Advertisement

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

01:55 AM Apr 25, 2024 | Team Udayavani |

ಮಂಗಳೂರು: ನಗರದಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಚುನಾವಣ ಆಯೋಗ ಕೊನೇ ಹಂತದ ಕಸರತ್ತು ಮುಂದುವರಿಸಿದೆ. ನಗರದ ಜನತೆಗೆ ಮತಗಟ್ಟೆಗಳ ಮಾಹಿತಿ ನೀಡಲು ಚುನಾವಣೆ ಸ್ಲಿಪ್‌ಗ್ಳಲ್ಲಿ ಕ್ಯುಆರ್‌ ಕೋಡ್‌ ನೀಡಲಾಗಿದ್ದು, ಆ ಮೂಲಕ ಮತದಾನ ಕೇಂದ್ರದ ಮಾಹಿತಿ ನೀಡಲು ಮುಂದಾಗಿದೆ.

Advertisement

ದೇಶದಲ್ಲೇ ಕರ್ನಾಟಕದಲ್ಲಿ ಇದು ಮೊದಲ ಪ್ರಯೋಗವಾಗಿದ್ದು, ದ.ಕ. ಜಿಲ್ಲೆಯ ನಗರಕ್ಕೆ ಹೊಂದಿಕೊಂಡಿರುವ ಎರಡು ಕ್ಷೇತ್ರಗಳಲ್ಲಿ ಮಾತ್ರ ಜಾರಿಗೊಳಿಸಲಾಗಿದೆ. ಇದರಂತೆ ಮಂಗಳೂರು ದಕ್ಷಿಣ ಹಾಗೂ ಉತ್ತರ ಕ್ಷೇತ್ರದಲ್ಲಿ “ಸ್ಲಿಪ್‌’ ಮೂಲಕ ಮತದಾರರಿಗೆ ಮತಗಟ್ಟೆಯ ವಿವರ ಒದಗಿಸಲಾಗುತ್ತಿದ್ದು, ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾವಣೆಯಾಗುವ ನಿರೀಕ್ಷೆ ಹೊಂದಲಾಗಿದೆ.

ಮತದಾರರ ಸ್ಲಿಪ್‌ನಲ್ಲಿ ಮತಗಟ್ಟೆಯ ವಿವರ ನಗರದಲ್ಲಿರುವ ಅನೇಕರಿಗೆ ಮತಗಟ್ಟೆಯ ಬಗ್ಗೆ ಮಾಹಿತಿ ಇರುವುದಿಲ್ಲ. ಮತದಾನಕ್ಕಾಗಿ ಮತಗಟ್ಟೆಗಳನ್ನು ಅರಸಿಕೊಂಡು ಹೋಗಬೇಕಾಗುತ್ತದೆ. ಇದನ್ನು ನೀಗಿಸಲು ಕ್ಯುಆರ್‌ ಕೋಡ್‌ ನೀಡಲಾಗಿದ್ದು, ಸ್ಕ್ಯಾನ್‌ ಮಾಡಿದ ವೇಳೆ ಮತಗಟ್ಟೆಯ ಲೊಕೇಷನ್‌ ಪಡೆಯಬಹುದು. ಈ ಮೂಲಕ ಮತಗಟ್ಟೆ ಹಡುಕಿ ತೆರಳುವುದನ್ನು ತಪ್ಪಿಸಲು ಸಾಧ್ಯವಾಗಲಿದೆ.

ಹೆಚ್ಚುವರಿ ಮಾಹಿತಿ ಒದಗಿಸಬೇಕು
ಮತದಾನ ಸಂದರ್ಭ ಅನೇಕರಿಗೆ ಮತಗಟ್ಟೆ ಬಳಿ ಸರದಿ ಸಾಲಿನಲ್ಲಿ ನಿಲ್ಲಬೇಕಾಗುತ್ತದೆ. ಆ ಕಾರಣಕ್ಕೆ ಮತಗಟ್ಟೆಯ ಬಳಿಗೆ ತೆರಳಲು ಕೆಲವರು ಹಿಂದೇಟು ಹಾಕುತ್ತಾರೆ. ಮತಗಟ್ಟೆಯ ಬಳಿ ಇರುವ ಜನ ಸಂಖ್ಯೆಯ ವಿವರ ಹಾಗೂ ಯಾವ ಸಮಯದಲ್ಲಿ ಮತಚಲಾಯಿಸುವುದು ಸೂಕ್ತ ಎಂಬಿತ್ಯಾದಿ ಮಾಹಿತಿ ಒದಗಿಸಿದಲ್ಲಿ ಪ್ರಯೋಜನವಾಗಲಿದೆ ಎಂಬುವುದು ಮತದಾರರ ಅಭಿಪ್ರಾಯ.

ಏನೆಲ್ಲ ಮಾಹಿತಿ
ಕ್ಯುಆರ್‌ಕೋಡ್‌ ಇರುವ ಓಟರ್‌ ಸ್ಲಿಪ್‌ ಮೂಲಕ ಯಾವ ಮತಗಟ್ಟೆಗೆ ತೆರಳಬೇಕು? ಸೇರಿದಂತೆ ಹಲವು ಮಾಹಿತಿ ಪಡೆದುಕೊಳ್ಳಬಹುದು. ಮನೆಯಿಂದ ಮತಗಟ್ಟೆ ಎಷ್ಟು ದೂರವಿದೆ ಎನ್ನುವ ವಿವರ ಸಿಗಲಿದೆ. ತೆರಳಲು ಬೇಕಾದ ಸಮಯ ಹಾಗೂ ದಾರಿಯ ಬಗ್ಗೆಯೂ ಮಾಹಿತಿ ಸಿಗಲಿದೆ. ಮಾರ್ಗ ಮಧ್ಯದಲ್ಲಿರುವ ವಾಹನ ದಟ್ಟಣೆಯ ವಿವರವನ್ನು ಕೂಡ ತಿಳಿದುಕೊಳ್ಳಲು ಸಾಧ್ಯವಾಗಲಿದೆ. ಮತಗಟ್ಟೆಯ ಫೋಟೋ ಕೂಡ ಇಲ್ಲಿ ಕಾಣಬಹುದಾಗಿದ್ದು, ಮತದಾರರು ನಿರಾಯಾಸವಾಗಿ ಮತಗಟ್ಟೆ ತಲುಪಿ ಮತ ಚಲಾಯಿಸಬಹುದಾಗಿದೆ.

Advertisement

ಮಂಗಳೂರು ನಗರ ಪ್ರದೇಶದಲ್ಲಿ ಕಡಿಮೆ ಪ್ರಮಾಣದಲ್ಲಿ ಮತದಾನವಾಗುತ್ತದೆ. ಇದನ್ನು ನೀಗಿಸಲು ಇಲಾಖೆ ಮುಂದಾಗಿದೆ. ಎಲ್ಲರೂ ಮತದಾನದಲ್ಲಿ ಭಾಗವಹಿಸಬೇಕು ಎನ್ನುವುದು ಉದ್ದೇಶವಾಗಿದೆ. ಇದಕ್ಕಾಗಿ ಮತದಾರರಿಗೆ ನೆರವಾಗಲು ಮತ ಕೇಂದ್ರದ ಮಾಹಿತಿಯನ್ನು ಓಟರ್‌ಸ್ಲಿಪ್‌ನಲ್ಲಿ ಒದಗಿಸಲಾಗಿದೆ. ಮುಂದಿನ ಚುನಾವಣೆಗೆ ಮತ್ತಷ್ಟು ಹೆಚ್ಚುವರಿ ಮಾಹಿತಿ ನೀಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು.
– ಮುಲ್ಲೈ ಮುಗಿಲನ್‌,
ದ.ಕ. ಜಿಲ್ಲಾ ಚುನಾವಣಾಧಿಕಾರಿ

 

Advertisement

Udayavani is now on Telegram. Click here to join our channel and stay updated with the latest news.

Next