Advertisement

ಕನ್ನಡ ಅನ್ನದ ಭಾಷೆಯಾಗಲಿ: ಡಾ|ಪಟ್ಟಣಶೆಟ್ಟಿ

11:14 AM Mar 27, 2022 | Team Udayavani |

ಧಾರವಾಡ: ಕನ್ನಡವು ಚಿನ್ನದ ಭಾಷೆ ಆಗದಿದ್ದರೂ ಪರವಾಗಿಲ್ಲ, ಆದರೆ ಅನ್ನದ ಭಾಷೆಯಾಗಲಿ ಎಂದು ಹಿರಿಯ ಸಾಹಿತಿ ಡಾ|ಸಿದ್ಧಲಿಂಗ ಪಟ್ಟಣಶೆಟ್ಟಿ ಹೇಳಿದರು.

Advertisement

ಜಿಲ್ಲಾ ಕಸಾಪ ಸಾಹಿತ್ಯ ಭವನದ ಆವರಣದಲ್ಲಿ ಕಸಾಪ ಹಮ್ಮಿಕೊಂಡ 14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಆಶಯ ಭಾಷಣ ಮಾಡಿದ ಅವರು, ಕನ್ನಡದ ಹತ್ತಿರ ಕನ್ನಡಿಗರು ಹೋದಾಗ ಮಾತ್ರ ಕನ್ನಡ ಭಾಷೆ ಉಳಿದು, ಬೆಳೆದು ಬರಲು ಸಾಧ್ಯ. ಈ ನಿಟ್ಟಿನಲ್ಲಿ ಕನ್ನಡ ಕಟ್ಟುವ ಕಾರ್ಯ ಆಗಬೇಕು. ವೃತ್ತಿ ಸಾಹಿತ್ಯದ ಬಗ್ಗೆ ಗಂಭೀರ ಚಿಂತನೆ ಅಗತ್ಯವಿದೆ. ಒಟ್ಟಿನಲ್ಲಿ ಕನ್ನಡವು ಕುರ್ಚಿ ಮೇಲೆ ಕುಳಿತವರ ಭಾಷೆಯಾಗದೇ ರೈತನ ಭಾಷೆ ಆಗಲಿ. ಜನಸಾಮಾನ್ಯರ ಅಚ್ಚುಮೆಚ್ಚಿನ ಭಾಷೆಯಾಗಲಿ ಎಂದರು.

ಜಿಲ್ಲೆ, ತಾಲೂಕಿಗೊಂದು ವಿಶಿಷ್ಟತೆಯ ಹೊಂದಿರುವ ಕನ್ನಡ ಭಾಷೆಯು ಆಯಾ ಪ್ರದೇಶದಲ್ಲಿ ವಿಶಿಷ್ಟ ಪದಕೋಶಗಳನ್ನೇ ಹೊಂದಿದೆ. ಹೀಗಾಗಿ ಈ ಪದಕೋಶಗಳ ಸಂಗ್ರಹ ಈವರೆಗೂ ಆಗದ ಕಾರಣ ಈಗಲೂ ಜಿಲ್ಲಾಮಟ್ಟ ಹಾಗೂ ತಾಲೂಕುಮಟ್ಟದ ನಿಘಂಟುವಿನ ಕೊರತೆ ಇದೆ. ಈ ಕೊರತೆ ನೀಗಿಸಲು ಪದಕೋಶ ಸಂಗ್ರಹ ಕಾರ್ಯ ಆಗಬೇಕಿದೆ ಎಂದು ಹೇಳಿದರು.

ಸಮ್ಮೇಳನ ಉದ್ಘಾಟಿಸಿದ ಹಿರಿಯ ಸಾಹಿತಿ ಡಾ| ಗುರುಲಿಂಗ ಕಾಪಸೆ ಮಾತನಾಡಿ, ಚಿಂತನೆ, ಯೋಚನೆ ನಡೆಯದೇ ಯಾವುದೇ ಸಾಹಿತ್ಯ ರಚನೆ ಸಾಧ್ಯವಿಲ್ಲ. ಸಾಹಿತ್ಯಕ್ಕೆ ಸಂಘಟನೆ, ಗುಂಪು ಅಗತ್ಯವಿದೆ. ಅದರಲ್ಲೂ ತಾತ್ವಿಕ ಹಿನ್ನೆಲೆ ಇಲ್ಲದ ಯಾವುದೇ ಸಾಹಿತ್ಯ ಬೆಳೆಯುವುದು ಅಸಾಧ್ಯ. ಭಾರತೀಯ ಯಾವ ಸಾಹಿತ್ಯಕ್ಕಿಂತಲೂ ಕನ್ನಡ ಸಾಹಿತ್ಯ ಕಡಿಮೆ ಇಲ್ಲ. ಇದಕ್ಕೆ ಜ್ಞಾನಪೀಠ ಪ್ರಶಸ್ತಿಗಳು ಅರಸಿ ಬಂದಿರುವುದೇ ಸಾಕ್ಷಿ ಎಂದರು.

Advertisement

ವಿಧಾನ ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ, ಕರ್ನಾಟಕ ಏಕೀಕರಣ ಹಾಗೂ ಗೋಕಾಕ ಚಳವಳಿಗೆ ಸ್ಪೂರ್ತಿ ನೀಡಿದ ಸ್ಥಳ ಧಾರವಾಡ. ಇದಲ್ಲದೇ, ಸಾಹಿತ್ಯ, ಸಂಗೀತ, ಸಂಸ್ಕೃತಿಗೆ ಮಹತ್ವದ ಕೊಡುಗೆ ನೀಡಿದೆ. ಕನ್ನಡದ ಬಗ್ಗೆ ಅಭಿಮಾನ ಬರೀ ಮಾತಾಗದೇ ಕೃತಿ ರೂಪದಲ್ಲಿ ತರಬೇಕಿದೆ ಎಂದು ಹೇಳಿದರು.

ಕಸಾಪ ಜಿಲ್ಲಾಧ್ಯಕ್ಷ ಡಾ| ಲಿಂಗರಾಜ ಅಂಗಡಿ ಪ್ರಾಸ್ತಾವಿಕ ಮಾತನಾಡಿದರು. ನಿಕಟಪೂರ್ವ ಸಮ್ಮೇಳಾನಾಧ್ಯಕ್ಷ ಡಾ|ಬಸವರಾಜ ಸಾದರ ಅವರು 14ನೇ ಸಮ್ಮೇಳನಾಧ್ಯಕ್ಷ ಡಾ| ರಮಾಕಾಂತ ಜೋಶಿ ಅವಿಗೆ ಕನ್ನಡ ಧ್ವಜ ಹಸ್ತಾಂತರಿಸಿದರು.

ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ, ಕಸಾಪ ಜಿಲ್ಲಾಧ್ಯಕ್ಷ ಡಾ| ಲಿಂಗರಾಜ ಅಂಗಡಿ, ಕಸಾಪ ಹಾವೇರಿ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ಕವಿಸಂ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ವಿಪ ಮಾಜಿ ಸಭಾಪತಿ ಡಾ| ವೀರಣ್ಣ ಮತ್ತಿಕಟ್ಟಿ, ಡಾ|ಶರಣಪ್ಪ ಕೊಟಗಿ ಇನ್ನಿತರರಿದ್ದರು.

 ರಂಗಮಂದಿರ ಅನುದಾನಕ್ಕೆ ಭರವಸೆ:  ವಿದ್ಯಾಕಾಶಿ, ಸಾಂಸ್ಕೃತಿಕ ನೆಲೆಬೀಡಾದ ಧಾರವಾಡ ಜಿಲ್ಲೆಯಲ್ಲಿ ರಂಗಮಂದಿರ ಕೊರತೆಯಿದ್ದು, ರಂಗಮಂದಿರ ನಿರ್ಮಾಣಕ್ಕಾಗಿ ಕಸಾಪ ಈಗಾಗಲೇ 25 ಲಕ್ಷ ರೂ. ಅನುದಾನವಿದೆ. ಇನ್ನೂ ಅನುದಾನ ಬೇಕಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಡಾ|ಲಿಂಗರಾಜ ಅಂಗಡಿ ಹೇಳಿದರು.  ಇದಕ್ಕೆ ಸ್ಪಂದಿಸಿದ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರೊಂದಿಗೆ ಚರ್ಚಿಸಿ 75 ಲಕ್ಷ ರೂ. ಅನುದಾನ ಕೊಡಿಸುವ ಭರವಸೆ ನೀಡಿದರು. ಇದಕ್ಕೆ ಧ್ವನಿಗೂಡಿಸಿದ ಸಚಿವ ಶಂಕರಪಾಟೀಲ ಮುನೇನಕೊಪ್ಪ, ವಿಧಾನ ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ, ರಂಗ ಮಂದಿರ ನಿರ್ಮಾಣಕ್ಕೆ ಸಹಕಾರದ ಜತೆಗೆ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು.

 

Advertisement

Udayavani is now on Telegram. Click here to join our channel and stay updated with the latest news.

Next