Advertisement

ಆಧ್ಯಾತ್ಮದೊಂದಿಗೆ ಜ್ಞಾನವಂತರಾಗಿ: ಗಣೇಶ್‌ ರಾವ್‌

12:52 AM Mar 05, 2023 | Team Udayavani |

ಮಂಗಳೂರು: ನಾವು ಆಧ್ಯಾತ್ಮದೊಂದಿಗೆ ಜ್ಞಾನವಂತರಾಗ ಬೇಕು. ವಿದ್ಯೆ ಕಲಿತು ಸಮಾಜ ಕಟ್ಟಿ, ಎಲ್ಲರನ್ನು ಪ್ರೀತಿಯಿಂದ ಗೆಲ್ಲಬೇಕು ಎಂದು ಎಂದು ಕರಾವಳಿ ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಎಸ್‌. ಗಣೇಶ್‌ ರಾವ್‌ ಹೇಳಿದರು.

Advertisement

ತುಳುನಾಡಿನ ಕಾರಣಿಕ ಕ್ಷೇತ್ರ ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರ ಸ್ಥಾಪನೆಗೊಂಡು 150 ವರ್ಷ ಪೂರ್ಣಗೊಂಡಿರುವ ಪ್ರಯುಕ್ತ ಮಾ. 7ರ ವರೆಗೆ ನಡೆಯಲಿರುವ “ಕಂಕನಾಡಿ ಗರಡಿ 150-ನಮ್ಮೂರ ಸಂಭ್ರಮ’ ಎರಡನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಧರ್ಮ ಎಂದಿಗೂ ಕೇಡು ಬಯ ಸುವುದಿಲ್ಲ. ಎಲ್ಲರನ್ನೂ ಪ್ರೀತಿಯಿಂದ ಉದಾತ್ತ ನೆಲೆಯಲ್ಲಿ ಸೆಳೆಯುತ್ತದೆ. ಅಂತಹ ಧರ್ಮವನ್ನು ಕಂಕನಾಡಿ ಗರಡಿ ಕ್ಷೇತ್ರದಲ್ಲಿ ಕಾಣಬಹುದು. ಭಾರತೀಯ ಸಮಾಜ ನಂಬಿಕೆಯ ತಳಹದಿಯಲ್ಲಿ ನಿಂತಿದೆ. ನಮ್ಮ ನಂಬಿಕೆ ಮೂಢನಂಬಿಕೆಯಲ್ಲ, ಮೂಲ ನಂಬಿಕೆ. ಪ್ರಕೃತಿಯನ್ನು ದೇವರು ಎಂದು ಪೂಜಿಸುತ್ತಿದ್ದೇವೆ. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿ ನಾಶವಾಗುತ್ತಿರುವುದು ಖೇದಕರ ಎಂದರು.

ಶ್ರೀ ಧಾಮ ಶ್ರೀ ಮಹಾಲಕ್ಷ್ಮಿಕ್ಷೇತ್ರ ಮಾಣಿಲ ಶ್ರೀ ಮೋಹನದಾಸ ಪರಮ ಹಂಸ ಸ್ವಾಮೀಜಿ, ಶ್ರೀ ಚಾಮುಂಡೇಶ್ವರಿ ದೇವಿ ಕ್ಷೇತ್ರ ಕಣಿಯೂರಿನ ಶ್ರೀ ಮಹಾಬಲೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗಣೇಶ್‌ ಶೆಟ್ಟಿ ಗುಡ್ಡೆಗುತ್ತು ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮೇಯರ್‌ ಜಯಾನಂದ ಅಂಚನ್‌, ಶಾಸಕ ಯು.ಟಿ. ಖಾದರ್‌, ಮಾಜಿ ಶಾಸಕ ಜೆ.ಆರ್‌. ಲೋಬೊ, ಮನಪಾ ಸದಸ್ಯ ಪ್ರವೀಣ್‌ ಚಂದ್ರ ಆಳ್ವ, ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿಯ ಅಧ್ಯಕ್ಷ ಎಚ್‌.ಎಸ್‌. ಸಾಯಿರಾಂ, ಬಿಲ್ಲವ ಸಂಘ ಬಹ್ರೈನ್‌ ಮಾಜಿ ಅಧ್ಯಕ್ಷ ಅಜಿತ್‌ ಬಂಗೇರ, ಬಿಲ್ಲವ ಸಂಘ ಕತಾರ್‌ ಮಾಜಿ ಅಧ್ಯಕ್ಷ ರಘು ಸಿ. ಪೂಜಾರಿ, ಕಂಕನಾಡಿ ಬಿಲ್ಲವ ಸೇವಾ ಸಮಾಜ ಅಧ್ಯಕ್ಷ ಭರತೇಶ ಅಮೀನ್‌, ಪ್ರಮುಖರಾದ ಬಿ. ವಿಠಲ, ವಾಮನ, ದೇವೇಂದ್ರ, ವಿಜಯ್‌, ದಿವರಾಜ್‌ ಸೇರಿದಂತೆ ಆಡಳಿತ ಮಂಡಳಿಯ ಪ್ರಮುಖರು, ಗಣ್ಯರು ಇದ್ದರು.
ಟ್ರಸ್ಟಿ ದಿನೇಶ್‌ ಅಂಚನ್‌ ಪ್ರಸ್ತಾವನೆಗೈದರು. ವಸಂತ ಪೂಜಾರಿ ಸ್ವಾಗತಿಸಿ, ರೇಣುಕಾ ಕಣಿಯೂರು ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next