ಕನ್ನಡ ಚಿತ್ರರಂಗದಲ್ಲಿ ಅಳೆದು, ತೂಗಿ ಸಿನಿಮಾಗಳನ್ನು ಒಪ್ಪಿಕೊಳ್ಳುವ ಒಂದಷ್ಟು ನಾಯಕಿ ನಟಿಯರಿದ್ದಾರೆ. ಆ ಸಾಲಿನಲ್ಲಿ ರಂಜಿನಿ ರಾಘವನ್ ಕೂಡಾ ಒಬ್ಬರು. ಯಾವುದೇ ಸಿನಿಮಾ ಆಫರ್ ಬಂದ ಕೂಡಲೇ ಓಕೆ ಅನ್ನದೇ, ಒಂದಷ್ಟು ವಿಚಾರಗಳ ಬಗ್ಗೆ ಗಮನಹರಿಸಿ ಸಿನಿಮಾ ಒಪ್ಪಿಕೊಳ್ಳುತ್ತಾರೆ.
“ಪುಟ್ಟಗೌರಿ ಮದುವೆ’ ಧಾರಾವಾಹಿ ಮೂಲಕ ಬಣ್ಣದ ಲೋಕ ಪ್ರವೇಶಿಸಿದ ರಂಜನಿ ರಾಘವನ್ ನಂತರ “ರಾಜಹಂಸ’ ಚಿತ್ರದ ಮೂಲಕ ಬೆಳ್ಳಿತೆರೆಯತ್ತ ಮುಖ ಮಾಡಿದ ನಟಿ.
ರಂಜನಿ ಹೊಸ ಥರದ ಪಾತ್ರಗಳು, ಹೊಸ ಶೈಲಿಯ ಚಿತ್ರಗಳತ್ತ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಸದ್ಯ ರಂಜನಿ ನಾಯಕಿಯಾಗಿ ನಟಿಸಿರುವ ಸಿನಿಮಾವೊಂದು ಈ ವಾರ ತೆರೆಕಾಣುತ್ತಿದೆ. ಅದು “ಕಾಂಗರೂ’.
ಆದಿತ್ಯ ನಾಯಕರಾಗಿರುವ “ಕಾಂಗರೂ’ ಚಿತ್ರ ಮೇ 3ರಂದು ತೆರೆಕಾಣುತ್ತಿದೆ. ಈ ಚಿತ್ರದ ಮೇಲೆ ರಂಜನಿ ಭರ್ಜರಿ ನಿರೀಕ್ಷೆ ಇಟ್ಟಿದ್ದಾರೆ. ಈ ಚಿತ್ರದಲ್ಲಿ ಮನೋವೈದ್ಯೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ರಂಜನಿ. ಇದು ಅವರು ನಾಯಕಿಯಾಗಿ ನಟಿಸಿರುವ ಐದನೇ ಚಿತ್ರ.
ಚಿತ್ರ ಹಾಗೂ ಚಿತ್ರತಂಡದ ಬಗ್ಗೆ ಮಾತನಾಡುವ ರಂಜನಿ, “ನಾನು ಆದಿತ್ಯ ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದವಳು, ಈ ಚಿತ್ರದಲ್ಲಿ ಅವರ ಜೊತೆಗೆ ಅಭಿನಯಿಸುವ ಅವಕಾಶ ಸಿಕ್ಕಿತ್ತು. ಒಬ್ಬ ಪ್ರೇಕ್ಷಕಳಾಗಿ ನಾನು ಸಿನಿಮಾನ ನೋಡಿದ್ದೇನೆ. ನಿರ್ದೇಶಕರು ಪ್ರತಿ ಪಾತ್ರವನ್ನು ಅಚ್ಚುಕಟ್ಟಾಗಿ ತಂದಿದ್ದಾರೆ’ ಎನ್ನುವುದು ರಂಜನಿ ಮಾತು.