Advertisement

ಕನ್ನಡ ಭವನ ನಿರ್ಮಾಣ: ಸದಸ್ಯರ ಜಟಾಪಟಿ

12:22 PM Feb 01, 2017 | Team Udayavani |

ಮೈಸೂರು: ಪಾಲಿಕೆ ಕೌನ್ಸಿಲ್‌ ಗಮನಕ್ಕೆ ತರದಂತೆ ಕನ್ನಡಭವನ ಕಟ್ಟಡ ನಿರ್ಮಿಸುತ್ತಿರುವ ಕುರಿತು ಪಾಲಿಕೆ ಕೌನ್ಸಿಲ್‌ ಸಭೆಯಲ್ಲಿ ಮಂಗಳವಾರ ಭಾರೀ ಚರ್ಚೆಗೆ ಕಾರಣವಾಯಿತು.

Advertisement

 ನಗರ ಪಾಲಿಕೆ ಕೌನ್ಸಿಲ್‌ ಸಭಾಂಗಣದಲ್ಲಿ ಮೇಯರ್‌ ಎಂ.ಜೆ.ರವಿಕುಮಾರ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಮಾಜಿ ಮೇಯರ್‌ ಬಿ.ಎಲ್‌.ಭೈರಪ್ಪ, ಜೆ.ಪಿ.ನಗರದ ಪಂಡಿತ್‌ ಪುಟ್ಟರಾಜ ಗವಾಯಿಗಳ ಕ್ರೀಡಾಂಗಣದಲ್ಲಿ ನಿರ್ಮಿಸುತ್ತಿರುವ ಕನ್ನಡ ಭವನ ಕಟ್ಟಡದ ಕಾಮಗಾರಿ ಶೇ.70 ಪೂರ್ಣಗೊಂಡಿದ್ದು, ಇದಕ್ಕೆ ಪಾಲಿಕೆ ಕೌನ್ಸಿಲ್‌ ಸಭೆಯಲ್ಲಿ ಒಪ್ಪಿಗೆ ನೀಡಬೇಕೆಂದು ಹೇಳಿದರು.

ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆರ್‌.ಲಿಂಗಪ್ಪ, ಕನ್ನಡ ಭವನ ನಿರ್ಮಾಣಕ್ಕಾಗಿ ಹಣ ಮೀಸಲಾಗಿದೆ ಹೊರತು, ನಿರ್ದಿಷ್ಟ ಜಾಗದಲ್ಲಿ ನಿರ್ಮಿಸಬೇಕೆಂಬ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಆದರೆ, ಪಾರ್ಕ್‌ಗೆ ಸೇರಿದ ಜಾಗದಲ್ಲಿ ಕನ್ನಡ ಭವನ ಕಟ್ಟಡ ಕಟ್ಟಲು ಅವ ಕಾಶವಿಲ್ಲ ಎಂದು ತಿಳಿಸಿದರು.

ನಗರ ಯೋಜನಾ ಸ್ಥಾಯಿ ಸಮಿತಿ ಅಧ್ಯಕ್ಷ ನಂದೀಶ್‌ಪ್ರೀತಂ ಮಾತನಾಡಿ, ಕನ್ನಡ ಭವನ ಕಟ್ಟಡ ನಿರ್ಮಾಣಕ್ಕೆ ಯಾವುದೇ ವಿರೋಧವಿಲ್ಲ. ಆದರೆ, ಈ ಕಟ್ಟಡ ಕ್ರಮ ಬದ್ಧವಾಗಿರದಿದ್ದರೆ, ಪೊಲೀಸ್‌ ಆಯುಕ್ತರ ಕಚೇರಿ ಕಟ್ಟಡ ನಿರ್ಮಾಣಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿರುವಂತೆ ಇದಕ್ಕೂ ತಡೆಯಾಜ್ಞೆ ನೀಡುವ ಸಾಧ್ಯತೆ ಎದುರಾಗಲಿದೆ ಎಂದರು.

ಇದಕ್ಕೆ ದನಿ ಗೂಡಿಸಿದ ಸಂದೇಶ್‌ಸ್ವಾಮಿ ಮಾತನಾಡಿ, ಯಾವುದೇ ಕಾಮಗಾರಿ ಕೈಗೆತ್ತಿಕೊಳ್ಳುವ ಮುನ್ನ ಪಾಲಿಕೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸ ಬೇಕಿದ್ದು, ಮನಬಂದಂತೆ ಪಾಲಿಕೆ ಹಣವನ್ನು ಖರ್ಚು ಮಾಡು ತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Advertisement

ಬಳಿಕ ಮಾತನಾಡಿದ ಬಿ.ಎಲ್‌.ಭೈರಪ್ಪ, ಕನ್ನಡ ಭವನ ನಿರ್ಮಿಸುತ್ತಿರುವ ಜಾಗ ಯಾವುದೇ ಪಾರ್ಕ್‌ಗೆ ಸೇರಿಲ್ಲ. ಇದು ಸಾರ್ವಜನಿಕರ ಚಟುವಟಿಕೆಗೆ ಮೀಸಲಿಟ್ಟಿರುವ ಜಾಗವಾಗಿದ್ದು, ಸ್ಥಳ ಪರಿಶೀಲನೆ ನಡೆಸಿದ ಬಳಿಕವೇ ಕಾಮಗಾರಿ ಆರಂಭಿಸಲಾಗಿದೆ. ಆದರೂ ಇಷ್ಟೊಂದು ರಾದ್ಧಾಂತ ಮಾಡುವುದು ಸರಿಯಲ್ಲ. ನಿಮಗೆ ಬೇಡವಾದರೆ ತನ್ನ ಮನೆಯನ್ನೇ ಬಿಟ್ಟುಕೊಡುತ್ತೇನೆ ಎಂದು ತಿಳಿಸಿದರು.

ಬಳಿಕ ಮತ್ತೂಬ್ಬ ಸದಸ್ಯ ಪ್ರಶಾಂತ್‌ಗೌಡ ಮಾತನಾಡಿ, ಕೌನ್ಸಿಲ್‌ ಗಮನಕ್ಕೆ ತಾರದೆ ಕನ್ನಡ ಭವನ ನಿರ್ಮಾಣವಾಗುತ್ತಿದೆ. ಆದರೆ ಎನ್‌.ಎಸ್‌. ರಸ್ತೆಯಲ್ಲಿರುವ ಬಾಹುಸಾರ್‌ ಈಜುಕೊಳ ನಿರ್ಮಾಣ ಕಾಮಗಾರಿ ಈವರೆಗೂ ಆರಂಭವಾಗಿಲ್ಲ. ಈ ಬಗ್ಗೆ ಸರಿಯಾದ ಮಾಹಿತಿ ನೀಡಬೇಕೆಂದು ಆಗ್ರಹಿಸಿದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಪಾಲಿಕೆ ಸದಸ್ಯರಾದ ಜಗದೀಶ್‌ ಹಾಗೂ ಎಚ್‌.ಎನ್‌.ಶ್ರೀಕಂಠಯ್ಯ ಸಹ ದನಿಗೂಡಿಸಿದರು.

ನಡುವೆ ಈಜುಕೊಳ ವಿಚಾರದಲ್ಲಿ ಮಾಹಿತಿ ಕೊಡಬೇಕೆಂದು ಆಗ್ರಹಿಸಿ ಸದಸ್ಯರಾದ ಪ್ರಶಾಂತಗೌಡ ಹಾಗೂ ಜಗದೀಶ್‌ ಕೌನ್ಸಿಲ್‌ ಸಭಾಂಗಣದ ಬಾವಿಗೆ ಇಳಿದು ಧರಣಿ ನಡೆಸಿದರು. ಈ ಸಂದರ್ಭದಲ್ಲಿ ಮಾಹಿತಿ ನೀಡಿದ ಪಾಲಿಕೆ ಆಯುಕ್ತರ ಮಾತಿನಿಂದ ತೃಪ್ತರಾಗದ ಸದಸ್ಯರು ಪ್ರತಿಭಟನೆ ಮುಂದುವರಿಸಿದರು. ಮಧ್ಯಪ್ರವೇಶಿಸಿದ ಮೇಯರ್‌, ಈ ಬಗ್ಗೆ ಸೂಕ್ತ ಮಾಹಿತಿ ಕೊಡಿಸುವುದಾಗಿ ಭರವಸೆ ನೀಡುವ ಮೂಲಕ ಎಲ್ಲಾ ಗೊಂದಲಗಳಿಗೆ ತೆರೆ ಎಳೆದರು.

ಕಟ್ಟಡ ನೆಲಸಮಕ್ಕೆ ಅಸ್ತು: ನಗರದ ಲ್ಯಾನ್ಸ್‌ಡೌನ್‌ ಕಟ್ಟಡ ನಿರ್ಮಾಣ ನೆಲಸಮಗೊಳಿಸಿ ಪುನರ್‌ ನಿರ್ಮಾಣ ಮಾಡುವ ಬಗ್ಗೆ ಸರ್ಕಾರಕೆ ಪ್ರಸ್ತಾವನೆ ಸಲ್ಲಿಸಲು ಪಾಲಿಕೆ ಸಭೆಯಲ್ಲಿ ಒಪ್ಪಿಗೆ ನೀಡಲಾ ಯಿತು. ಕಟ್ಟಡವನ್ನು ಪುನರ್‌ ನಿರ್ಮಾಣಕ್ಕೆ ಪಾಲಿಕೆ ಒಪ್ಪಿಗೆ ಸಿಕ್ಕಿದ್ದು, ಪುನರ್‌ ನಿರ್ಮಾಣ ಕಾಮಗಾರಿಗೆ ಡಿಪಿಆರ್‌ ಸಿದ್ಧವಾದ ಬಳಿಕ ಮತ್ತೂಮ್ಮೆ ಪಾಲಿಕೆ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯ ಲಾಗುತ್ತದೆ. ಈಗಾಗಲೇ ದೇವರಾಜ ಮಾರುಕಟ್ಟೆ ಪುನರ್‌ ನಿರ್ಮಿಸುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇದೀಗ ಲ್ಯಾನ್ಸ್‌ಡೌನ್‌ ಕಟ್ಟಡ ನೆಲಸಮಗೊಳಿಸಲು ಪಾಲಿಕೆ ಒಪ್ಪಿಗೆ ಸೂಚಿಸಿದೆ.

ಪಾಲಿಕೆ ಸ್ಥಾಯಿ ಸಮಿತಿಗಳಿಗೆ ಸದಸ್ಯರ ಆಯ್ಕೆ
ಮೈಸೂರು: ಮೈಸೂರು ಮಹಾ ನಗರ ಪಾಲಿಕೆಯ ವಿವಿಧ ಸ್ಥಾಯಿ ಸಮಿತಿಗಳಿಗೆ ಮೇಯರ್‌ ಎಂ.ಜೆ.ರವಿಕುಮಾರ್‌ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಸರ್ವಾನುಮತದಿಂದ ಸದಸ್ಯರನ್ನು ಆಯ್ಕೆ ಮಾಡಲಾಯಿತು. 

ಶ್ರೀರಂಗಚಾರ್ಲು ಸ್ಮಾರಕ ಪುರಭವನ ಸಮಿತಿ: ಎಸ್‌.ಬಾಲಸುಬ್ರಹ್ಮಣ್ಯಂ (ಸ್ನೇಕ್‌ ಶ್ಯಾಂ), ಹಸೀನಾತಾಜ್‌, ಬಿ.ವಿ.ಮಂಜುನಾಥ್‌, ಶಿವಮ್ಮ, ಪುಷ್ಪಲತಾ, ಭಾಗ್ಯವತಿ, ಜೆ.ಎಸ್‌.ಜಗದೀಶ್‌. ಪೂರ್‌ ಸ್ಟೂಡೆಂಟ್ಸ್‌ ಫೀಡಿಂಗ್‌ ಕಮಿಟಿ (ಅಂಬಳೆ ಅಣ್ಣಯ್ಯ ಪಂಡಿತರ ಉಚಿತ ವಿದ್ಯಾರ್ಥಿನಿಲಯ) ಮೇಯರ್‌-ಅಧ್ಯಕ್ಷರು, ಉಪ ಮೇಯರ್‌- ಪದನಿಮಿತ್ತ ಸದಸ್ಯರು, ಎಂ.ಕೆ.ಶಂಕರ್‌, ಎಂ.ಬಿ.ಜಗದೀಶ್‌, ಇಂದಿರಾ, ಎಚ್‌.ಎನ್‌.ಶ್ರೀಕಂಠಯ್ಯ, ಪಿ.ಪ್ರಶಾಂತ್‌ಗೌಡ (ಸದಸ್ಯರು). 

ಫಾರಂ ಸಮಿತಿ: ಉಪ ಮೇಯರ್‌-ಅಧ್ಯಕ್ಷರು, ಆರ್‌. ಲಿಂಗಪ್ಪ, ಜೆ.ಎಚ್‌.ವನಿತಾ, ರಾಮಪ್ರಸಾದ್‌, ಆರ್‌. ನಾಗರಾಜ್‌,  ಎಸ್‌.ಉಮಾಮಣಿ, ರತ್ನಮ್ಮ (ಸದಸ್ಯರು).

Advertisement

Udayavani is now on Telegram. Click here to join our channel and stay updated with the latest news.

Next