ಇಷ್ಟಕಾಮ್ಯ’ ಚಿತ್ರದ ಬಳಿಕ ನಟಿ ಮಯೂರಿ, “ಕರಿಯ 2′ ಮತ್ತು “ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎಂಬ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಮಧ್ಯೆ ಅವರೊಂದು ವಿಡೀಯೋ ಆಲ್ಬಂನಲ್ಲೂ ಸದ್ದಿಲ್ಲದೆ ನಟಿಸಿ ಬಂದಿದ್ದಾರೆ. ಆ ಆಲ್ಬಂಗೆ “ಗರ್ಲ್’ ಎಂದು ನಾಮಕರಣ ಮಾಡಲಾಗಿದೆ. ಮುಂಬೈ ಮೂಲದ ವಿಶಾಲ್ ಹಾಗೂ ಅಭಿಷೇಕ್ ಸೇರಿ ಈ ಆಲ್ಬಂ ಮಾಡಿದ್ದಾರೆ. ಅಭಿಷೇಕ್ ವಿಡೀಯೋ ಆಲ್ಬಂನ ಎರಡು ಹಾಡುಗಳಿಗೆ ಸಾಹಿತ್ಯ ಬರೆದು, ನಿರ್ದೇಶನ ಮಾಡಿದರೆ, ವಿಶಾಲ್ ನಿರ್ಮಾಣದ ಜವಾಬ್ದಾರಿ
ಹೊತ್ತಿದ್ದಾರೆ.
ವಿಶೇಷವೆಂದರೆ, ಇದು ಹಿಂದಿ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಮೂಡಿ ಬಂದಿರುವ ವಿಡೀಯೋ ಆಲ್ಬಂ. ಶೀರ್ಷಿಕೆಯೇ ಸೂಚಿಸುವಂತೆ, ಈ ವಿಡೀಯೋ ಆಲ್ಬಂನಲ್ಲಿ ಮಹಿಳೆಯರ ಬಗ್ಗೆ ಕಾಳಜಿ ತೋರುವ ಮತ್ತು ಅವರಿಗೂ ಗಂಡಸರಂತೆ ಸ್ವಾತಂತ್ರ್ಯ ಬೇಕು ಎಂಬ ಸಂದೇಶವಿದೆಯಂತೆ. “ಹೆಣ್ಣು ಮಕ್ಕಳಿಗೆ ತಾವು ಇಷ್ಟಪಡುವ ಬಟ್ಟೆ ಹಾಕಿಕೊಳ್ಳುವುದರಲ್ಲಿ ಕಟ್ಟುಪಾಡು ಇದೆ. ಎಲ್ಲವನ್ನೂ ಸಹಿಸಿಕೊಳ್ಳುವ ಹೆಣ್ಣಿಗೆ, ಸರಿಯಾದ ಸ್ವಾತಂತ್ರ್ಯವೇ ಇರೋದಿಲ್ಲ. ಅವಳನ್ನು ನೋಡುವ ದೃಷ್ಟಿಯೂ ಬೇರೆ ರೀತಿ ಇರುತ್ತೆ. ಇದನ್ನೆಲ್ಲಾ ಮನಗಂಡು, ಮಹಿಳೆಗೂ ಸ್ವಾತಂತ್ರ್ಯ ಕೊಡಿ, ಅವಳ ಇಷ್ಟಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳಿ ಎಂಬ ಹಿನ್ನೆಲೆಯುಳ್ಳ ಹಾಡು ಅದು’ ಎಂಬುದು ಮಯೂರಿ ಮಾತು.
“ಈ ವಿಡೀಯೋ ಆಲ್ಬಂನಲ್ಲಿರುವ ಎರಡು ಹಾಡುಗಳನ್ನು ಬ್ಯಾಂಕಾಕ್‌ನಲ್ಲಿ ಹತ್ತು ದಿನಗಳ ಕಾಲ ಚಿತ್ರೀಕರಿಸಲಾಗಿದೆ. ಹಾಡಲ್ಲಿ ನಾನು ಮಾಡ್ರನ್ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಮೊದಲಿಗೆ ಹೆಣ್ಣಿಗೆ ಸ್ವಾತಂತ್ರ್ಯ ಬೇಕು, ಅವಳ ಆಸೆಗಳಿಗೆ ಒತ್ತಾಸೆಯಾಗಬೇಕು ಎಂಬ ರೀತಿಯಲ್ಲಿ ಮೂಡಿಬಂದಿರುವ ಹಾಡು ರಿಲೀಸ್ ಮಾಡಲಾಗುವುದು. ಆ ಬಳಿಕ ಇನ್ನೊಂದು ರೊಮ್ಯಾಂಟಿಕ್ ಸಾಂಗ್‌ವೊಂದನ್ನು ಬಿಡುಗಡೆ ಮಾಡಲಾಗುತ್ತದೆ.
ಒಟ್ಟಾರೆ, ಮನುಷ್ಯನಿಗೆ ಮನರಂಜನೆ ಬೇಕು. ಆ ನಿಟ್ಟಿನಲ್ಲೂ ಮನುಷ್ಯ ಜಾಲಿಯಾಗಿರಬೇಕು ಎಂಬ ಕುರಿತಾದ ಗೀತೆಯೂ ಇದೆ. ಇದು ಯೂನಿವರ್ ಸಲ್ ಸಬೆಕ್ಟ್ ಆಗಿರುವುದರಿಂದ ಭಾಷೆ ಮುಖ್ಯ ಆಗೋದಿಲ್ಲ. ಹಾಗಾಗಿ, ಹಿಂದಿ ಮತ್ತು ಇಂಗ್ಲೀಷ್‌ನಲ್ಲಿ ಆಲ್ಬಂ ಮೂಡಿ ಬಂದಿದೆ. ಅದರಲ್ಲೂ ನನಗೆ ಬಿಡುವಿನ ಸಮಯದಲ್ಲೇ ಈ ಅವಕಾಶ ಬಂತು. ಒಂದು ಹೆಣ್ಣಿಗೆ ಸಂಬಂಧಿಸಿದ ಹಾಡು ಇದ್ದುದರಿಂದ ನಾನು ಅವಕಾಶ ಮಿಸ್ ಮಾಡಿಕೊಳ್ಳಲಿಲ್ಲ. ಅಂದಹಾಗೆ, ಈ ಶುಕ್ರವಾರ ಯು ಟ್ಯೂಬ್‌ನಲ್ಲಿ ಟ್ರೇಲರ್ ರಿಲೀಸ್ ಆಗಲಿದ್ದು, ಮುಂದಿನ ಶುಕ್ರವಾರ ಹಾಡು ಬಿಡುಗಡೆಯಾಗಲಿದೆ. ಹಿಂದಿಯ ಸರಿಗಮಪ ವಿಜೇತರು ಈ ಹಾಡಿಗೆ ದನಿಯಾಗಿದ್ದಾರೆ’ ಎನ್ನುತ್ತಾರೆ ಮಯೂರಿ.
ಸದ್ಯಕ್ಕೆ “ಕರಿಯ 2′ ಚಿತ್ರ ಬಿಡುಗಡೆಯ ಎದುರು ನೋಡುತ್ತಿರುವ ಅವರು, “ಆಟಕ್ಕುಂಟು ಲೆಕ್ಕಕ್ಕಿಲ್ಲ’ ಸಿನಿಮಾ ಮೇಲೂ ನಂಬಿಕೆ ಇಟ್ಟುಕೊಂಡಿದ್ದಾರೆ. ಈ ನಡುವೆ ಕಥೆ ಕೇಳುತ್ತಿದ್ದು, ಸಂಖ್ಯೆಗಾಗಿ ಸಿನಿಮಾ ಮಾಡುವುದಕ್ಕಿಂತ ವರ್ಷಕ್ಕೊಂದೇ ಮಾಡಿದರೂ ಒಳ್ಳೇ ಚಿತ್ರ ಮಾಡಬೇಕೆಂದು ನಿರ್ಧರಿಸಿದ್ದಾರೆ.