ಬೆಂಗಳೂರು: ಸೆಂಚ್ಯೂರಿ ಸ್ಟಾರ್ ಶಿವಣ್ಣ ತುಂಬಾ ಬ್ಯುಝಿಯಾಗಿದ್ದಾರೆ. ಅವರು ಕೈಯಲ್ಲಿ ಇದೀಗ ಬೈರಾಗಿ, ವೇದಾ, ಭಜರಂಗಿ -2 ಸಿನಿಮಾಗಳಿವೆ. ಇವುಗಳ ಜೊತೆಗೆ ಮತ್ತೊಂದು ಚಿತ್ರವನ್ನು ಒಪ್ಪಿಕೊಂಡಿದ್ದು, ಇಂದು ಮುಹೂರ್ತ ನೆರವೇರಿತು.
‘ನೀ ಸಿಗುವರೆಗೂ’ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರ 124 ನೇ ಚಿತ್ರವಾಗಿ ಇಂದು ಸೆಟ್ಟೇರಿತು. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಚಿತ್ರದ ಮೊದಲ ದೃಶ್ಯಕ್ಕೆ ಆರಂಭಿಕ ಫಲಕ ತೋರಿಸಿ, ಶುಭಕೋರಿದರು. ಶಿವಣ್ಣನ ಪತ್ನಿ ಗೀತಾ ಶಿವರಾಜಕುಮಾರ್ ಅವರು ಕ್ಯಾಮರಾಕ್ಕೆ ಚಾಲನೆ ನೀಡಿದರು.
ನೀ ಸಿಗುವರೆಗೂ ಚಿತ್ರಕ್ಕೆ ರಾಮ್ ಧುಳಿಪುಡಿ ನಿರ್ದೇಶನ ಮಾಡುತ್ತಿದ್ದು, ಬಾಲ ಶ್ರೀರಾಮ ಸ್ಟುಡಿಯೋಸ್ ಬ್ಯಾನರ್ನಲ್ಲಿ ನಾರಾಲ ಶ್ರೀನಿವಾಸ್ ರೆಡ್ಡಿ, ಸ್ವಾತಿ ವನಪಲ್ಲಿ ಮತ್ತು ಶ್ರೀಕಾಂತ್ ಧೂಳಿಪುಡಿ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ . ಈ ಸಿನಿಮಾದಲ್ಲಿ ಶಿವಣ್ಣ ಎರಡು ಡಿಫರೆಂಟ್ ಲುಕ್ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆರ್ಮಿ ಅಧಿಕಾರಿ ಪಾತ್ರದಲ್ಲಿಯೂ ಶಿವಣ್ಣ ಕಾಣಿಸಿಕೊಳ್ಳಲಿದ್ದಾರೆ, ಆ ಕಾರಣದಿಂದಲೂ ‘ನೀ ಸಿಗುವರೆಗೂ’ ಚಿತ್ರದ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚಿದೆ.
ತೆಲುಗು ಹಾಗೂ ತಮಿಳು ನಟಿ ಮೆರ್ಹೀನ್ ಪೀರ್ಜಾದಾ ‘ನೀ ಸಿಗುವರೆಗೂ’ ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರಿಗೆ ನಾಯಕಿಯಾಗಲಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಈ ಬೆಡಗಿ ಪದಾರ್ಪಣೆ ಮಾಡುತ್ತಿದ್ದಾರೆ.