ಹಳ್ಳಿಗಳಲ್ಲಿ ತುಂಬಾ ಜನಪ್ರಿಯವಾಗಿದ್ದ ಆಟಗಳ ಪೈಕಿ ಕಣ್ಣಾಮುಚ್ಚಾಲೆಗೆ ಮೊದಲ ಸ್ಥಾನ. ಈ ಆಟ ಆನಂತರದಲ್ಲಿ ನಗರಕ್ಕೂ ಲಗ್ಗೆಯಿಟ್ಟಿತು. ಆದರೆ ನಗರಗಳಲ್ಲಿ ಅಷ್ಟಾಗಿ ಜನಪ್ರಿಯ ಆಗಲಿಲ್ಲ. ಕಾರಣ, ನಗರಗಳಲ್ಲಿ ಹಿಂದೆಯೂ ಅಜ್ಜಿಯರು, ಅಥವಾ ವಯಸ್ಸಾದ ಹಿರಿಯ ಮಹಿಳೆಯರು ಇರುತ್ತಿರಲಿಲ್ಲ. (ಈ ಆಟ ಆಡಲು ಒಬ್ಬರು ಅಜ್ಜಿ ಅಥವಾ ಹಿರಿಯ ಗೃಹಿಣಿ ಅಗತ್ಯವಾಗಿ ಬೇಕಾಗುತ್ತಾರೆ.) ಮತ್ತು ನಗರದ ಜನರಲ್ಲಿ ಪರಸ್ಪರರ ನಡುವೆ ಉತ್ತಮ ಬಾಂಧವ್ಯ ಇರುತ್ತಿರಲಿಲ್ಲ.
ಅಡಗಲು ಜಾಗವೂ ಇರುತ್ತಿರಲಿಲ್ಲ. ಹಿಂಡುಗಟ್ಟಲೆ ಹುಡುಗರು/ ಹುಡುಗಿಯರು. ಅಥವಾ ಹುಡುಗರು- ಹುಡುಗಿಯರಿಂದ ಕೂಡಿದ ಒಂದು ಗುಂಪು. ಜೊತೆಗೆ, ಕಣ್ಣಾಮುಚ್ಚೆ ಎಂದು ರಾಗವಾಗಿ ಹಾಡಲು, ಅಂಪೈರ್ ಥರಾ ಇಡೀ ಆಟದ ಮೇಲುಸ್ತುವಾರಿ ವಹಿಸಲು ಒಬ್ಬರು ಅಮ್ಮ ಅಥವಾ ಅಜ್ಜಿ- ಇಷ್ಟು ಜನ ಇದ್ದರೆ ಕಣ್ಣಾಮುಚ್ಚೆ ಆಟಕ್ಕೆ ವೇದಿಕೆ ಸಿದಟಛಿವಾದ ಹಾಗೇ. ಇದರ ಜೊತೆಗೆ ಅತೀ ಅಗತ್ಯವಾಗಿ ಬೇಕಿದ್ದುದು ಅಡಗಿಕೊಳ್ಳಲು ಜಾಗ. ಮೊದಲು ಎಲ್ಲಾ ಹುಡುಗ- ಹುಡುಗಿಯರು ಸೇರಿಕೊಂಡು ಪ್ಲಸ್ ಹಾಕುತ್ತಾರೆ.
ಅದರಲ್ಲಿ ಯಾರು ಫೇಲ್ ಆಗುತ್ತಾರೋ, ಅವರೇ ಕಣ್ಣುಮುಚ್ಚಿಸಿ ಕೊಳ್ಳಬೇಕಾದವರು. ಆಟದ ಪ್ರಮುಖರಲ್ಲಿ ಒಬ್ಬರಾದ ಹಿರಿಯ ಅಜ್ಜಿ ಅಥವಾ ಗೃಹಿಣಿ, ಅವರ ಕಣ್ಣುಗ ಳನ್ನು ತಮ್ಮ ಎರಡೂ ಕೈಗಳಿಂದ ಮುಚ್ಚಿ- ಕಣ್ಣಾ ಮುಚ್ಚೆ ಕಾಡೇ ಗೂಡೆ ಉದ್ದಿನ ಮೂಟೆ ಉರುಳಿ ಹೋಯ್ತು, ನಮ್ಮ ಹಕ್ಕಿ ಬಿಟ್ಟೆ, ನಿಮ್ಮ ಹಕ್ಕಿ ಹಿಡ್ಕೊಳ್ಳಿ…ಎಂದು ಹೇಳಿ, ಕಣ್ಣು ಮುಚ್ಚಿದ್ದ ತಮ್ಮ ಕೈಗಳನ್ನು ತೆಗೆಯುತ್ತಾರೆ.
ಕಣ್ಣಾ ಮುಚ್ಚೆ… ಎಂದು ಹಾಡುವ ಸಮಯದಲ್ಲೇ ಎಲ್ಲಾ ಆಟಗಾರರೂ ಮನೆಯ ಸುತ್ತ ಮುತ್ತ, ಮರದ/ ಕಾಂಪೌಂಡ್‌ನ ಹಿಂದೆ ಅಡಗಿ ಕೂರುತ್ತಾರೆ. ಅವರನ್ನೆಲ್ಲಾ ಹಿಡಿಯುವುದೇ ಕಣ್ಣು ಮುಚ್ಚಿ ಸಿಕೊಂಡವರ ಕೆಲಸ. ಇವರು ಹಿಡಿಯುವುದಕ್ಕೂ ಮೊದಲೇ ಅವರೆಲ್ಲಾ ಕೈಗೆ ಸಿಗದೇ ಓಡಿಬಂದು ಕಣ್ಣಾಮುಚ್ಚೆ ಹಾಡಿದ ಅಜ್ಜಿಯನ್ನು ಮುಟ್ಟಿಬಿಟ್ಟರೆ, ಮತ್ತೂಮ್ಮೆ ಕಣ್ಣು ಮುಚ್ಚಿಸಿಕೊಂಡು ಹಿಡಿಯಲು ಹೋಗಬೇಕು….
ಇದು, ಕಣ್ಣಾಮುಚ್ಚೆ ಆಟದ ನಿಯಮಾವಳಿ. ಸಂಜೆಯ ವೇಳೆ ಮಕ್ಕಳು ಶಾಲೆಯಿಂದ ಮನೆಗೆ ಬಂದ ನಂತರ ಈ ಆಟವನ್ನು ಹೆಚ್ಚಾಗಿ ಆಡಲಾಗುತ್ತಿತ್ತು. ದಸರಾ ಮತ್ತು ಬೇಸಿಗೆ ರಜೆಯ ಸಂದರ್ಭದಲ್ಲಿ ಅಜ್ಜಿ ಊರಿಗೆ ಬರುತ್ತಿದ್ದ ಸಿಟಿಯ ಮಕ್ಕಳು, ಈ ಆಟದ ಸೊಗಸಿಗೆ ಮಾರು ಹೋಗುತ್ತಿದ್ದರು. ಅಡಗಿ ಕುಳಿತವರನ್ನು ಹಿಡಿಯುವ, ಹಿಡಿಯುವವರಿಂದ ತಪ್ಪಿಸಿಕೊಳ್ಳುವ ನೆಪದಲ್ಲಿ, ಮಕ್ಕಳಿಗೆ ರನ್ನಿಂಗ್ ರೇಸ್ ಆಗುತ್ತಿತ್ತು. ಆ ನೆಪದಲ್ಲಿ ಅವರಿಗೇ ಗೊತ್ತಿಲ್ಲದ ಹಾಗೆ ದೇಹಕ್ಕೆ ಒಳ್ಳೆಯ ವ್ಯಾಯಾಮ ಆಗುತ್ತಿತ್ತು.