ನಾಗ್ಪುರ: ‘ದೇವೇಂದ್ರ ಫಡ್ನವಿಸ್ ಅವರು ಧರ್ಮ ವಿಭಜನೆಯ ಕುರಿತು ಪ್ರಚಾರ ಮಾಡುತ್ತಿದ್ದಾರೆ, ಉಪಮುಖ್ಯಮಂತ್ರಿ ಪತ್ನಿ ಇನ್‌ಸ್ಟಾಗ್ರಾಮ್ ರೀಲ್‌ಗಳನ್ನು ಮಾಡುತ್ತಿರುವಾಗ ಸಾರ್ವಜನಿಕರು ಧರ್ಮವನ್ನು ಉಳಿಸುವ ಜವಾಬ್ದಾರಿಯನ್ನು ಏಕೆ ತೆಗೆದುಕೊಳ್ಳಬೇಕು’ ಎಂದು ಕಾಂಗ್ರೆಸ್ ನಾಯಕ ಕನ್ಹಯ್ಯಾ ಕುಮಾರ್ ಪ್ರಶ್ನಿಸಿದ್ದಾರೆ.
ನಾಗ್ಪುರದಲ್ಲಿ ಗುರುವಾರ(ನ14) ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಕನ್ಹಯ್ಯಾ, ರಾಜಕಾರಣಿಗಳು ಅಹಂಕಾರಿಗಳಾದಾಗ ಅವರ ಸ್ಥಾನಕ್ಕೆ ಜನರು ಕಳುಹಿಸಬೇಕು ಎಂದರು. ನಾಗ್ಪುರ ನೈಋತ್ಯ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಉಪಮುಖ್ಯಮಂತ್ರಿ ಫಡ್ನವಿಸ್ ಅವರನ್ನು ಗುರಿಯಾಗಿಸಿಕೊಂಡು ಕನ್ಹಯ್ಯಾ ಹೇಳಿಕೆ ನೀಡಿದ್ದು ಪ್ರಫುಲ್ಲ ಗುಡಾಡೆ ಅವರು ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದಾರೆ.
ತರಬೇತಿ ಪಡೆದ ಶಾಸ್ತ್ರೀಯ ಸಂಗೀತ ಗಾಯಕಿ, ಬ್ಯಾಂಕರ್ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿರುವ ಅಮೃತಾ ಫಡ್ನವಿಸ್ ಅವರನ್ನು ಕನ್ಹಯ್ಯಾ ಕುಮಾರ್ ನೇರವಾಗಿ ಹೆಸರಿಸದೆ ಟೀಕಾ ಪ್ರಹಾರ ನಡೆಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ, ಫಡ್ನವೀಸ್ ಅವರ ಪತ್ನಿ ವಿರುದ್ಧದ ಟೀಕೆಗಳು ಪ್ರತಿಯೊಬ್ಬ ಮರಾಠಿ ಮಹಿಳೆಗೆ ಮಾಡಿದ ಅವಮಾನ ಎಂದು ಕಿಡಿ ಕಾರಿದ್ದಾರೆ. ಕನ್ಹಯ್ಯಾ ಅವರನ್ನು ಉಗ್ರ ಮತ್ತು ಸಂಸತ್ ದಾಳಿಯ ಅಪರಾಧಿ ಅಫ್ಜಲ್ ಗುರುವಿನ ಬೆಂಬಲಿಗ ಎಂದು ಪೂನಾವಾಲಾ ಉಲ್ಲೇಖಿಸಿದ್ದಾರೆ.
ಅಫ್ಜಲ್ ಗುರು ನಿಧನ ದಿನದಂದು ಜೆಎನ್‌ಯುನಲ್ಲಿ ನಡೆದ ವಿವಾದಾತ್ಮಕ ಕಾರ್ಯಕ್ರಮದ ಮೇಲೆ ದೇಶದ್ರೋಹದ ಆರೋಪದ ಮೇಲೆ 2016 ರಲ್ಲಿ ಕನ್ಹಯ್ಯಾ ಅವರನ್ನು ಬಂಧಿಸಲಾಗಿತ್ತು.