Advertisement

ಕಂಕನಾಡಿ: ಹಳೆ ರಸ್ತೆ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ 

09:43 AM Jan 20, 2018 | Team Udayavani |

ಮಹಾನಗರ: ಸ್ಮಾರ್ಟ್‌ ಸಿಟಿಯಾಗಲು ಸಿದ್ಧಗೊಳ್ಳುತ್ತಿರುವ ನಗರದ ಹೃದಯ ಭಾಗದಲ್ಲೇ ಸಮಸ್ಯೆಗಳು ಹೆಚ್ಚುತ್ತಿದ್ದು, ಕಂಕನಾಡಿ ಹಳೆ ರಸ್ತೆ ಭಾಗದ ಜನರು ಮಹಾನಗರ ಪಾಲಿಕೆಗೆ ಹಿಡಿಶಾಪ ಹಾಕತೊಡಗಿದ್ದಾರೆ.

Advertisement

ವಾಹನ ದಟ್ಟನೆ ಹಾಗೂ ಜನಸಂದಣಿ ಜಾಸ್ತಿಯಿರುವ ಕಂಕನಾಡಿ ಹಳೆ ರಸ್ತೆಯ ಕೊಚ್ಚಿನ್‌ ಬೇಕರಿಯಿಂದ ಪಂಪ್‌ವೆಲ್‌ ರಾಷ್ಟ್ರೀಯ ಹೆದ್ದಾರಿ ವರೆಗಿನ (ಕಂಕನಾಡಿ ಓಲ್ಡ್‌ ರೋಡ್‌) ಸುಮಾರು ಮುಕ್ಕಾಲು ಕಿಲೋ ಮೀಟರ್‌ ರಸ್ತೆಯ ಕಾಮಗಾರಿ ಪ್ರಾರಂಭವಾಗಿ 2 ತಿಂಗಳು ಕಳೆದಿದ್ದರೂ ಇನ್ನೂ ಪೂರ್ಣಗೊಂಡಿಲ್ಲ. ಅರ್ಧಂಬರ್ಧ ಕಾಮಗಾರಿಯಿಂದ ತೊಂದರೆಯಾಗುತ್ತಿರುವುದೇ ಇದಕ್ಕೆ ಕಾರಣ.

ಸ್ಥಳೀಯರು ಹೇಳುವಂತೆ, ಹಿಂದೆ ಈ ಭಾಗದಲ್ಲಿ ಮಳೆ ಬಂದರೆ ಒಳಚರಂಡಿ ನೀರು ಉಕ್ಕಿ ರಸ್ತೆಯಲ್ಲೇ ಹರಿದುವಾಹನಗಳ ಸಂಚಾರಕ್ಕೆ ಅಡಚಣೆಯಾಗುತ್ತಿತ್ತು. 

ಇಂದಿರಾಗಾಂಧಿ ಓಡಾಡಿದ್ದ ರಸ್ತೆ !
ಕಂಕನಾಡಿ ಹಳೆ ರಸ್ತೆಯು ಬಹಳ ಹಿಂದೆ ನಿರ್ಮಾಣವಾಗಿದ್ದು, ಮಾಜಿ ಪ್ರಧಾನಿ ಇಂದಿರಾಗಾಂಧಿ ಮಂಗಳೂರಿಗೆ ಇದೇ
ರಸ್ತೆಯ ಮುಖಾಂತರ ಆಗಮಿಸಿದ್ದರು. ಆಗ ಸ್ಟೇಟ್‌ಬ್ಯಾಂಕ್‌ನ್ನು ಸಂಪರ್ಕಿಸಲು ಬೇರೆ ಯಾವುದೇ ರಸ್ತೆಗಳಿರಲಿಲ್ಲ. ಹೆಚ್ಚಿನ ವಾಹನಗಳು ಪಂಪ್‌ವೆಲ್‌ನಿಂದ ಕಂಕನಾಡಿಗೆ ಹೋಗಲು ಇದೇ ರಸ್ತೆಯನ್ನು ಅವಲಂಬಿಸಿತ್ತು. ಸುಮಾರು 300 ವರ್ಷ ಇತಿಹಾಸವಿರುವ ಈ ರಸ್ತೆಗೆ ಡಿಸ್ಟ್ರಿಕ್ಟ್ ರೋಡ್‌ ಎಂಬ ಹೆಸರಿತ್ತು. ಬಳಿಕ ಕಂಕನಾಡಿ ಹಳೆ ರಸ್ತೆ
ಎಂದಾಗಿದೆ.

ಚರಂಂಡಿಯಲ್ಲಿ ಅಳವಡಿಸಲಾದ ಕೊಳವೆಯಲ್ಲಿ ನೀರು ಸರಾಗವಾಗಿ ಹರಿಯುತ್ತಿರಲಿಲ್ಲ. ನವೆಂಬರ್‌ನಲ್ಲಿ ಇಲ್ಲಿನ ಒಳಚರಂಡಿ ವ್ಯವಸ್ಥೆ ಮತ್ತು ನೀರಿನ ಪೈಪ್‌ ಲೈನ್‌ ದುರಸ್ತಿ ಪ್ರಾರಂಭಿಸಲಾಗಿತ್ತು. ಆದರೆ, ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ. ಕಾಮಗಾರಿಯಿಂದಾಗಿ ರಸ್ತೆ ಸಂಪೂರ್ಣ ಹಾಳಾಗಿ ಹೋಗಿದೆ. ಎಲ್ಲೆಡೆಯೂ ಬರೀ ಗುಂಡಿಗಳೇ ಕಾಣಿಸುತ್ತಿದ್ದು, ವಾಹನ ಸವಾರರು ಪರದಾಡುವಂತಾಗಿದೆ.

Advertisement

ಈ ರಸ್ತೆಯು ಪಂಪ್‌ವೆಲ್‌ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುತ್ತದೆ. ಇದೇ ರಸ್ತೆಯ ಪಕ್ಕದಲ್ಲಿ ಯೇನಪೋಯ ನರ್ಸಿಂಗ್‌ ಹೋಮ್‌ ಇದೆ. ಅಕ್ಕ ಪಕ್ಕ ಅನೇಕ ಫ್ಲ್ಯಾಟ್‌ ಇರುವುದರಿಂದ ಇಲ್ಲಿ ಜನದಟ್ಟಣೆ ಹೆಚ್ಚು. ಒಳಚರಂಡಿ ಮತ್ತು ನೀರಿನ ಪೈಪ್‌ಲೈನ್‌ ಅಳವಡಿಕೆ ಕಾಮಗಾರಿಯಡಿ ಒಟ್ಟು 29 ಮ್ಯಾನ್‌ಹೋಲ್‌ಗ‌ಳ ಪೈಕಿ ಹಲವು ಮ್ಯಾನ್‌ ಹೋಲ್‌ ದುರಸ್ತಿ ಪೂರ್ಣಗೊಂಡಿದೆ. ಆದರೂ ಕೆಲಸ ಬಾಕಿ ಇದೆ. ಇದರೊಂದಿಗೆ ಡಿ.29ಕ್ಕೆ ಒಳಚರಂಡಿ ಮತ್ತು ನೀರಿನ ಪೈಪ್‌ಲೈನ್‌ ಅಳವಡಿಕೆ ಕಾಮಗಾರಿ ಪೂರ್ಣಗೊಂಡರೂ ರಸ್ತೆಗಿನ್ನೂ ಡಾಮರು ಹಾಕಿಲ್ಲ ಎನ್ನುವುದು ಸ್ಥಳೀಯರ ದೂರು.

ಶೀಘ್ರವೇ ಕಾಮಗಾರಿ
‘ಶೀಘ್ರವೇ ಕಾಂಕ್ರೀಟ್‌ ಕಾಮಗಾರಿ ಪ್ರಾರಂಭವಾಗಲಿದ್ದು, 15 ದಿನಗಳು ತಗುಲಲಿವೆ. ಇದಕ್ಕಾಗಿ 2.25 ಕೋಟಿ ರೂ. ಹಾಗೂ ಒಳಚರಂಡಿ ಕೆಲಸಕ್ಕೆ 75 ಲಕ್ಷ ರೂ. ವಿನಿಯೋಗಿಸಲಾಗಿದೆ. ಅನುದಾನದ ಕೊರತೆಯಿಂದಾಗಿ ಸದ್ಯಕ್ಕೆ ರಸ್ತೆಯನ್ನು ಅಗಲಗೊಳಿಸುತ್ತಿಲ್ಲ. ಈ ವೇಳೆಯಲ್ಲಿ ಈ ರಸ್ತೆಯಲ್ಲಿ ಎಲ್ಲಾ ರೀತಿಯ ಸಂಚಾರ ನಿರ್ಬಂಧಿಸಲು ಸ್ಥಳೀಯರಲ್ಲಿ ಮನವಿ ಮಾಡಿದ್ದೇವೆ. ಯೋಜನಾ ವರದಿಯ ಪ್ರಕಾರ ಮಾರ್ಚ್‌ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುತ್ತೇವೆ ಎಂದಿದ್ದೆವು. ಅದಕ್ಕೂ ಮೊದಲು ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುವುದು. 
ಆಶಾ ಡಿ’ಸಿಲ್ವಾ,
  ಕಾರ್ಪೊರೇಟರ್‌, ಕಂಕನಾಡಿ

ವಿದ್ಯುತ್‌ ತಂತಿ ಅಪಾಯ
‘ಈ ಮಾರ್ಗದಲ್ಲಿ ಇನ್ನೂ ಅನೇಕ ಸಮಸ್ಯೆಗಳಿವೆ. ಸದ್ಯ ಮಾರ್ಗದ ಒಂದೇ ಕಡೆಯಲ್ಲಿ ನೀರಿನ ಪೈಪ್‌ ಅಳವಡಿಸಲಾಗಿದೆ. ಇದನ್ನು ಎರಡೂ ಕಡೆ ಮಾಡಬೇಕು. ವಿದ್ಯುತ್‌ ತಂತಿ ತುಂಬಾ ಕೆಳಗಿದ್ದು, ಎತ್ತರದ ವಾಹನ ಹೋಗಲು ಕಷ್ಟವಾಗುತ್ತದೆ.’
 – ಲಾನ್ಸಿ ಸೆರಾರೊ,
    ಮಾಜಿ ಕಾರ್ಪೋರೇಟರ್‌

 ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next