ಮುಂಬೈ: ಬಾಲಿವುಡ್ ನಟಿ ಕಂಗನಾ ಮತ್ತು ಮಹಾರಾಷ್ಟ್ರ ಸರ್ಕಾರದ ನಡುವಿನ ಜಟಾಪಟಿ ಗುರುವಾರವೂ ಮುಂದುವರಿದಿದೆ. ಬಿಎಂಸಿ ಬುಧವಾರ ತೆರವುಗೊಳಿಸಲು ಯತ್ನಿಸಿದ ತಮ್ಮ ಬಂಗಲೆಗೆ ಕಂಗನಾ ಗುರುವಾರ ಭೇಟಿ ನೀಡಿ, ಹಾನಿ ಕುರಿತು ಪರಿಶೀಲಿಸಿದ್ದಾರೆ.
ಜತೆಗೆ, ರಾಜ್ಯ ಸರ್ಕಾರದ ವಿರುದ್ಧ ವಾಗ್ಧಾಳಿ ಮುಂದುವರಿಸಿದ್ದು, “ನೀವು ನನ್ನ ಬಾಯಿ ಮುಚ್ಚಿಸಬಹುದು. ಆದರೆ ನನ್ನ ಧ್ವನಿಯು ಕೋಟ್ಯಂತರ ಮಂದಿಯಲ್ಲಿ ಅನುರಣಿಸುತ್ತಿದೆ. ನೀವೆಷ್ಟು ಬಾಯಿಗಳನ್ನು ಮುಚ್ಚಿಸಲು ಸಾಧ್ಯ, ಎಷ್ಟು ಧ್ವನಿಗಳನ್ನು ಹತ್ತಿಕ್ಕಲು ಸಾಧ್ಯ? ನೀವು ಒಬ್ಬ ನಿರಂಕುಶ ಆಡಳಿತಗಾರ’ ಎಂದು ಸಿಎಂ ಉದ್ಧವ್‌ರನ್ನು ಉದ್ದೇಶಿಸಿ ಕಂಗನಾ ಕಿಡಿಕಾರಿದ್ದಾರೆ.
“ಬಾಳಾಸಾಹೇಬ್ ಠಾಕ್ರೆಯವರು ಯಾವ ಸಿದ್ಧಾಂತ ಇಟ್ಟುಕೊಂಡು ಶಿವಸೇನೆಯನ್ನು ಕಟ್ಟಿದರೋ, ಆ ಸಿದ್ಧಾಂತವನ್ನು ಇಂದು ಶಿವಸೇನೆ ನಾಯಕರು ಅಧಿಕಾರಕ್ಕಾಗಿ ಮಾರಾಟ ಮಾಡಿಕೊಂಡಿದ್ದಾರೆ. ಶಿವಸೇನೆಯು ಈಗ ಸೋನಿಯಾ ಸೇನೆ ಆಗಿದೆ. ನನ್ನ ಮನೆ ಕೆಡವಲು ಬಂದ ಗೂಂಡಾಗಳನ್ನು ಪಾಲಿಕೆ ಸಿಬ್ಬಂದಿ ಎನ್ನಬೇಡಿ’ ಎಂದೂ ಹೇಳಿದ್ದಾರೆ.
ಐಎಂಪಿಪಿಎ ಖಂಡನೆ: ಇದೇ ವೇಳೆ, ಕಂಗನಾ ಬಂಗಲೆ ಕೆಡವಲು ಬಿಎಂಸಿ ನಡೆಸಿದ ಯತ್ನವನ್ನು ಇಂಡಿಯನ್ ಮೋಷನ್ ಪಿಕ್ಚರ್ಸ್ ಪ್ರೊಡ್ನೂಸರ್ಸ್ ಅಸೋಸಿಯೇಷನ್(ಐಎಂಪಿಪಿಎ) ಖಂಡಿಸಿದೆ. ರಾಜ್ಯ ಸರ್ಕಾರವು ರಣೌತ್ ಪ್ರಕರಣವನ್ನು ನಿಭಾಯಿಸಿದ ರೀತಿಗೆ ರಾಜ್ಯಪಾಲ ಬಿ.ಎಸ್. ಕೋಶಿಯಾರಿ ಅವರೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ನಡುವೆ, ಸೆ. 22ರವರೆಗೂ ಬಂಗಲೆ ತೆರವು ಕಾರ್ಯ ಕೈಗೊಳ್ಳುವಂತಿಲ್ಲ ಎಂದು ಬಾಂಬೆ ಹೈಕೋರ್ಟ್ ಗುರುವಾರ ಆದೇಶಿಸಿದೆ. ಖಾರ್‌ನ ಕಂಗನಾ ಮನೆಗೆ ಹಾಗೂ ಬಾಂದ್ರಾದ ಬಂಗಲೆಗೆ ಮುಂಬೈ ಪೊಲೀಸ್ ಭದ್ರತೆ ನೀಡಿದೆ.
ಕಂಗನಾ ವಿರುದ್ಧ ದೂರು: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಮಾಡಿದ ಕಂಗನಾ ವಿರುದ್ಧ ವಿಕ್ರೊಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ನಗರದ ವಕೀಲ ನಿತಿನ್ ಮಾನೆ ಎಂಬವರ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದು, ಇನ್ನೂ ಎಫ್ಐರ್ ದಾಖಲಿಸಿಲ್ಲ ಎಂದಿದ್ದಾರೆ.
ಕಂಗನಾ ಅವರೇ, ನಿಮ್ಮ ದಿಟ್ಟತನಕ್ಕೆ ಹ್ಯಾಟ್ಸ್‌ಆಫ್. ನಿಮಗೆ ಸಂಬಂಧವೇ ಇರದ ವಿಷಯವಾಗಿದ್ದರೂ, ಅದರ ಬಗ್ಗೆ ಧ್ವನಿಯೆತ್ತಿ ಸರ್ಕಾರವನ್ನು ಎದುರುಹಾಕಿಕೊಳ್ಳುವುದು ಸವಾಲೇ ಸರಿ. ನಿಮ್ಮ ನಡೆಯು ನನಗೆ ಭಗತ್‌ಸಿಂಗ್‌ರನ್ನು ನೆನಪಿಸಿದೆ.
ವಿಶಾಲ್, ತಮಿಳು ನಟ