ಹರಿಹರ: ಕೋವಿಡ್-19 ಕಾರಣದಿಂದ ದಿಢೀರನೆ ಚಿತ್ರಮಂದಿರಗಳ ಪ್ರೇಕ್ಷಕರ ಮಿತಿಯನ್ನು ಶೇ. 50ಕ್ಕೆ ನಿರ್ಬಂಧಿ ಸಿರುವುದು ಸರಿಯಲ್ಲ ಎಂದು ಚಿತ್ರನಟ ದುನಿಯಾ ವಿಜಯ್ ಅಸಮಾಧಾನ ವ್ಯಕ್ತಪಡಿಸಿದರು.
ಕಾಗಿನೆಲೆ ಕನಕ ಗುರುಪೀಠದ ಬೆಳ್ಳೂಡಿ ಶಾಖಾ ಮಠದ ಐದನೇ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಎಸ್‌ಟಿ ಮೀಸಲಾತಿ ಹೋರಾಟದ ಪಾದಯಾತ್ರಿಗಳಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಕೋವಿಡ್-19 ಹರಡುವುದನ್ನು ತಡೆಯಲು ವಿ ಧಿಸುವ ನಿರ್ಬಂಧ, ನಿಬಂಧನೆಗಳ ಕುರಿತು ಸರ್ಕಾರಗಳು ಸಾಧ್ಯವಾದಷ್ಟು ಮುಂಚಿತವಾಗಿ ಪ್ರಚಾರ ಮಾಡಬೇಕು ಎಂದರು. 1 ವರ್ಷದಿಂದ ನಾವು ಕೊರೊನಾ ವೈರಸ್‌ನ ದುಷ್ಪರಿಣಾಮಗಳನ್ನು ಎದುರಿಸುತ್ತಿದ್ದೇವೆ. ಕೊರೊನಾಕ್ಕಿಂತ ಬದುಕು ಮುಖ್ಯ. ಕೊರೊನಾ ಕಾರಣಕ್ಕೆ ಬದುಕಿನ ಬಂಡಿಯನ್ನು ನಿಲ್ಲಿಸಲಾಗದು. ಜನಜೀವನಕ್ಕೆ ಮಾರಕವಾಗುವ ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಸರ್ಕಾರಗಳು ನೂರು ಬಾರಿ ಆಲೋಚಿಸಬೇಕು ಎಂದು ಸಲಹೆ ನೀಡಿದರು.
ಚಿತ್ರಮಂದಿರಗಳ ನಿರ್ಬಂಧದ ಬಗ್ಗೆ ಎರಡು ದಿನ ಮೊದಲೇ ತಿಳಿಸಿದ್ದರೆ “ಯುವರತ್ನ’ ಚಿತ್ರ ಬಿಡುಗಡೆ ಮಾಡುತ್ತಿರಲಿಲ್ಲ. ಯಾವುದೇ ಸಿನಿಮಾದ ಹಿಂದೆ ನೂರಾರು ಜನರ ಶ್ರಮವಿರುತ್ತದೆ, ನಿರ್ಮಾಪಕ ಸಾಲ ಮಾಡಿ ಕೋಟ್ಯಂತರ ರೂ. ಹೂಡಿರುತ್ತಾನೆ. ಅವನ ಬದುಕು ಕಿತ್ತುಕೊಳ್ಳಲು ಯಾರಿಗೂ ಅಧಿಕಾರವಿಲ್ಲ ಎಂದರು.
ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಕೆಲ್ಲೋಡು ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ದುನಿಯಾ ವಿಜಯ್ ದಂಪತಿಗೆ ಮತ್ತು ನಿರ್ಮಾಪಕ ಕೆ.ಪಿ. ಶ್ರೀಕಾಂತ ಅವರಿಗೆ ಕಂಬಳಿ ಹೊದಿಸಿ ಸನ್ಮಾನಿಸಲಾಯಿತು. ಎಸ್‌ಟಿ ಮೀಸಲಾತಿ ಹೋರಾಟದ ಪಾದಯಾತ್ರೆಯಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದ 100ಕ್ಕೂ ಅಧಿಕ ಕುರುಬ ಸಮಾಜದ ಮುಖಂಡರು, ಅಭಿಮಾನಿಗಳನ್ನು ಶ್ರೀಮಠದ ವತಿಯಿಂದ ಗೌರವಿಸಲಾಯಿತು.
ಶಾಸಕ ಎಸ್. ರಾಮಪ್ಪ, ಜಿಪಂ ಮಾಜಿ ಅಧ್ಯಕ್ಷ ಜಿ. ದ್ಯಾಮಣ್ಣ, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ನಂದಿಗಾವಿ ಎನ್.ಎಚ್. ಶ್ರೀನಿವಾಸ್, ನಿವೃತ್ತ ಡಿವೈಎಸ್ಪಿ ದೇವರಬೆಳಕೆರೆ ದೇವೇಂದ್ರಪ್ಪ, ಎಂ. ನಾಗೇಂದ್ರಪ್ಪ, ಸಿ.ಎನ್. ಹುಲಿಗೇಶ್, ಕೆ.ಪಿ. ಗಂಗಾಧರ, ಬೀರಪ್ಪ, ಕುರುಬ ಸಮಾಜದ ಎಸ್‌ಟಿ ಮೀಸಲಾತಿ ಹೋರಾಟದ ರಾಜ್ಯಾಧ್ಯಕ್ಷ ಮಾಗೊದಿ ಮಂಜಣ್ಣ, ಜೆ.ಸಿ.ನಿಂಗಪ್ಪ ಇತರರು ಇದ್ದರು.