹರಿಸಿ 8 ಕೋಟಿ ರೂ. ವೆಚ್ಚದ ಕನ್ನಡ ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಆದರೆ, ಗಡಿ ಪ್ರಾಧಿಕಾರ ಮಂಜೂರು ಮಾಡಿದ 2 ಕೋಟಿ ರೂ. ಪೈಕಿ 1 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿರುವ ಕಾರಣ ಆರಂಭಿಕವಾಗಿ ಕೈಗೆತ್ತಿಕೊಂಡಿರುವ ಆಡಳಿತ ಕಚೇರಿ ಕೆಲಸವೂ ಸಹ ಸ್ಥಗಿತಗೊಂಡಿದೆ. ಈ ಬಗ್ಗೆ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಬೀದರಗೆ ಆಗಮಿಸಲಿರುವ ಸಂಸ್ಕೃತಿ ಇಲಾಖೆಯ ಸಚಿವ ಸುನೀಲಕುಮಾರ ಅವರು ಅನುದಾನದ ಘೋಷಣೆ ಮಾಡುವ ವಿಶ್ವಾಸ ಇದೆ. ಸುರೇಶ ಚನಶೆಟ್ಟಿ, ಅಧ್ಯಕ್ಷರು, ಜಿಲ್ಲಾ ಕಸಾಪ, ಬೀದರ

-ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next