Advertisement

ಚುನಾವಣಾ ಅಖಾಡಕ್ಕೆ ಸಜ್ಜಾದ ನಟ ಉಪೇಂದ್ರ

12:10 PM Nov 12, 2017 | |

ಬೆಂಗಳೂರು: ಕರ್ನಾಟಕ ಪ್ರಜ್ಞಾವಂತ ಜನತಾಪಕ್ಷ ಸ್ಥಾಪಿಸಿರುವ ನಟ ಉಪೇಂದ್ರ ತಮ್ಮ ಪಕ್ಷದ ಧ್ಯೇಯೋದ್ದೇಶ ಹಾಗೂ ಕಾರ್ಯಚಟುವಟಿಕೆಗಳ ಬಗ್ಗೆ ಮತದಾರರಿಗೆ ಮಾಹಿತಿ ನೀಡಲು ವೆಬ್‌ಸೈಟ್‌ ಹಾಗೂ ಆ್ಯಪ್‌ ಬಿಡುಗಡೆ ಮಾಡಿದ್ದಾರೆ.

Advertisement

ಕೆಪಿಜೆಪಿ ಆ್ಯಪ್‌ ಮತ್ತು www.kpjpuppi.org ವೆಬ್‌ಸೈಟ್‌ ಮೂಲಕ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ಕಾರ್ಯಯೋಜನೆಗಳನ್ನು ತಿಳಿದು ಕೊಳ್ಳಬಹುದು. ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಮಾಹಿತಿ ಸಿಗಲಿದ್ದು, ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷಿಗಳು ಖುದ್ದಾಗಿ ತಮ್ಮ ಕ್ಷೇತ್ರದ ಸಮಸ್ಯೆ ಹಾಗೂ ಆ ಕುರಿತು ಜನರ ಜೊತೆ ಚರ್ಚಿಸುವ ವೀಡಿಯೋ ಹಾಗೂ ಫೋಟೋ ದಾಖಲೆಗಳ ಜೊತೆ ಹಲವು ವಿವರಗಳನ್ನು ನೀಡಬಹುದು.

ಮಾಹಿತಿಗೆ ಆ್ಯಪ್‌, ವೆಬ್‌ಸೈಟ್‌: ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಉಪೇಂದ್ರ, ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲಾಗುತ್ತಿದೆ. ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ಪಕ್ಷದ ಚಟುವಟಿಕೆಗಳ ಬಗ್ಗೆ ಜನತೆಗೆ ಸಂಪೂರ್ಣ ವಿವರ ನೀಡಲು ಆ್ಯಪ್‌ ಮತ್ತು ವೆಬ್‌ಸೈಟ್‌ ಪ್ರಾರಂಭಿಸಲಾಗಿದೆ ಎಂದು ಹೇಳಿದರು.

ಕೆಪಿಜೆಪಿ ಕಾರ್ಯಚಟುವಟಿಕೆ, ಸಂಘಟನೆ, ಅಭ್ಯರ್ಥಿಯ ಆಯ್ಕೆ, ಸಂದರ್ಶನ, ಸಭೆ-ಸಮಾರಂಭಗಳು, ಚುನಾವಣಾ ಪ್ರಚಾರ, ಪಕ್ಷದ ಧ್ಯೇಯೋದ್ದೇಶಗಳು ಸೇರಿದಂತೆ ಇನ್ನಿತರ ಹಲವು ಅಂಶಗಳು ಪಕ್ಷದ ಆ್ಯಪ್‌ ಮತ್ತು ವೆಬ್‌ಸೈಟ್‌ನಲ್ಲಿ
ಸಂಪೂರ್ಣವಾಗಿ ದೊರೆಯಲಿವೆ ಎಂದರು.

ಅಭ್ಯರ್ಥಿಗಳ ಆಯ್ಕೆಯ ಸಂದರ್ಶನ ಪಾರದರ್ಶಕ ರೀತಿಯಲ್ಲಿ ನಡೆಯಲಿದೆ.ಇದು ಕೆಪಿಜೆಪಿ ಸಾಮಾಜಿಕ ಜಾಲತಾಣದಲ್ಲಿ ನೇರಪ್ರಸಾರವಾಗಲಿದೆ ಎಂದು ಹೇಳಿದರು.

Advertisement

60 ಸಾವಿರ ಮೇಲ್‌: ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷ ಕೇವಲ ವೇದಿಕೆ. ಪಕ್ಷದ ಅಭ್ಯರ್ಥಿಗಳಿಗೆ ಖುರ್ಚಿ ಖಾಲಿ ಇದೆ. ಸಾಧಿಸುವ ಉದ್ದೇಶ ಉಳ್ಳವರು ಈ ಖುರ್ಚಿಯಲ್ಲಿ ಕೂರಬಹುದು. ಈಗಾಲೇ ಪಕ್ಷದ ವತಿಯಿಂದ ಸ್ಪರ್ಧಿಸಲು 60 ಸಾವಿರ ಮೇಲ್‌ಗ‌ಳು ಬಂದಿವೆ. ಇವುಗಳಲ್ಲಿ 8 ಸಾವಿರ ಮೇಲ್‌ಗ‌ಳನ್ನು ಅಧ್ಯಯನ ಮಾಡಿರುವುದಾಗಿ ತಿಳಿಸಿದರು.

ಜನ ಆಶೀರ್ವದಿಸಿದರೆ ಮಾತ್ರ ರಾಜಕೀಯದಲ್ಲಿ ರಾಜಕಾರಣದಲ್ಲಿ ಜನ ಆಶೀರ್ವದಿಸಿದರೆ ರಾಜಕೀಯ ಕ್ಷೇತ್ರದಲ್ಲಿ ಇರುತ್ತೇನೆ. ಇಲ್ಲದಿದ್ದರೆ ಸಿನಿಮಾ ರಂಗದಲ್ಲೇ ಸಕ್ರಿಯನಾಗುತ್ತೇನೆ ಎಂದು ಚಿತ್ರ ನಟ ಉಪೇಂದ್ರ ಹೇಳಿದ್ದಾರೆ.

ನಗರದಲ್ಲಿ ಶನಿವಾರ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ಆ್ಯಪ್‌ ಮತ್ತು ವೆಬ್‌ಸೈಟ್‌ ಬಿಡುಗಡೆಗೊಳಿಸಿ
ಮಾತನಾಡಿದರು. ಮುಂದಿನ ನಾಲ್ಕು ತಿಂಗಳ ಕಾಲ ಸಿನಿಮಾ ರಂಗ ಬಿಟ್ಟು ಬೇರು ಮಟ್ಟದಲ್ಲಿ ಪಕ್ಷ ಕಟ್ಟುವ
ನಿಟ್ಟಿನಲ್ಲಿ ತೊಡಗುವುದಾಗಿ ತಿಳಿಸಿದರು.

ಪ್ರತಿ ಕ್ಷೇತ್ರಕ್ಕೂ ಪ್ರಣಾಳಿಕೆ: ಮುಂದಿನ ಚುನಾವಣೆಯಲ್ಲಿ ತಮ್ಮ ಪಕ್ಷ ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧಿಸಲಿದ್ದು, ಪ್ರತಿ
ಕ್ಷೇತ್ರಕ್ಕೂ ಒಂದೊಂದು ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಲಿದೆ ಎಂದು ಹೇಳಿದರು. ನನ್ನ ಕುಟುಂಬದ ಸದಸ್ಯರು ಬೇಸರಗೊಳ್ಳಬಾರದೆಂಬ ಕಾರಣಕ್ಕಾಗಿ ನಾನು ಕೆಪಿಜೆಪಿ ಪಕ್ಷದ ಕೆಲವು ಕಾರ್ಯಕ್ರಮಗಳಲ್ಲಿ ಅವರನ್ನು ಕರೆದುಕೊಂಡು
ಬಂದಿದ್ದೆ. ಅಷ್ಟಕ್ಕೆ ಕೆಲವರು ಉಪೇಂದ್ರ ಅವರ ಕುಟುಂಬ ರಾಜಕಾರಣ ಮಾಡಲು ಹೊರಟಿದೆ ಎಂದು ಆರೋಪಿಸಿದರು. ಆದರೆ ಇದು ಸತ್ಯಕ್ಕೆ ದೂರವಾದುದು. ನಾನು ಕುಟುಂಬ ರಾಜಕಾರಣ ಮಾಡುವುದಿಲ್ಲ. ಒಂದು ವೇಳೆ ಕುಟುಂಬ ಸದಸ್ಯರು ಪಕ್ಷಕ್ಕೆ ಬರಲು ಇಚ್ಛಿಸಿದರೆ ಅವರು ಕೂಡ ಪಕ್ಷದ ಮಾರ್ಗದರ್ಶಿ ಸೂತ್ರದ ಮೂಲಕವೇ ಪ್ರವೇಶಿಸಬೇಕಾಗುತ್ತದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next