ಕೆಲವು ಸಸ್ಪೆನ್ಸ್ ಸಿನಿಮಾಗಳು ಸಣ್ಣ ಕುತೂಹಲ ಉಳಿಸಿಕೊಂಡೇ ಮುಂದೆ ಸಾಗುವ ಮೂಲಕ ಪ್ರೇಕ್ಷಕರನ್ನು ಹಿಡಿದಿಡುವ ಪ್ರಯತ್ನ ಮಾಡುತ್ತವೆ. ಇಂತಹ ಸಿನಿಮಾಗಳಲ್ಲಿ ಅಲ್ಲಲ್ಲಿ ಬರುವ ಟ್ವಿಸ್ಟ್ ಟರ್ನ್ಗಳು ಕಥೆಯ ಜೀವಾಳ ಕೂಡಾ. ಈ ವಾರ ತೆರೆಕಂಡಿರುವ “ಕಾಂಗರೂ’ ಚಿತ್ರ ಒಂದು ಸಸ್ಪೆನ್ಸ್-ಥ್ರಿಲ್ಲರ್ ಚಿತ್ರವಾಗಿ ಒಂದೊಳ್ಳೆಯ ಪ್ರಯತ್ನ.
ನಿರ್ದೇಶಕ ಕಿಶೋರ್‌ಗೆ ತಾನು ಏನು ಹೇಳಬೇಕು ಮತ್ತು ಅದನ್ನು ಹೇಗೆ ಹೇಳಬೇಕು ಎಂಬ ಸ್ಪಷ್ಟತೆ ಇದ್ದ ಕಾರಣದಿಂದ ಸಿನಿಮಾ ಆರಂಭದಿಂದಲೇ ಒಂದು ಸರಿಯಾದ ಟ್ರ್ಯಾಕ್‌ನಲ್ಲಿ ಸಾಗುತ್ತದೆ. ಸಾಮಾನ್ಯವಾಗಿ ಸಿನಿಮಾದ ಮೂಲ ಆಶಯ ತೆರೆದು ಕೊಳ್ಳುವಷ್ಟರಲ್ಲಿ ಇಂಟರ್‌ವಲ್ ಬಂದಿರುತ್ತದೆ. ಆದರೆ, “ಕಾಂಗರೂ’ ಚಿತ್ರ ಮಾತ್ರ ಒಂದಷ್ಟು ಕುತೂಹಲಕಾರಿ ಅಂಶಗಳನ್ನು ಪ್ರೇಕ್ಷಕರ ಮುಂದೆ ತೆರೆದಿಡುತ್ತಲೇ ಸಿನಿಮಾ ಸಾಗುತ್ತದೆ. ಯಾವುದೇ ಗೊಂದಲವಿಲ್ಲದೇ ನಿರ್ದೇಶಕರು ಕಥೆ ಹೇಳಲು ಪ್ರಯತ್ನಿಸಿದ್ದಾರೆ.
ಸಿನಿಮಾದ ಕಥೆ ಬಗ್ಗೆ ಹೇಳುವುದಾ ದರೆ ಚಿತ್ರ ಚಿಕ್ಕಮಗಳೂರು ಹಿನ್ನೆಲೆಯಲ್ಲಿ ಸಾಗುತ್ತದೆ. ಅಲ್ಲಿನ ಗೆಸ್ಟ್‌ವೊಂದರಲ್ಲಿ ನಡೆಯುವ ನಿಗೂಢ ಘಟನೆಗಳಿಂದ ಸಿನಿಮಾ ತೆರೆದುಕೊಳ್ಳುತ್ತದೆ. ಒಂದರ ಹಿಂದೆ ಒಂದರಂತೆ ಆಗುವ ಕೊಲೆಗಳು, ಅದರ ಬೆನ್ನತ್ತಿ ಹೋಗುವ ಪೊಲೀಸ್ ಆಫೀಸರ್, ತನಿಖೆಯ ಹಾದಿಯಲ್ಲಿ ಎದುರಾಗುವ ಅನುಮಾನಗಳು… ಇಂತಹ ಅಂಶಗಳ ಮೂಲಕ ಸಿನಿಮಾ ಸಾಗುತ್ತದೆ. ಕಥೆಗೆ ಪೂರಕವಾದ ವಾತಾವರಣ, ಹಿನ್ನೆಲೆ ಸಂಗೀತ ಚಿತ್ರದ ವೇಗ ಹೆಚ್ಚಿಸಿದೆ. ಮೊದಲೇ ಹೇಳಿದಂತೆ ನಿರ್ದೇಶಕರು ಇಲ್ಲಿ ಕಥೆಯ ಮೇಲಷ್ಟೇ ಹೆಚ್ಚು ಗಮನಹರಿಸಿರುವುದರಿಂದ ಚಿತ್ರ ಅನಾವಶ್ಯಕ ದೃಶ್ಯಗಳಿಂದ ಮುಕ್ತ.
ಕ್ಲೈಮ್ಯಾಕ್ಸ್ ಚಿತ್ರದ ಜೀವಾಳ. ಅದನ್ನು ತೆರೆಮೇಲೆಯೇ ನೋಡಿ. ನಾಯಕ ಆದಿತ್ಯ ಚಿತ್ರದಲ್ಲಿ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದು, ಸಿನಿಮಾದುದ್ದಕ್ಕೂ ಗಂಭೀರವಾಗಿ ಕಾಣಿಸಿಕೊಂಡಿದ್ದಾರೆ.
ನಾಯಕಿ ರಂಜನಿ ರಾಘವನ್‌ಗೆ ಚಿತ್ರದಲ್ಲಿ ಒಳ್ಳೆಯ ಪಾತ್ರ ಸಿಕ್ಕಿದ್ದು, ಹಲವು ಟ್ವಿಸ್ಟ್‌ನೊಂದಿಗೆ ಅವರ ಪಾತ್ರ ಸಾಗಿಬಂದಿದೆ. ಉಳಿದಂತೆ ಕರಿಸುಬ್ಬು, ಅಶ್ವಿನಿ ಹಾಸನ್ ಸೇರಿದಂತೆ ಅನೇಕರು ನಟಿಸಿದ್ದಾರೆ.
ರವಿಪ್ರಕಾಶ್ ರೈ