Advertisement

ನಟ, ನಿರೂಪಕ ಸಂಜೀವ್ ಕುಲಕರ್ಣಿ ನಿಧನಕ್ಕೆ ಸ್ಯಾಂಡಲ್ ವುಡ್ ಕಂಬನಿ

01:16 PM Apr 08, 2020 | Hari Prasad |

ಬೆಂಗಳೂರು: ಕನ್ನಡ ಕಿರುತೆರೆ ಲೋಕದ ಖ್ಯಾತ ನಟ, ನಿರೂಪಕ ಸಂಜೀವ್ ಕುಲಕರ್ಣಿ ಅವರು ತಮಗಿದ್ದ ಅನಾರೋಗ್ಯದ ಕಾರಣದಿಂದ ಶನಿವಾರದಂದು ನಿಧನ ಹೊಂದಿದ್ದಾರೆ. ನಾರಾಯಣ ಹೃದಯಾಲಯದಲ್ಲಿ ಇಹಲೋಕವನ್ನು ತ್ಯಜಿಸಿದ ಸಂಜೀವ್ ಅವರಿಗೆ 49 ವರ್ಷ ವಯಸ್ಸಾಗಿತ್ತು. ಸಂಜೀವ್ ಅವರು ಕಳೆದ ಕೆಲವು ವರ್ಷಗಳಿಂದ ಗಂಭೀರ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು.

Advertisement

ಸಂಜೀವ್ ಕುಲಕರ್ಣಿ ಅವರ ನಿಧನಕ್ಕೆ ಕನ್ನಡ ಕಿರುತೆರೆ ಮತ್ತು ಹಿರಿತೆರೆ ಲೋಕ ಕಂಬನಿ ಮಿಡಿದಿದೆ. ಅವರ ಜೊತೆಯಲ್ಲಿ ನಟಿಸಿದ್ದ ಹಲವಾರು ಕಿರುತೆರೆ ಕಲಾವಿದರು ಸಂಜೀವ್ ಅವರ ಸಾವಿನ ಸುದ್ದಿ ಕೇಳಿ ಆಘಾತಗೊಂಡಿದ್ದಾರೆ.

‘ಸಂಜೀವ್ ಕುಲಕರ್ಣಿ ಇಲ್ಲ ಎಂದು ನಂಬಲಾಗುತ್ತಿಲ್ಲ. ಹಲವಾರು ಸರ್ಜರಿಗೆ ಒಳಗಾದ ಅವರು ಮೇಲಿಂದ ಮೇಲೆ ನೋವನ್ನು ಅನುಭವಿಸಿದ್ದಾರೆ. ಅವರ ಮಗುವಿನ ಮುಖ ನೋಡಿರುವ ನನಗೆ ಅವರ ಶವವನ್ನು ನೋಡಲು ಆಗದು. ನಾನು ಶವ ನೋಡಲು ಇಷ್ಟಪಡುವುದಿಲ್ಲ. ನೀವು ಜೀವಂತವಾಗಿರುವಾಗ ಹೇಗೆ ಇರುತ್ತಿದ್ದೀರೋ ಹಾಗೆ ನೆನಪಿನಲ್ಲಿ ಇರುತ್ತೀರಿ’ ಎಂದು ನಟಿ ಶಾಂಭವಿ ಅವರು ಇನ್ ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇನ್ನು ಸಂಜೀವ ನಿಧನಕ್ಕೆ ನಟ, ಗಾಯಕ ರವಿಶಂಕರ್ ಗೌಡ ಅವರೂ ಸಹ ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಸಂತಾಪ ಸೂಚಿಸಿದ್ದು. ತಮ್ಮ ವೃತ್ತಿರಂಗದ ಗೆಳೆಯನ ಬಗ್ಗೆ ರವಿಶಂಕರ್ ಅವರು ಟ್ವಿಟ್ಟರ್ ಖಾತೆಯಲ್ಲಿ ಹೀಗೆ ಬರೆದುಕೊಂಡಿದ್ದಾರೆ.

ಅಪ್ಪಟ ಕನ್ನಡದ ಪ್ರತಿಭೆ , ಅಜಾತಶತ್ರು , ಒಳ್ಳೆಯ ಗೆಳೆಯ …
ನೀವು ಬದುಕಬೇಕೆಂಬ ಉತ್ಕಟ ಆಸೆಯಿಂದ ಕನ್ನಡಿಗರು ಪ್ರಾರ್ಥನೆ ಮಾಡಿ ತಮ್ಮ ಕೈಲಾದ ಸಹಾಯವನ್ನು ಮಾಡಿದ್ದರೂ ವಿಧಿಲಿಖಿತ ಮಾತ್ರ ಬದಲಾಗಲಿಲ್ಲ…
ಹೋಗಿ ಬನ್ನಿ ಸಂಜೀವ್ ನಿಮ್ಮ ಆತ್ಮಕ್ಕೆ ರಾಯರು ಚಿರಶಾಂತಿ ನೀಡಲಿ..
ಗೆಳೆಯ ಸಂಜೀವ್ ಕುಲಕರ್ಣಿ ಇನ್ನಿಲ್ಲ…

ಸಂಜೀವ್ ಅವರು ‘ಸಂಭ್ರಮ-ಸೌರಭ’ ಎಂಬ ಮಾಸಿಕ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದರು. ಅವರ ಮೃದು ಮಾತಿನ, ನಗುಮುಖದ ನಿರೂಪಣೆ ಈ ಕ್ಷೇತ್ರದಲ್ಲಿ ಅವರಿಗೆ ಅಪಾರ ಅಭಿಮಾನಿಗಳನ್ನು ಗಳಿಸಿಕೊಟ್ಟಿತ್ತು. ಸಂಜೀವ್ ಅವರು ಕಿರುತೆರೆಯ ಹಲವು ಚಾನೆಲ್ ಗಳಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿಗಳಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸುವ ಮೂಲಕವೂ ಮನೆಮಾತಾಗಿದ್ದರು. ಸದ್ಯಕ್ಕೆ ಅವರು ‘ಪಾಪಾ ಪಾಂಡು’ ಧಾರಾವಾಹಿಯ ನಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

Advertisement

ಇತ್ತೀಚೆಗೆ ಕೆಲವು ದಿನಗಳ ಹಿಂದೆಯಷ್ಟೇ ಬಹುಭಾಷಾ ನಟ ಕಿಚ್ಚ ಸುದೀಪ್ ಅವರು ಸಂಜೀವ್ ಕುಲಕರ್ಣಿ ಅವರ ಚಿಕಿತ್ಸಾ ವೆಚ್ಚವನ್ನು ಭರಿಸಲು ಸಹೃದಯ ದಾನಿಗಳು ಸಹಾಯ ಮಾಡುವಂತೆ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿಕೊಂಡಿದ್ದರು.

ಸಂಜೀವ್ ಅವರಿಗಿದ್ದ ಹೃದಯ ಸಂಬಂಧಿ ತೊಂದರೆ ಇತ್ತೀಚೆಗೆ ಉಲ್ಭಣಗೊಂಡಿತ್ತು ಮತ್ತು ಇದಕ್ಕಾಗಿ ಹೃದಯ ಕಸಿ ನಡೆಸುವುದು ಅನಿವಾರ್ಯವಾಗಿತ್ತು. ಆದರೆ ಈ ವೈದ್ಯಕೀಯ ವಿಧಾನಕ್ಕೆ ಸುಮಾರು 40 ರಿಂದ 50 ಲಕ್ಷ ರೂಪಾಯಿ ಅಗತ್ಯವಿತ್ತು. ಕಿಚ್ಚನ ಮನವಿಗೆ ಸ್ಪಂದಿಸಿ ಹಲವರು ಸಂಜೀವ್ ಅವರಿಗೆ ಧನ ಸಹಾಯ ಮಾಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

ಸಂಜೀವ್ ಅವರ ಪುತ್ರ ಸೌರಭ್ ಕುಲಕರ್ಣಿ ಅವರೂ ಸಹ ತಮ್ಮ ಇನ್ ಸ್ಟಾ ಖಾತೆಯಲ್ಲಿ ತಂದೆಯ ಚಿಕಿತ್ಸೆಗಾಗಿ ಧನ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next