Advertisement

ಊರಿನ ಮಾರಿ ಓಡಿಸುವ ದ್ವೈ ವಾರ್ಷಿಕ ಆಚರಣೆ ಕಂಗೀಲು ಸೇವೆ

02:19 PM Feb 14, 2022 | Team Udayavani |

ಕಟಪಾಡಿ: ಊರಿನ ಮಾರಿಯನ್ನು ಓಡಿಸುವ ಸದಾಶಯದೊಂದಿಗೆ ತುಳುನಾಡಿನ ಜನಪದೀಯ ಸೊಗಡಿನೊಂದಿಗೆ ಸಾಂಪ್ರದಾಯಿಕ ಕಂಗೀಲು ಸೇವೆಯು 5 ದಿನ ಕಟಪಾಡಿಯ ಮಟ್ಟು ಗ್ರಾಮದಲ್ಲಿ ನಡೆಯುತ್ತಿದೆ. ತುಳುನಾಡಿನ ಮಾಯಿ ತಿಂಗಳ ಹುಣ್ಣಿಮೆಯ ಹಿಂದಿನ ಐದನೇ ದಿನದಂದು ರಾತ್ರಿಯಲ್ಲಿ ಕೊರಗಜ್ಜ ಹಾಗೂ ಸಿರಿಯಿಂದ ಅಲಂಕರಿಸಿಕೊಳ್ಳುವ (ಹೊದ್ದುಕೊಳ್ಳುವ) ಕಂಗುಲು (ಕಂಗೀಲು) ವೇಷಧಾರಿಗಳು ನಿಗದಿತ ಪ್ರದೇಶದ ಮನೆಗಳಿಗೆ ತೆರಳಿ ಕುಣಿಯುತ್ತಾರೆ.

Advertisement

ಉಂದೊಂಜಿ ಕಂಗೊಲಾವು ಮಾಯಿದ ಕಂಗೊಲಾವು, ಮಾಯಿಡ್‌ ಬತ್ತಿನವು ಮಾಯಿಡೇ ಪೋವಡ್‌… ಎಂಬ ಪಾಡ್ದನದೊಂದಿಗೆ ಕಂಗೀಲು ಕುಣಿತ ಸೇವೆ ನೀಡುತ್ತಾ ಹರಕೆ ಸ್ವೀಕರಿಸಿ ಸಾಗುವುದು ಊರಿನ ಮಾರಿ ಓಡಿಸುವ ಈ ದ್ವೈ ವಾರ್ಷಿಕ ಆಚರಣೆಯು ಮಟ್ಟು ಶ್ರೀ ಬ್ರಹ್ಮ ಮುಗ್ಗೇರ್ಕಳ ದೈವಸ್ಥಾನದ ದ್ವಿ ವಾರ್ಷಿಕ ಕಂಗೀಲು ಸೇವೆಯಾಗಿದ್ದು, ಫೆ.12ರಿಂದ ಫೆ. 16ರ ಪರ್ಯಂತ ಜರಗಲಿದೆ.

ಇಲ್ಲಿ ಕಟ್ಟಳೆಯಂತೆ ಕಟಪಾಡಿ ಬೀಡಿನಿಂದ ಡೋಲನ್ನು ತಂದು, ಸಿರಿ ಮಡಲನ್ನು ಸಿದ್ಧಪಡಿಸಿ, ಬಣ್ಣಗಾರಿಕೆ -ಸಿರಿ ಸಿಂಗಾರಗಳು ನಡೆಯುತ್ತವೆ.

ಈ ಕಂಗುಲು (ಕಂಗೀಲು) ಆಚರಣೆಯು ಆದಿಸ್ಥಳ ಮಟ್ಟು ಶ್ರೀ ಬ್ರಹ್ಮಸ್ಥಾನದ ಆರಾಧನಾ ಸಮುದಾಯದ ಮಂದಿ ನಡೆಸುವ ಸೇವೆಯಾಗಿದೆ. ಈ ದೆ„ವಸ್ಥಾನದಲ್ಲಿ ಗುರಿಕಾರರ ಸಹಿತ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಈ ಸೇವೆಯ ಆರಂಭದಲ್ಲಿ ಕಟಪಾಡಿ ಬೀಡು, ಗ್ರಾಮ ದೇಗುಲ ಮಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಕಂಗುಲು ತಂಡ ತೆರಳಿ ತನ್ನ ಕಂಗೀಲು ಕುಣಿತದ ಸೇವೆ ಪ್ರಾರಂಭಿಸುತ್ತದೆ. ಪೂರ್ವಜರ ನಂಬಿಕೆಯಂತೆ, ಒಂದೊಮ್ಮೆ ಊರಿಗೆ ಮಾರಿಮೈಲಿಗೆ, ಕೋರಕೋಟ್ಲೆ, ಮಬ್ಬು ಬಲಂಗಾರು ಇತ್ಯಾದಿ ರೋಗ ರುಜಿನಗಳನ್ನು ಹೋಗಲಾಡಿಸುವಲ್ಲಿ ಪೂರ್ವ ನಿಗದಿತ ಮನೆಮನೆಗೆ ತೆರಳಿ ಈ ಕಂಗುಲು (ಕಂಗೀಲು) ಸೇವೆ ನೀಡಲಾಗುತ್ತದೆ.

ಇದನ್ನೂ ಓದಿ : ಪರೀಕ್ಷೆ ನಿರಾಕರಿಸಿದವರು ಹಿಂದೆ ಹಿಜಾಬ್ ಧರಿಸುತ್ತಿರಲಿಲ್ಲ : ಸಚಿವ ನಾರಾಯಣ ಗೌಡ

Advertisement

ಗ್ರಾಮಸ್ಥರು, ಭಕ್ತರು ಹರಕೆಯನ್ನು ಕಾಣಿಕೆಯ ರೂಪದಲ್ಲಿ, ಧವಸ ಧಾನ್ಯ ಸಲ್ಲಿಸುತ್ತಾ ಆಚರಣೆಯನ್ನು ಪ್ರೋತ್ಸಾಹಿಸುತ್ತಾರೆ. ಐದು ದಿನಗಳ ಕಾಲ ನಿಗದಿತ ಪ್ರದೇಶಗಳಲ್ಲಿ ಕುಣಿತದ ಸೇವೆ ನೀಡಿ ಹರಕೆ ಸ್ವೀಕರಿಸಿ ನಿಗದಿತ ಗಡುವಿನಲ್ಲಿ ಸಿರಿ ಬಿಡುವುದು ನಡೆಯುತ್ತದೆ. ಹುಣ್ಣಿಮೆಯಂದು ದೇವ ಪೂಜೆ ನಡೆಸಿ ಬಳಿಕ ಸಿದ್ಧಪಡಿಸಿದ ನೈವೇದ್ಯ ಅರ್ಪಿಸಿ ಪ್ರಸಾದ ಹಂಚಿಕೊಂಡು ಊರಿನ ಸಕಲ ಕಷ್ಟ ನಿವಾರಣೆಗಾಗಿ ಭಕ್ತಿಪೂರ್ವಕ ನಾಂದಿ ಹಾಡಲಾಗುತ್ತದೆ ಗೋಪಾಲಕ ವೇಷಧಾರಿಗಳ ನಡುವೆ ಕುಣಿಯುವ ಸಕಲ ಕಷ್ಟ ನಿವಾರಕ ಶ್ರೀ ಕೃಷ್ಣನ ಅವತಾರವೆಂಬ ನಂಬುಗೆಯು ಈ ಪ್ರಾಚೀನ ಸಂಸ್ಕೃತಿ, ಜನಪದ ಆಚರಣೆ, ಪ್ರಾಚೀನ ಸಂಪ್ರದಾಯದ ಹಿಂದಿದೆ.

ಜನಪದ ವೈಶಿಷ್ಟಪೂರ್ಣ ಕಲೆ
ಪೂರ್ವಜರ ನಂಬಿಕೆಯ ಊರಿನ ಅನಿಷ್ಟ ನಿವಾರಣೆಗೆ ಬಳಕೆಯಲ್ಲಿರುವ ಜಗತ್ತಿಗೆ ಜನಪದ ವೈಶಿಷ್ಟ್ಯಪೂರ್ಣ ಕಲೆ. ಧಾರ್ಮಿಕತೆ , ಕಲೆಯ ದೃಷ್ಟಿಯಲ್ಲಿ ಸಂಪ್ರದಾಯ ಶಾಶ್ವತವಾಗಿ ಉಳಿಯ
ಬೇಕಿದೆ. ಅಕ್ಕಿ, ಭತ್ತ, ತೆಂಗಿನಕಾಯಿ ಸಹಿತ ವಸ್ತು, ಹಣವನ್ನು ಕಾಣಿಕೆ ರೂಪದಲ್ಲಿ ಕೊಡಲಾಗುತ್ತಿದೆ.
-ಗೋಪಾಲಕೃಷ್ಣ ರಾವ್‌, ನಿವೃತ್ತ ಪ್ರಾಂಶುಪಾಲ, ಅಡ್ಕ ಮಟ್ಟು, ಕಟಪಾಡಿ

ಕಲೆ ಕಾರಣಿಕದ ಸೇವೆ
ಮಟ್ಟು ಶ್ರೀ ಬ್ರಹ್ಮ ಮುಗ್ಗೇರ್ಕಳ ದೈವಸ್ಥಾನದ ದ್ವಿ ವಾರ್ಷಿಕ ಕಂಗೀಲು ಸೇವೆಯಾಗಿದೆ. ದೈವರಾಜನ ನುಡಿಯಂತೆ ಮಾರಿ ಓಡಿಸುವ ಕಂಗುಲು ಸೇವೆಯು ಇಡೀ ಗ್ರಾಮದ ದೋಷಗಳನ್ನು ಸ್ವೀಕರಿಸಿ ಗಡುವಿನಲ್ಲಿ ಕವಚಿ ಹಾಕಲಾಗುತ್ತದೆ. ಕಲೆ ಕಾರಣಿಕದ ಸೇವೆಯ ಮೂಲಕ ತಮ್ಮ ಅಭೀಷ್ಟಗಳನ್ನು ಈಡೇರಿಸುವ ಭರವಸೆಯೊಂದಿಗೆ ಗ್ರಾಮಸ್ಥರು ಇಚ್ಛಿತ ಹರಕೆಯನ್ನು ಸಲ್ಲಿಸುತ್ತಾರೆ.
-ಶಶಿಕುಮಾರ್‌ ಬಂಗೇರ, ಶ್ರೀನಿವಾಸ್‌ ಬಂಗೇರ, ಮಟ್ಟು,

Advertisement

Udayavani is now on Telegram. Click here to join our channel and stay updated with the latest news.

Next