ಗೋವಾ : ಗೋವಾದ ಕಲ್ಲಂಗೂಟ್ ದಲ್ಲಿ ಭಾನುವಾರ ಗಡಿ ಪ್ರಾಧಿಕಾರ ಮತ್ತು ಗೋವಾ ಕನ್ನಡ ಮಹಾಸಂಘಗಳ ಆಶ್ರಯದಲ್ಲಿ ಕನ್ನಡ ಜಾಗೃತಿ ಸಾಂಸ್ಕೃತಿಕ ಉತ್ಸವ ನಡೆಯಿತು.
ಗಡಿ ರಾಜ್ಯದ ಗೋವಾದಲ್ಲಿ ಕನ್ನಡ ಜಾಗೃತಿ ಸಾಂಸ್ಕೃತಿಕ ಉತ್ಸವ ಸಮಾರಂಭದಲ್ಲಿ ಅಧ್ಯಕ್ಷತೆ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ. ಸೋಮಶೇಖರ ವಹಿಸಿ ಮಾತನಾಡಿದರು.
ಕರ್ನಾಟಕದಲ್ಲಿ ಕೊಂಕಣಿ ಸಾಹಿತ್ಯ ಅಕಾಡೆಮಿಗೆ ಶಾಶ್ವತ ಅನುದಾನ ನೀಡಿದಂತೆ ಗೋವಾ ಸರ್ಕಾರವು ಕನ್ನಡ ಸಾಹಿತ್ಯ ಅಕಾಡೆಮಿಯನ್ನು ಗೋವಾದಲ್ಲಿ ಪ್ರಾರಂಭಿಸಲಿ. ಕರ್ನಾಟಕದಲ್ಲಿ ಕೊಂಕಣಿ ಭಾಷೆಗೆ ಕರ್ನಾಟಕ ಸರ್ಕಾರ ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಾರಂಭಿಸಿ ವಾರ್ಷಿಕ ಅನುದಾನ ನೀಡಿ ಕೊಂಕಣಿ ಭಾಷೆಯನ್ನು ಪ್ರೋತ್ಸಾಹಿಸಿರುವ ಹಾಗೆ ಗೋವಾ ಸರ್ಕಾರವು ಲಕ್ಷಾಂತರ ಕನ್ನಡಿಗರು ಇರುವ ಗೋವಾದಲ್ಲಿ ಗೋವಾ ಸರ್ಕಾರವು ಕನ್ನಡ ಭಾಷೆಯನ್ನು ಪ್ರೋತ್ಸಾಹಿಸಲು ಕನ್ನಡ ಸಾಹಿತ್ಯ ಅಕಾಡೆಮಿ ಯೊಂದನ್ನು ಸ್ಥಾಪಿಸಲಿ ಎಂದರು.
‘ಕುಮಾರವ್ಯಾಸರು ಹಾಡಿದರೆಂದರೆ ಕಲಿಯುಗ ದ್ವಾಪರವಾಗುವುದು’ ಕವಿರಾಜಮಾರ್ಗದ ಕರ್ತೃ ಅಮೋಘವಾಗಿ ಚಿತ್ರಿಸಿದ್ದಾರೆ. ಆದಿಕವಿ ಪಂಪ, ರನ್ನ, ಪೊನ್ನರ ಹಳೆಗನ್ನಡ ಹರಿಹರ, ರಾಘವಾಂಕ, ಶರಣರ ನಡುಗನ್ನಡ ನಂತರ ಹೊಸಗನ್ನಡ ಹೀಗೆಯೇ ಭವ್ಯ ಸಾಹಿತ್ಯ ಪರಂಪರೆ ಬೆಳೆಯುತ್ತಲೇ ಇದೆ. ‘ಚಲುವನರಸುವ ಜಾಣ ಬಂದು ನೋಡು’ ಈ ಕನ್ನಡ ಅಕ್ಷರಗಳು ಬಳ್ಳಿಯನೇರಿರುವ ಹೂಕಾಯಿ ಹಣ್ಣುಗಳಂತೆ ಎಷ್ಟು ಸುಂದರ, ಕೇಶಿರಾಜನ ‘ಶಬ್ದಮಣಿದರ್ಪಣ’ ಕ್ಕೆ ಸರಿಸಾಟಿ ಬೇರೆ ದರ್ಪಣವಿಲ್ಲ. ನವ್ಯ, ನವೋದಯ, ಬಂಡಾಯ ಹೀಗೆ ಹೊಸ ಹೊಸ ಪ್ರಯೋಗಗಳಾಗಿವೆ. ರೂಪಕ, ಉಪಮಾ, ಅಲಂಕಾರ ಸಾಮ್ರಾಜ್ಯ ಚಕ್ರವರ್ತಿಗಳು ಕನ್ನಡ ನೆಲದಲ್ಲಿ ರಾರಾಜಿಸಿದ್ದಾರೆ.ಭಾಷಾಭಂಡಾರ ಚಿನ್ನದ ರೇಖೆಯಲ್ಲಿ ಕುಂದಣವಿದ್ದಂತಿದೆ ಎಂದು ಮಾರ್ಮಿಕವಾಗಿ ಹೇಳಿದರು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಹುಕ್ಕೇರಿ ಹಿರೇಮಠದ ಶ್ರೀಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ,ಕರ್ನಾಟಕದಷ್ಟೇ ಪ್ರಾಚೀನತೆ ಹಾಗು ಶ್ರೀಮಂತ ಪರಂಪರೆಯನ್ನು ಹೊಂದಿರುವಂತಹದ್ದು ನಮ್ಮ ತಾಯಿ ನಾಡು ಕನ್ನಡ. ದ್ರಾವಿಡ ಭಾಷೆಗಳಲ್ಲಿ ಮುಕುಟಪ್ರಾಯವಾಗಿರುವ ಕನ್ನಡವು ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳ ಜೊತೆಗೆ ಶಾಸ್ತ್ರೀಯ ಸ್ಥಾನಮಾನ ಪಡೆದ ಮೃದು-ಮಧುರ ಭಾಷೆಯಾಗಿದೆ. ’ಎನಿತು ಇನಿದು ಈ ಕನ್ನಡ ನುಡಿಯು, ಮನವನು ತಣಿಸುವ ಮೋಹನ ಸುಧೆಯು ಎಂದು ಕವಿ ಬೆಟಗೇರಿ ಕೃಷ್ಣಶರ್ಮರು ಮನದುಂಬಿ ಹಾಡಿದ್ದಾರೆ. ಪಂಪ-ರನ್ನರು, ಬಸವಾದಿ ಶರಣರು, ದಾಸಶ್ರೇಷ್ಠರು, ಹರಿಹರ, ರಾಘವಾಂಕ, ಕುಮಾರವ್ಯಾಸಾದಿ ಪ್ರಾಚೀನ ಕವಿಗಳು, ರಸ ಋಷಿಗಳು ಹಾಗು ಕುವೆಂಪು, ಬೇಂದ್ರೆ, ಕಣವಿ, ಶಿವರುದ್ರಪ್ಪನವರಂತಹ ಆಧುನಿಕ ಕವಿ ಸಾಹಿತಿಗಳು ಕನ್ನಡವನ್ನು ಸಮೃದ್ಧಗೊಳಿಸಿದ್ದಾರೆ. ಆ ನಿಟ್ಟಿನಲ್ಲಿ ಗೋವಾದಲ್ಲಿ ಕನ್ನಡ ಕಟ್ಟುವ ಕೆಲಸವಾಗಲಿ, ಗಡಿ ಅಭಿವೃದ್ಧಿ ಪ್ರಾಧಿಕಾರವು ಹಮ್ಮಿಕೊಂಡ ಈ ಸಮಾರಂಭ ಅಭೂತಪೂರ್ವವಾದುದು ಎಂದರು.
ಎಲ್ಲರನ್ನು ಸ್ವಾಗತಿಸಿ ಮಾತನಾಡಿದ ಗಡಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತಿಹಳ್ಳಿ, ಪ್ರಾಚೀನ ಕಾಲದಿಂದಲೂ ನಮ್ಮ ನಾಡು ಧರ್ಮ, ಸಾಹಿತ್ಯ, ಸಂಗೀತ, ನೃತ್ಯ, ಕಲೆ, ಕ್ರೀಡೆ, ಶಿಲ್ಪ ಮತ್ತು ವಾಸ್ತು ಶಿಲ್ಪಗಳಿಗೆ ಹೆಸರಾದುದು. ಶೈವ, ವೈಷ್ಣವ, ಜೈನ, ಬೌದ್ಧ, ಲಿಂಗಾಯತ, ಇಸ್ಲಾಂ, ಕ್ರೈಸ್ತ ಮುಂತಾದ ಧರ್ಮಗಳಿಗೆ ಆಶ್ರಯ ನೀಡಿ ಸರ್ವಧರ್ಮಧೇನು ನಿವಹಕ್ಕಾಡುಂಬೊಲಂ ಎಂಬ ಕವಿವಾಣಿಗೆ ಅನ್ವರ್ಥಕವಾದುದು ಈ ಕನ್ನಡನಾಡು. ಪ್ರಾಧಿಕಾರ ಆ ನಿಟ್ಟಿನಲ್ಲಿ ಕೆಲಸಮಾಡುತ್ತಿದೆ ಎಂದರು.
ಮೆರವಣಗೆ ಉತ್ಸವಕ್ಕೆ ಗೋವಾ ರಾಮಕೃಷ್ಣ ಮಠದ ಪರಮಪೂಜ್ಯ ಶ್ರೀ ಮಹೇಶಾತ್ಮಾನಂದ ಸ್ವಾಮಿಜಿಗಳು ಚಾಲನೆ ನೀಡಿ ಮಾತನಾಡಿದರು.
ವಿವಿಧ ಕಲಾತಂಡಗಳು ಭಾಗವಹಿಸಿದ್ದವು, ಶ್ರೀಮತಿ ಪುಷ್ಪಾರಾಧ್ಯ, ಶಿವು, ಕುಮಾರ ತಂಡ, ಬೆಂಗಳೂರು ಇವರಿಂದ ಸುಗಮ ಸಂಗೀತ ಜರುಗಿತು. ಸ್ವಾಮಿ ಎಂಟರ್ ಪ್ರೈಸಸ್ ಕಾರ್ಯಕ್ರಮ ಸಂಯೋಜಿಸಿದ್ದರು. ಗೋವಾ ಕನ್ನಡ ಮಹಾಹಂಘದ ಸಿದ್ಧಣ್ಣ ಮೇಟಿ, ಹನುಮಂತರೆಡ್ಡಿ ಸಿರೂರ, ದತಪ್ರಸಾದ್, ಶಾನ್ ಮಾರ್ಟಿನ್, ಮಹೇಶ ಬಾಬು ಸುರ್ವೆ ಸೇರಿದಂತೆ ಇತರರು ಇದ್ದರು. ಪ್ರತಿಭಾ ಅವರು ಕಾರ್ಯಕ್ರಮ ನಿರೂಪಿಸಿದರು.
ಗೋವಾದಲ್ಲಿ ಕನ್ನಡ ಭವನ ಕಟ್ಟಲು ಹತ್ತು ಕೋಟಿ ರೂಗಳನ್ನು ಮಂಜೂರು ಮಾಡಿದ ಮುಖ್ಯಮಂತ್ರಿ ಶ್ರೀಬಸವರಾಜ ಬೊಮ್ಮಾಯಿಯವರನ್ನು ಅಭಿನಂದಿಸುತ್ತೇವೆ. ಆದಷ್ಟು ಬೇಗ ಕನ್ನಡ ಭವನ ನಿರ್ಮಾಣ ವಾಗಲಿ.
-ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ ಹುಕ್ಕೇರಿ,