ಕನ್ನಡ ಚಿತ್ರರಂಗ ಇಂತಹ ನೂರಾರು ಕಲಾವಿದರು, ತಂತ್ರಜ್ಞರು, ನಿರ್ದೇಶಕರುಗಳಿಂದ ಎಷ್ಟು ಶ್ರೀಮಂತವಾಗಿತ್ತು ಎಂಬುದಕ್ಕೆ ಹಲವಾರು ಉದಾಹರಣೆಗಳಿವೆ. ತಮ್ಮ ಪಾತ್ರಗಳಿಗೆ ಜೀವ ತುಂಬುವ ಮೂಲಕ ಇಂದಿಗೂ ಆ ನಟ, ನಟಿಯರು ಜೀವಂತವಾಗಿ ಉಳಿದಿದ್ದಾರೆ. ಮೂಲತಃ ಮೈಸೂರಿನವರಾದ ಶ್ರೀನಿವಾಸ್ ಕೂಡಾ ಕನ್ನಡ ಚಿತ್ರರಂಗ ಕಂಡ ಅದ್ಭುತ ಖಳನಟ ಹಾಗೂ ಪೋಷಕ ನಟ. ಅರೇ ಇದ್ಯಾರಪ್ಪ ಶ್ರೀನಿವಾಸ್ ಅಂತ ಯೋಚಿಸುತ್ತಿದ್ದೀರಾ?ಇವರು ಬೇರೆ ಯಾರೂ ಅಲ್ಲ ತೂಗುದೀಪ ಶ್ರೀನಿವಾಸ್. ಕನ್ನಡ ಚಿತ್ರರಂಗದಲ್ಲಿ ಇಂದು ಚಾಲೆಂಜಿಂಗ್ ಸ್ಟಾರ್ ಆಗಿರುವ ದರ್ಶನ್ ಅವರ ತಂದೆ.
ತೂಗುದೀಪ ಹೆಸರು ಬಂದದ್ದು ಹೇಗೆ…
1943ರ ಏಪ್ರಿಲ್ 19ರಂದು ಮೈಸೂರಿನಲ್ಲಿ ಜನಿಸಿದ್ದರು. ಮುನಿಸ್ವಾಮಿ ಮತ್ತು ಪಾರ್ವತಮ್ಮ ದಂಪತಿಗೆ ಎಂಟು ಮಕ್ಕಳು, ಅದರಲ್ಲಿ ನಾಲ್ಕನೆಯವರು ಶ್ರೀನಿವಾಸ್. ಬಡತನದಲ್ಲಿದ್ದ ಕುಟುಂಬಕ್ಕೆ ಬರಸಿಡಿಲಿನಂತೆ ಬಂದೆರಗಿದ್ದು, ತಂದೆ, ತಾಯಿಯ ಸಾವು. ಚಿಕ್ಕಂದಿನಲ್ಲಿಯೇ ಪೋಷಕರನ್ನು ಕಳೆದುಕೊಂಡಿದ್ದ ಶ್ರೀನಿವಾಸ್ ಬಹಳಷ್ಟು ಕಷ್ಟವನ್ನು ಎದುರಿಸಿದ್ದರು. ಚಿಕ್ಕ ವಯಸ್ಸಿನಲ್ಲಿ ರಂಗಭೂಮಿ, ಸಿನಿಮಾ ಕ್ಷೇತ್ರದತ್ತ ಒಲವು ಹೊಂದಿದ್ದ ಶ್ರೀನಿವಾಸ್ ಅವರು ಶಾಲಾ, ಕಾಲೇಜು ದಿನಗಳಲ್ಲಿ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು.
ಹೀಗೆ ನಾಟಕಗಳಲ್ಲಿ ಅಭಿನಯಿಸುತ್ತಿದ್ದ ದಿನಗಳಲ್ಲಿ ಒಮ್ಮೆ ಶ್ರೀನಿವಾಸ್ ಅವರ ನಟನೆಯನ್ನು ಮತ್ತೊಬ್ಬ ರಂಗಭೂಮಿ,ಚಿತ್ರ ನಟ ಎಂಪಿ ಶಂಕರ್ ಅವರು ಕಂಡು ಮೆಚ್ಚಿದ್ದರು. ತದನಂತರ ಎಂಪಿ ಶಂಕರ್ ತಂಡದಲ್ಲಿ ಶ್ರೀನಿವಾಸ್ ಖಾಯಂ ಸದಸ್ಯರಾಗುವಂತೆ ಪಟ್ಟು ಹಿಡಿದಿದ್ದರಂತೆ. ಅಂತೂ ಶಂಕರ್ ಅವರ ಒತ್ತಾಯಕ್ಕೆ ಮಣಿದ ಶ್ರೀನಿವಾಸ್ ಮೈಸೂರು ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಶಿಕ್ಷಣ ಅರ್ಧಕ್ಕೆ ಬಿಟ್ಟು ರಂಗಭೂಮಿಗೆ ಬಂದುಬಿಟ್ಟಿದ್ದರು!
ಶ್ರೀನಿವಾಸ್ ಅವರ ನಟನೆ ಬಗ್ಗೆ ಅಂದಿನ ಹೆಸರಾಂತ ನಿರ್ದೇಶಕ ಕೆಎಸ್ ಎಲ್ ಸ್ವಾಮಿ ಅವರಿಗೆ ಎಂಪಿ ಶಂಕರ್ ತಿಳಿಸಿದ್ದರು. ಸ್ವತಃ ಸ್ವಾಮಿಯವರು ಕೂಡಾ ನಾಟಕದಲ್ಲಿ ಶ್ರೀನಿವಾಸ್ ಅಭಿನಯ ಕಂಡು ತಮ್ಮ ಸಿನಿಮಾದಲ್ಲಿ ನಟಿಸುವಂತೆ ಅವಕಾಶ ಕೊಟ್ಟಿದ್ದರು. 1966ರಲ್ಲಿ ಕೆಎಸ್ ಎಲ್ ಸ್ವಾಮಿ ನಿರ್ದೇಶನದ “ತೂಗುದೀಪ” ಚಿತ್ರದಲ್ಲಿ ಶ್ರೀನಿವಾಸ್ ಅವರು ಅಭಿನಯಿಸಿದ ನಂತರ ತೂಗುದೀಪ ಶ್ರೀನಿವಾಸ ಎಂಬ ಹೆಸರಿನಿಂದಲೇ ಖ್ಯಾತಿ ಪಡೆದರು.
ಸರಳ ಸಜ್ಜನಿಕೆಯ ತೂಗುದೀಪ ಶ್ರೀನಿವಾಸ್ ಅವರು ಖಳನಟನ ಪಾತ್ರದಲ್ಲಿ ತಮ್ಮದೇ ಛಾಪನ್ನು ಮೂಡಿಸಿದರು. ಮೇಯರ್ ಮುತ್ತಣ್ಣ, ಬಂಗಾರದ ಪಂಜರ, ಗಂಧದ ಗುಡಿ, ಕಳ್ಳ ಕುಳ್ಳ, ಸಿಪಾಯಿ ರಾಮು, ಗಿರಿ ಕನ್ಯೆ, ಭಾಗ್ಯವಂತರು ಸೇರಿದಂತೆ ನೂರಾರು ಸಿನಿಮಾಗಳಲ್ಲಿ ಅಭಿನಯಿಸಿ ಕನ್ನಡ ಚಿತ್ರರಸಿಕರ ಮನಸ್ಸನ್ನು ಗೆದ್ದಿದ್ದರು. ಡಾ.ರಾಜ್ ಕುಮಾರ್ ಅವರ ಹಲವು ಚಿತ್ರಗಳಲ್ಲಿ ತೂಗುದೀಪ್ ಅವರು ಖಳನಟರಾಗಿ, ಪೋಷಕ ನಟರಾಗಿ ನಟಿಸಿದ್ದರು. ತೆರೆಯ ಮೇಲೆ ಖಳನಟನಾಗಿದ್ದರೂ ಸಹ ನಿಜಜೀವನದಲ್ಲಿ ತೂಗುದೀಪ ಅವರು ಸಜ್ಜನಿಕೆಯ ವ್ಯಕ್ತಿಯಾಗಿದ್ದರು.
ಕಷ್ಟದ ಬದುಕು…ಗಂಡನಿಗಾಗಿ ತನ್ನ ಕಿಡ್ನಿಯನ್ನೇ ಕೊಟ್ಟಿದ್ದರು ಪತ್ನಿ…
1973ರ ನವೆಂಬರ್ 15ರಂದು ತೂಗುದೀಪ್ ಶ್ರೀನಿವಾಸ್ ಅವರು ಕೊಡಗಿನ ಪೊನ್ನಂಪೇಟೆಯ ಮೀನಾ ಅವರನ್ನು ವಿವಾಹವಾಗಿದ್ದರು. ದಂಪತಿಗೆ ದರ್ಶನ್, ದಿನಕರ್ ಹಾಗೂ ದಿವ್ಯ ಸೇರಿ ಮೂವರು ಮಕ್ಕಳು. ಅಂದು ಸಿನಿಮಾ ರಂಗದಲ್ಲಿ ಸಿಗುತ್ತಿದ್ದ ಸಂಭಾವನೆ ಸಾವಿರ ರೂಪಾಯಿಯೂ ದಾಟುತ್ತಿರಲಿಲ್ಲ. ಹೀಗೆ ತಿಂಗಳು ಪೂರ್ತಿ ದುಡಿದು ತಂದ ಹಣವನ್ನು ತೂಗುದೀಪ್ ಅವರು ಪತ್ನಿ ಮೀನಾ ಕೈಯಲ್ಲಿ ಕೊಡುತ್ತಿದ್ದರಂತೆ. ಹೀಗೆ ಪೈಸೆಗೆ, ಪೈಸೆ ಸೇರಿಸಿ ಎಂಟು ಸಾವಿರ ರೂಪಾಯಿ ಒಟ್ಟು ಮಾಡಿ ಮೈಸೂರಿನ ಸಿದ್ದಾರ್ಥ್ ಲೇಔಟ್ ನಲ್ಲಿ ಒಂದು ನಿವೇಶನ ಖರೀದಿಸಿದರು.
ಕಷ್ಟಗಳ ಮೇಲೆ ಕಷ್ಟಗಳು ಬರುತ್ತಿದ್ದವು, ಮೈಸೂರಿನ ನಿವೇಶನದಲ್ಲಿ ಮನೆ ಕಟ್ಟಿಸಬೇಕೆಂದು ಮೀನಾ ತೂಗುದೀಪ್ ಹಠಕ್ಕೆ ಬಿದ್ದಿದ್ದರು. ಅಂತೂ ತೂಗುದೀಪ್ ಮತ್ತು ಮೀನಾ ಅವರು ಬಾಗಲಕೋಟೆ ಸುತ್ತಮುತ್ತ ನಿರಂತರವಾಗಿ ನಾಟಕ ಆಡಿಸುವ ಮೂಲಕ ಬಂದ ಮೂರುವರೆ ಲಕ್ಷ ರೂಪಾಯಿ ಹಣದಲ್ಲಿ ಮನೆಕಟ್ಟಿಸಿದ್ದರು. ತೂಗುದೀಪ್ ಶ್ರೀನಿವಾಸ್ ಹಾಗೂ ಮಕ್ಕಳನ್ನು ಹದ್ದಿನಗಣ್ಣು ಇಟ್ಟು ಸಾಕಿ ಸಲಹಿದವರು ಮೀನಾ ತೂಗುದೀಪ್ ಶ್ರೀನಿವಾಸ್..
ಚಿತ್ರರಂಗದಲ್ಲಿ ಉತ್ತುಂಗಕ್ಕೆ ಏರುತ್ತಿರುವ ಸಂದರ್ಭದಲ್ಲಿಯೇ ತೂಗುದೀಪ್ ಅವರು ಸಕ್ಕರೆ ಕಾಯಿಲೆ ಮತ್ತು 2 ಕಿಡ್ನಿ ವೈಫಲ್ಯದಿಂದ ಬಳಲತೊಡಗಿದ್ದರು.ಇಂತಹ ಸಂದರ್ಭದಲ್ಲಿ ತೂಗುದೀಪ್ ಅವರಿಗೆ ಒಂದು ಕಿಡ್ನಿಯ ಅವಶ್ಯಕತೆ ಇತ್ತು. ಆದರೆ ಕಿಡ್ನಿ ಕೊಡುವವರಾಗಲಿ, ಅದಕ್ಕೆ ಹಣ ಕೊಡುವಷ್ಟು ಸ್ಥಿತಿವಂತರೂ ಆಗಿರಲಿಲ್ಲ. ಕೊನೆಗೆ ಮೀನಾ ತೂಗುದೀಪ್ ತನ್ನ ಗಂಡನಿಗಾಗಿ ಒಂದು ಕಿಡ್ನಿಯನ್ನು ಕೊಟ್ಟು ಪತಿಯ ಜೀವ ಉಳಿಸಿಕೊಂಡಿದ್ದರು.
ಕಿಡ್ನಿ ವೈಫಲ್ಯ, ತನ್ನ ಕಿಡ್ನಿ ಗಂಡನಿಗೆ ಕೊಟ್ಟು ತನ್ನಲ್ಲಿದ್ದ ಎಲ್ಲಾ ಒಡವೆಗಳನ್ನು ಮಾರಿದ್ದ ಮೀನಾ ತೂಗುದೀಪ್ ಅಂದು ಪಟ್ಟ ಕಷ್ಟ ಹೇಳತೀರದು..ಅದು ಕಣ್ಣೀರಿನ ದಿನಗಳು ಎಂದು ಸಂದರ್ಶನವೊಂದರಲ್ಲಿ ಹಳೆಯ ನೆನಪುಗಳನ್ನು ಮೆಲುಕು ಹಾಕಿ ಭಾವುಕರಾಗಿದ್ದರು. ಮಕ್ಕಳ ಭವಿಷ್ಯಕ್ಕಾಗಿ ಅವರನ್ನು ಬೆಳೆಸಿ, ಪೋಷಿಸಿದ್ದ ಗಟ್ಟಿಗಿತ್ತಿ ಮೀನಾತೂಗುದೀಪ್. ಇಂತಹ ಕಷ್ಟದ ದಿನಗಳಲ್ಲಿ ದರ್ಶನ್ ಹಾಲು ಮಾರಿ ನಂತರ ಸಿನಿಮಾರಂಗದಲ್ಲಿ ಲೈಟ್ ಬಾಯ್ ಆಗಿ ದುಡಿದು ತಾಯಿಗೆ ನೆರವಾಗಿದ್ದರು.
1993ರವರೆಗೆ ಕನ್ನಡ ಚಿತ್ರರಂಗದಲ್ಲಿ ಅಟ್ಟಹಾಸದ ನಗುವಿನ ಮೂಲಕವೇ ಜನಮನ ಗೆದ್ದಿದ್ದ ತೂಗುದೀಪ್ ಅವರು 1995ರ ಅಕ್ಟೋಬರ್ 16ರಂದು ಇಹಲೋಕ ತ್ಯಜಿಸಿದ್ದರು.