ಪ್ರತಿವರ್ಷ ಒಂದಷ್ಟು ಕನ್ನಡದ ನಾಯಕ ನಟಿಯರು ಪರಭಾಷೆಯತ್ತ ಮುಖ ಮಾಡುತ್ತಿರುತ್ತಾರೆ. ಈಗ ಆ ಸಾಲಿಗೆ ಸೇರ್ಪಡೆಯಾಗುತ್ತಿರುವ ನಟಿ ರೂಪಿಕಾ. ಹೌದು, ಕೋವಿಡ್ ಭಯ, ಲಾಕ್‌ಡೌನ್ ಆತಂಕದ ನಡುವೆಯೇ ನಟಿ ರೂಪಿಕಾ ಸದ್ದಿಲ್ಲದೆ, ತೆಲುಗು ಚಿತ್ರವೊಂದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ, ರೂಪಿಕಾ ಅಭಿನಯಿಸಿರುವ ಚೊಚ್ಚಲ ತೆಲುಗು ಚಿತ್ರದ ಹೆಸರು “ಚಿಲ್ ಬ್ರೋ’ ತೆಲುಗಿನ ಪವನ್ ಕೇಸರಿ, ಸೂರ್ಯ ಶ್ರೀನಿವಾಸ್ ಇಬ್ಬರು ನಾಯಕರಾಗಿ ಅಭಿನಯಿಸುತ್ತಿರುವ ಈ ಚಿತ್ರದಲ್ಲಿ ರೂಪಿಕಾ ಅವರದ್ದು ನಾಯಕಿಯ ಪಾತ್ರ. ಸಿರಿ ಎನ್ನುವ ಸಾಫ್ಟ್ವೇರ್ ಇಂಜಿನಿಯರ್ ಆಗಿ ರೂಪಿಕಾ ತಮ್ಮ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಔಟ್ ಆ್ಯಂಡ್ ಔಟ್ ರೊಮ್ಯಾಂಟಿಕ್ ಕಾಮಿಡಿ ಕಥಾ ಹಂದರವಿರುವ “ಚಿಲ್ ಬ್ರೋ’ ಚಿತ್ರಕ್ಕೆ ಕುಂಚಮ್ ಶಂಕರ್ ನಿರ್ದೇಶನವಿದೆ.
“ಅರುಣೋದಯ ಪ್ರೊಡಕ್ಷನ್ಸ್’ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಬಹುಭಾಗ ಚಿತ್ರೀಕರಣ ಹೈದರಾಬಾದ್ ಸುತ್ತಮುತ್ತ ನಡೆಸಲಾಗಿದೆ.
ತಮ್ಮ ಮೊದಲ ತೆಲುಗು ಚಿತ್ರದ ಬಗ್ಗೆ ಮಾತನಾಡುವ ರೂಪಿಕಾ, “ಕೋವಿಡ್ ಭಯದ ನಡುವೆಯೇ ಮಾಡಿದಂಥ ಸಿನಿಮಾವಿದು. ಸಿನಿಮಾದಲ್ಲಿ ತುಂಬ ಒಳ್ಳೆಯ ಸಬ್ಜೆಕ್ಟ್ ಇದೆ. ರೊಮ್ಯಾಂಟಿಕ್-ಕಾಮಿಡಿ ಶೈಲಿಯಲ್ಲಿ ಇಡೀ ಸಿನಿಮಾ ನಡೆಯುತ್ತದೆ. ನನ್ನ ಪಾತ್ರ ಕೂಡ ಆಡಿಯನ್ಸ್‌ಗೆ ಇಷ್ಟವಾಗುವಂತಿದೆ. ಸುಮಾರು ಒಂದು ತಿಂಗಳು ಚಿತ್ರದ ಕ್ಯಾರೆಕ್ಟರ್‌ಗಾಗಿ ಹೋಮ್‌ವರ್ಕ್, ರಿಹರ್ಸಲ್ ಮಾಡಿಕೊಂಡಿದ್ದೆ. ನನಗೆ ತೆಲುಗು ಭಾಷೆ ಸ್ವಲ್ಪ ಮಟ್ಟಿಗೆ ಬರುತ್ತಿದ್ದರಿಂದ, ಶೂಟಿಂಗ್ ಅಷ್ಟೊಂದು ಕಷ್ಟವೆನಿಸಲಿಲ್ಲ. ತುಂಬ ಒಳ್ಳೆಯ ಟೀಮ್ ಜೊತೆ ಕೆಲಸ ಮಾಡಿದ ಅನುಭವ ಈ ಸಿನಿಮಾದಲ್ಲಿ ಸಿಕ್ಕಿತು. ಸುಮಾರು 45 ದಿನಗಳ ಶೂಟಿಂಗ್ ಮಾಡಿದ್ದೇವೆ. ಅಂದುಕೊಂಡಂತೆ ಶೂಟಿಂಗ್ ಯಶಸ್ವಿಯಾಗಿ ಮುಗಿಸಿದ ಖುಷಿಯಲ್ಲಿದ್ದೇನೆ’ ಎನ್ನುತ್ತಾರೆ.
ಇತ್ತೀಚೆಗಷ್ಟೇ “ಚಿಲ್ ಬ್ರೋ’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಚಿತ್ರ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿದೆ. “ಚಿಲ್ ಬ್ರೋ’ ಚಿತ್ರದ ಹಾಡುಗಳಿಗೆ ಸುರೇಶ್ ಬಬ್ಲಿ ಸಂಗೀತ ಸಂಯೋಜನೆಯಿದ್ದು, ಶ್ಯಾಮಲ ಭಾಸ್ಕರ್ ಛಾಯಾಗ್ರಹಣವಿದೆ. ಇದರ ನಡುವೆಯೇ ರೂಪಿಕಾ “ದಾಡಿ’ ಎಂಬ ಮತ್ತೂಂದು ತೆಲುಗು ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಈ ಚಿತ್ರದ ಕೆಲಸಗಳು ಕೂಡ ಭರದಿಂದ ಸಾಗಿದೆ.
ಎಲ್ಲ ಅಂದುಕೊಂಡಂತೆ ನಡೆದರೆ, ಮುಂದಿನ ವರ್ಷದ ಆರಂಭದಲ್ಲಿ ರೂಪಿಕಾ ಅಭಿನಯಿಸಿರುವ ಎರಡು ತೆಲುಗು ಚಿತ್ರಗಳು ಬಿಡುಗಡೆಯಾಗುವ ಸಾಧ್ಯತೆಯಿದೆ. ಒಟ್ಟಾರೆ ಕನ್ನಡದಿಂದ ತೆಲುಗಿನತ್ತ ಮುಖ ಮಾಡಿರುವ ರೂಪಿಕಾ, ಟಾಲಿವುಡ್ ಸಿನಿಪ್ರಿಯರಿಗೆ ಎಷ್ಟರ ಮಟ್ಟಿಗೆ ಇಷ್ಟವಾಗಲಿದ್ದಾರೆ ಅನ್ನೋದು ಈ ಸಿನಿಮಾಗಳು ಬಿಡುಗಡೆಯಾದ ಮೇಲಷ್ಟೇ ಗೊತ್ತಾಗಲಿದೆ