Advertisement

ಮತ್ತೆ ನಿರ್ಮಾಣಕ್ಕೆ ಭಾವನಾ; ಜಟ್ಟ ಗಿರಿರಾಜ್‌ ನಿರ್ದೇಶನ

04:39 PM Dec 10, 2018 | Sharanya Alva |

ನಟಿ ಕಮ್‌ ನಿರ್ಮಾಪಕಿ ಭಾವನಾ ಮತ್ತೆ ಸುದ್ದಿಯಾಗಿದ್ದಾರೆ. ಈ ಹಿಂದೆ “ನಿರುತ್ತರ’ ಎಂಬ ಚಿತ್ರ ನಿರ್ಮಾಣ ಮಾಡಿ ಸುದ್ದಿಯಾಗಿದ್ದ ಭಾವನಾ, ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಇದೀಗ ಒಂದು ಸಿನಿಮಾ ನಿರ್ಮಾಣ ಮಾಡುವ ಮೂಲಕ ಪುನಃ ಸುದ್ದಿಯಾಗುತ್ತಿದ್ದಾರೆ. ಹೌದು, ಅವರೀಗ ಹೊಸ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಆ ಚಿತ್ರಕ್ಕೆ “ಸುರಗಿ’ ಎಂದು ನಾಮಕರಣ ಮಾಡಲಾಗಿದೆ. ಈ ಚಿತ್ರವನ್ನು ಬಿ.ಎಂ.ಗಿರಿರಾಜ್‌ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು, ಚಿತ್ರಕ್ಕೆ ಮನು ಹೆಗಡೆ ಹಾಗೂ ಧನ್ಯಾ ನಾಯಕ, ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

Advertisement

“ಸುರಗಿ’ ಎಂಬುದು ಮಲೆನಾಡಿನ ಭಾಗದಲ್ಲಿ ಬೆಳೆಯುವ ಹೂವೊಂದರ ಹೆಸರು. ಚಿತ್ರಕ್ಕೆ ಅಪ್ಪಟ ಕನ್ನಡ ಹೆಸರು ಇಡಬೇಕು ಎಂಬ ಕಾರಣಕ್ಕೆ ಈ ನಾಮಕರಣ ಮಾಡಿದ್ದಾರೆ ನಿರ್ದೇಶಕರು. ಅಂದಹಾಗೆ, ಇದೊಂದು ಗಂಡು, ಹೆಣ್ಣಿನ ಒತ್ತಡಗಳ ನಡುವೆ ಇರುವ ಕಥೆಯನ್ನು ಹೇಳಲಿದೆಯಂತೆ. ಒಂದಷ್ಟು ಮಾನಸಿಕ ಸಂಘರ್ಷಕ್ಕೆ ಸಿಲುಕಿದ ಅವರುಗಳು ಅದರಿಂದ ಹೇಗೆ ಹೊರಬರುತ್ತಾರೆ ಎಂಬ ವಿಷಯವನ್ನು ಇಟ್ಟುಕೊಂಡು ಈ ಚಿತ್ರ ಮಾಡಲಾಗುತ್ತಿದೆ. ಗಿರಿರಾಜ್‌ ಅಂದಾಕ್ಷಣ, ಸೂಕ್ಷ್ಮತೆಯ ಕಥೆ ಹಿಡಿದು, ತೆರೆಯ ಮೇಲೆ ಗಂಭೀರವಾಗಿ ಹೇಳುವ ಮೂಲಕ ಅಳಿಸುತ್ತಾ ಹೋಗುತ್ತಾರೆ ಎಂಬುದು ಗೊತ್ತು. ಆದರೆ, ಈ “ಸುರಗಿ’ ಚಿತ್ರದಲ್ಲಿ ಹಾಸ್ಯವಿದೆ. ಅದರೊಂದಿಗೆ ಥ್ರಿಲ್ಲಿಂಗ್‌ ಅಂಶಗಳು ಇರಲಿವೆ. ಇವೆಲ್ಲದರ ಜೊತೆಯಲ್ಲಿ ಅಪ್ಪಟ ಪ್ರೀತಿಯ ಸೆಳೆತವೂ ಇಲ್ಲಿದೆಯಂತೆ.

ಈ ಹಿಂದೆ “ದೇವರ ನಾಡಲ್ಲಿ’, “ಕಾನೂರಾಯಣ’,”ದಿ ಟೆರರಿಸ್ಟ್‌’, ಸೇರಿದಂತೆ ಕೆಲ ಚಿತ್ರಗಳಲ್ಲಿ ನಟಿಸಿದ್ದ ಮನು ಹೆಗಡೆ ಅವರಿಗಿಲ್ಲಿ ಹೊಸ ತರಹದ ಪಾತ್ರ ಸಿಕ್ಕಿದೆಯಂತೆ. ಇನ್ನು, ತಮಿಳು ಚಿತ್ರಗಳಲ್ಲಿ ನಟಿಸಿದ್ದ ಧನ್ಯಾ, ಈ ಹಿಂದೆ ಗಿರಿರಾಜ್‌ ಅವರ ವೆಬ್‌ ಸೀರಿಸ್‌ ರಕ್ತಚಂದನದಲ್ಲಿ ಕಾ ಣಿಸಿಕೊಂಡಿದ್ದರು. ಈಗ ಮತ್ತೆ ಗಿರಿರಾಜ್‌ ನಿರ್ದೇಶನದಲ್ಲಿ “ಸುರಗಿ’ಯಲ್ಲಿ ನಟಿಸುತ್ತಿದ್ದಾರೆ. ರಿಷಿ ಅಭಿನಯದ “ಸಾರ್ವಜನಿಕರಿಗೆ ಸುವರ್ಣಾವಕಾಶ’ ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next