ಕಾಣಿಯೂರು: ಶಬರಿಮಲೆಗೆ ಮಹಿಳೆಯರ ಪ್ರವೇಶ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿ ಅಯ್ಯಪ್ಪ ಸ್ವಾಮಿ ಭಕ್ತವೃಂದ ಕಾಣಿಯೂರು ಹಾಗೂ ವಿವಿಧ ಸಂಘ – ಸಂಸ್ಥೆಗಳ ಸಹಯೋಗದೊಂದಿಗೆ ಬೃಹತ್ ಹಕ್ಕೊತ್ತಾಯ ಮೆರವಣಿಗೆ ಹಾಗೂ ಧಾರ್ಮಿಕ ಸಭೆ ಕಾಣಿಯೂರು ಶ್ರೀ ಅಮ್ಮನವರ ದೇವಸ್ಥಾನದ ವಠಾರದಲ್ಲಿ ಗುರುವಾರ ನಡೆಯಿತು.
ಕಾಣಿಯೂರು ಶ್ರೀರಾಮ ತೀರ್ಥ ಮಠದಿಂದ ಹೊರಟ ಜಾಥಾವು ಕಾಣಿಯೂರು ಪೇಟೆ ಸಾಗಿ ಶ್ರೀ ಅಮ್ಮನವರ ದೇವಸ್ಥಾನದ ವಠಾರದಲ್ಲಿ ಸಮಾಪನಗೊಂಡಿತು. ಕಾಣಿಯೂರು ಮಠದಲ್ಲಿ ಮಠದ ವ್ಯವಸ್ಥಾಪಕ ನಿರಂಜನ್ ಆಚಾರ್ ಅವರ ವಿಶೇಷ ಪ್ರಾರ್ಥನೆಯ ಬಳಿಕ ಜಾಥಾ ಆರಂಭವಾಯಿತು.
ಅನಂತರ ನಡೆದ ಸಭೆಯಲ್ಲಿ ಮಾತನಾಡಿದ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಶಬರಿಮಲೆ ಕ್ಷೇತ್ರದ ಪಾವಿತ್ರ್ಯಕ್ಕೆ ಕುಂದುಂಟು ಮಾಡಬೇಕೆಂಬ ದುರುದ್ದೇಶದಿಂದ ಕೋರ್ಟ್ ನಲ್ಲಿ ಮೊಕದ್ದಮೆ ಹೂಡಲಾಗಿದೆ. ನಮ್ಮ ಪರಂಪರೆ, ಸಂಪ್ರದಾಯ, ಕಟ್ಟುಕಟ್ಟಳೆಗಳು ನಿರಂತರವಾಗಿ ಹೀಗೆಯೇ ಮುಂದುವರಿಯುತ್ತಿರಬೇಕು. ಇಂತಹ ವಿಚಾರಗಳಿಗೆ ಧಕ್ಕೆಯಾಗುವ ಸಂದರ್ಭ ಇಡೀ ಹಿಂದೂ ಸಮಾಜ ಒಗ್ಗೂಡಿ ಹೋರಾಟ ಮಾಡುವುದು ಅನಿವಾರ್ಯ. ಸಮಾನತೆಗಾಗಿ ತೀರ್ಪು ನೀಡುವುದಾದರೆ ಹಿಂದೂ ಶ್ರದ್ಧಾ ಕೇಂದ್ರಗಳಿಗೆ ಮಾತ್ರ ಅನ್ವಯ ಮಾಡುವುದು ಯಾವ ರೀತಿಯ ಸಮಾನತೆ. ಕ್ಷೇತ್ರದ ಸಂಪ್ರದಾಯ, ನಿಯಮಾವಳಿಗಳನ್ನು ಕಾನೂನಿನ ನೆಪದಲ್ಲಿ ಅಪವಿತ್ರಗೊಳಿಸುವುದಕ್ಕೆ ವಿರೋಧವಿದೆ ಎಂದು ತಿಳಿಸಿದರು.
ನಳಿನಾಕ್ಷಿ ವಿ. ಆಚಾರ್ಯ ಕಲ್ಮಡ್ಕ ಅವರು ಧಾರ್ಮಿಕ ಉಪನ್ಯಾಸ ನೀಡಿ, ಹಿಂದೂ ಶ್ರದ್ಧಾಕೇಂದ್ರಗಳನ್ನು ಗುರಿಯಾಗಿರಿಸಿಕೊಂಡು ನಮ್ಮ ಧರ್ಮದ ಮೇಲೆ, ಧಾರ್ಮಿಕ ನಂಬಿಕೆಯ ಮೇಲೆ ಸವಾರಿ ಮಾಡುವಂತಹ ಸನ್ನಿವೇಶ ಪ್ರಸ್ತುತ ನಿರ್ಮಾಣವಾಗುತ್ತಿದೆ. ಶಬರಿಮಲೆ ಕ್ಷೇತ್ರಕ್ಕೆ ಮಹಿಳೆಯರಿಗೂ ಪ್ರವೇಶ ನೀಡಬೇಕೆಂದು ಸುಪ್ರೀಂ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದವರು ನಿಜವಾದ ಅಯ್ಯಪ್ಪ ಭಕ್ತರಲ್ಲ. ಹೀಗಾಗಿ ಅಂತವರಿಗೆ ಕೋರ್ಟ್ ಆಗಲಿ, ಭಕ್ತರಾಗಲಿ ಮಹತ್ವ ನೀಡಬೇಕಾಗಿರಲಿಲ್ಲ ಎಂದು ಅಭಿಪ್ರಾಯಪಟ್ಟರು.
ಹಿರಿಯ ಶಬರಿಮಲೆ ಯಾತ್ರಿಕ ಕೃಷ್ಣ ಚೆಟ್ಟಿಯಾರ್ ಅಧ್ಯಕ್ಷತೆ ವಹಿಸಿದ್ದರು. ಚಾರ್ವಾಕ ಅಯ್ಯಪ್ಪ ಸೇವಾ ಸಂಘದ ಕಾರ್ಯದರ್ಶಿ ಗಣೇಶ್ ಉದನಡ್ಕ ಸ್ವಾಗತಿಸಿ, ಕಾಣಿ ಯೂರು ಗ್ರಾ.ಪಂ. ಸದಸ್ಯ ಪರಮೇಶ್ವರ ಅನಿಲ ನಿರೂಪಿಸಿದರು. ರಾಮಣ್ಣ ಗೌಡ ಮುಗರಂಜ ವಂದಿಸಿದರು. ಬೆಳ್ಳಾರೆ ಠಾಣಾ ಎಎಸೈ ಭಾಸ್ಕರ ಅಡ್ಕಾರು, ಸಿಬಂದಿ ವರ್ಗ ಬಂದೋಬಸ್ತ್ ಕಲ್ಪಿಸಿದರು.
ಮನವಿ
ಹಿಂದೂಗಳ ಪವಿತ್ರ ಕ್ಷೇತ್ರಗಳಲ್ಲಿ ಒಂದಾದ ಶಬರಿಮಲೆಯ ಪಾವಿತ್ರ್ಯ ಉಳಿಸುವಂತೆ ಕೇಂದ್ರ ಹಾಗೂ ಕೇರಳ ಸರಕಾರಕ್ಕೆ ಮನವಿ ಸಲ್ಲಿಸುವ ನಿಟ್ಟಿನಲ್ಲಿ ಸಭೆಯಲ್ಲಿ ಸಹಿ ಸಂಗ್ರಹಿಸಲಾಯಿತು.ಲಕ್ಷ್ಮೀ ನರಸಿಂಹ ಯುವಕ ಮಂಡಲದ ಸಂಚಾಲಕ ಸುರೇಶ್ ಓಡಬಾಯಿ ಮನವಿ ಪತ್ರ ವಾಚಿಸಿದರು. ಬೆಳಂದೂರು ಕ್ಷೇತ್ರದ ಜಿ.ಪಂ. ಸದಸ್ಯೆ ಪ್ರಮೀಳಾ ಜನಾರ್ದನ, ಬೆಳಂದೂರು ಗ್ರಾ.ಪಂ.ಅಧ್ಯಕ್ಷೆ ಉಮೇಶ್ವರಿ ಅಗಳಿ, ಕಾಣಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸೀತಮ್ಮ ಖಂಡಿಗ, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಧರ್ಮೇಂದ್ರ ಕಟ್ಟತ್ತಾರು ಸೇರಿದಂತೆ ಮಹಿಳೆಯರು, ಅಯ್ಯಪ್ಪ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರು.