Advertisement
ಮಂಗಳೂರು – ಹಾಸನ ರೈಲು ಮಾರ್ಗವು ಮೀಟರ್ ಗೇಜ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭ ಫರಂಗಿಪೇಟೆ, ಕಲ್ಲಡ್ಕ, ನೇರಳಕಟ್ಟೆಗಳಲ್ಲಿ ಟಿಕೆಟ್ ಏಜೆಂಟ್ ರೈಲು ನಿಲ್ದಾಣಗಳಿದ್ದವು. ಬ್ರಾಡ್‌ಗೇಜ್ ಗೆ ಪರಿವರ್ತನೆಯಾದ ಬಳಿಕ ಕಲ್ಲಡ್ಕ ಮತ್ತು ಫರಂಗಿಪೇಟೆ ರೈಲು ನಿಲ್ದಾಣಗಳು ರದ್ದುಗೊಂಡವು. ನೇರಳ ಕಟ್ಟೆ ರೈಲು ನಿಲ್ದಾಣವನ್ನು ಸ್ಟೇಷನ್ ಮಾಸ್ಟರ್ ಮತ್ತು ಸಿಗ್ನಲ್ ವ್ಯವಸ್ಥೆ ಇರುವ ಪರಿಪೂರ್ಣ ರೈಲ್ವೇ ನಿಲ್ದಾಣವನ್ನಾಗಿ ಮೇಲ್ದರ್ಜೆಗೇರಿಸಲಾಯಿತು. ಇಲ್ಲಿ ಬೆಂಗಳೂರು ಮತ್ತು ಲೋಕಲ್ ರೈಲುಗಳಿಗೆ ನಿಲುಗಡೆ ನೀಡುವಂತೆ ಪ್ರಯಾಣಿಕರಿಂದ ಬೇಡಿಕೆ ವ್ಯಕ್ತವಾಯಿತು. ಅದರಂತೆ ಲೋಕಲ್ ರೈಲು ಬಂಡಿಗೆ ನಿಲುಗಡೆ ನೀಡಲಾಯಿತು. ಆದರೆ ಪ್ರಯಾಣಿಕರ ಸ್ಪಂದನ ಇಲ್ಲದ ಹಿನ್ನೆಲೆಯಲ್ಲಿ ಇಲ್ಲಿ ಎಲ್ಲ ರೈಲುಗಳ ನಿಲುಗಡೆ ರದ್ದಾಯಿತು. ಈಗ ನೇರಳಕಟ್ಟೆ ರೈಲು ನಿಲ್ದಾಣ ಕ್ರಾಸಿಂಗ್ ನಿಲ್ದಾಣವಾಗಿ ಬಳಕೆಯಾಗುತ್ತಿದೆ.
ಕಬಕ – ಪುತ್ತೂರು ರೈಲ್ವೇ ನಿಲ್ದಾಣವನ್ನು ಬಿಟ್ಟರೆ ತಾಲೂಕಿನ ಪ್ರಮುಖ ಸ್ಥಳ ಕಾಣಿಯೂರು. ಕಾಣಿಯೂರಿನಲ್ಲಿ ಪೂರ್ಣ ಪ್ರಮಾಣದ ರೈಲು ನಿಲ್ದಾಣವು ನಿರ್ಮಾಣಗೊಂಡರೆ ಈ ಪರಿಸರದ 12 ಗ್ರಾಮಗಳ ಜನರಿಗೆ ಅನುಕೂಲವಾಗುತ್ತದೆ. ಏಕೆಂದರೆ ಕಾಣಿಯೂರು ರೈಲ್ವೇ ನಿಲ್ದಾಣವು ಪಟ್ಟಣದ ಹೃದಯಭಾಗದಲ್ಲಿದೆ. ಪೇಟೆಗೆ ಹೊಂದಿಕೊಂಡಂತೆ ಕೇಂದ್ರಸ್ಥಳದಲ್ಲಿ ಈ ರೈಲು ನಿಲ್ದಾಣ ಇದೆ. ಆದಕಾರಣ ಈ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸಿದರೆ ಪ್ರಯಾಣಿಕರಿಗೂ ಅನುಕೂಲ ರೈಲ್ವೇಗೂ ಆದಾಯ ಬರುತ್ತದೆ. ಕೇರಳದವರು ಮಾದರಿ
ರೈಲ್ವೇ ಪ್ರಯಾಣಿಕ ಸೇವೆಯನ್ನು ಬಳಸಿಕೊಳ್ಳುವುದರಲ್ಲಿ ಕೇರಳದವರು ಮಾದರಿಯಾಗಿದ್ದಾರೆ. ಕೇರಳದ ಯಾವುದೇ ರೈಲ್ವೇ ನಿಲ್ದಾಣದಲ್ಲೂ ರೈಲು ನಿಲುಗಡೆಯಾದರೆ ಸಾಕಷ್ಟು ಸಂಖ್ಯೆಯ ಪ್ರಯಾಣಿಕರು ಲಭ್ಯರಾಗುತ್ತಾರೆ. ರೈಲ್ವೇ ಸೌಲಭ್ಯವಿರುವ ಕೇರಳದ ಊರಿನ ಜನರು ರಸ್ತೆ ಸಾರಿಗೆಗಿಂತ ರೈಲ್ವೇಯನ್ನೇ ಆಯ್ಕೆ ಮಾಡುತ್ತಾರೆ. ಈ ಕಾರಣದಿಂದಲೇ ಮಂಗಳೂರಿನಿಂದ ಕೇರಳ ಕಡೆಗೆ ತೆರಳುವ ಎಲ್ಲ ರೈಲುಗಳಲ್ಲೂ ಪ್ರಯಾಣಿಕರ ದಟ್ಟಣೆ ಇರುತ್ತದೆ. ಆದರೆ ದ.ಕ. ಜಿಲ್ಲೆಯ ಜನರು ರೈಲ್ವೇ ಪ್ರಯಾಣದ ಅಭ್ಯಾಸವನ್ನು ಹೆಚ್ಚಾಗಿ ರೂಢಿಸಿಕೊಂಡಿಲ್ಲ.
Related Articles
ಕಾಣಿಯೂರು ರೈಲು ನಿಲ್ದಾಣವನ್ನು ಮತ್ತು ಕಾಣಿಯೂರಿನಲ್ಲಿ ಬೆಂಗಳೂರು ರೈಲಿಗೆ ನಿಲುಗಡೆ ನೀಡುವ ವಿಚಾರದ ಕುರಿತಂತೆ ದ.ಕ. ಸಂಸದ ನಳಿನ್ ಕುಮಾರ್ ಕಟೀಲು ಆಸಕ್ತಿ ಹೊಂದಿದ್ದಾರೆ. ಕಾಣಿಯೂರಿನ ಸಾರ್ವಜನಿಕರು ಸುಳ್ಯ ಶಾಸಕ ಎಸ್. ಅಂಗಾರ ಮೂಲಕ ಸಂಸದರಿಗೆ ಮನವಿ ನೀಡಿದ್ದರು. ಕಳೆದ ವಾರ ಕಾಣಿಯೂರಿಗೆ ಭೇಟಿ ನೀಡಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ಕಾಣಿಯೂರು ರೈಲ್ವೇ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಕುರಿತಂತೆ ಸರಕಾರದ ಮೇಲೆ ಒತ್ತಡ ತರುವುದಾಗಿ ತಿಳಿಸಿದ್ದರು. ಅಲ್ಲದೆ ತಾನು ವೈಯಕ್ತಿಕ ಆಸಕ್ತಿ ವಹಿಸಿ ಜನರ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದರು.
Advertisement
ಸೇವೆಯ ಬಳಕೆ ಅಗತ್ಯಕೇವಲ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸಿದರೆ ಅಥವಾ ರೈಲುಗಳಿಗೆ ನಿಲುಗಡೆಯನ್ನು ಮಾಡಿಸಿದರಷ್ಟೇ ಸಾಲದು, ರೈಲ್ವೇ ಸೇವೆಯನ್ನು ಬಳಸಿಕೊಳ್ಳಲು ಜನರು ಆರಂಭಿಸಬೇಕು. ಪ್ರಯಾಣಿಕರ ಸ್ಪಂದನವಿಲ್ಲದಿದ್ದರೆ ರೈಲ್ವೇ ಇಲಾಖೆ ರೈಲುಗಳಿಗೆ ನಿಲುಗಡೆ ನೀಡುವುದಿಲ್ಲ. ಒಂದು ರೈಲ್ವೇ ನಿಲ್ದಾಣದಲ್ಲಿ ರೈಲು ನಿಲುಗಡೆಗೊಂಡು ಮತ್ತೆ ಯಾನ ಆರಂಭಿಸುವ ಸಂದರ್ಭ ರೈಲ್ವೇ ಎಂಜಿನ್ ಗೆ 150 ಲೀ.ಗೂ ಮಿಕ್ಕಿ ಡೀಸೆಲ್ ಬೇಕಾಗುತ್ತದೆ. ಇಷ್ಟು ವೆಚ್ಚವನ್ನು ಮಾಡಿ ಪ್ರಯಾಣಿಕರು ರೈಲು ಹತ್ತದಿದ್ದರೆ ಇಲಾಖೆಗೆ ನಷ್ಟವೇ ಹೊರತು ಯಾವ ಲಾಭವೂ ಇಲ್ಲ. ಪ್ರಯಾಣಿಕರಿಗೆ ಅನುಕೂಲ
ಕಾಣಿಯೂರು ರೈಲ್ವೇ ನಿಲ್ದಾಣವನ್ನು ಮೇಲ್ದರ್ಜೆಗೇರಿಸಿದರೆ ಪ್ರಯಾಣಿಕರಿಗೆ ಅನುಕೂಲ. ಮುಂದಿನ ದಿನಗಳಲ್ಲಿ ಎಲ್ಲ ಪ್ರಯಾಣಿಕ ರೈಲುಗಳಿಗೂ ಇಲ್ಲಿ ನಿಲುಗಡೆ ನೀಡುವ ಮೂಲಕ ಗ್ರಾಮಾಂತರ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಆದರೆ ಪ್ರಯಾಣಿಕರು ಕೂಡ ರೈಲ್ವೇ ಸೇವೆಯನ್ನು ಗರಿಷ್ಠವಾಗಿ ಬಳಸಿಕೊಳ್ಳಬೇಕು.
– ಡಿ.ಕೆ. ಭಟ್, ಸಂಚಾಲಕರು, ರೈಲ್ವೇ ಯಾತ್ರಿಕರ ಸಂಘ, ಪುತ್ತೂರು ಪ್ರಾಮಾಣಿಕ ಪ್ರಯತ್ನ
ಕಾಣಿಯೂರು ರೈಲ್ವೇ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲು ಕೇಂದ್ರ ರೈಲ್ವೇ ಸಚಿವರ ಬಳಿ ಮಾತುಕತೆ ನಡೆಸಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಕಾಣಿಯೂರು ಮತ್ತು ಪರಿಸರದ ಗ್ರಾಮಸ್ಥರು ರೈಲ್ವೇ ಸೌಲಭ್ಯದ ಕುರಿತು ಸಲ್ಲಿಸಿದ ಬೇಡಿಕೆ ನ್ಯಾಯಯುತವಾಗಿದೆ.
– ನಳಿನ್ ಕುಮಾರ್ ಕಟೀಲು, ಸಂಸದರು, ದ.ಕ. ಜಿಲ್ಲೆ — ಪ್ರವೀಣ್ ಚೆನ್ನಾವರ