ಮುಂಬೈ: ಮುಂಬೈಯನ್ನು ಮಿನಿ ಪಾಕಿಸ್ತಾನ ಎಂದು ಹೇಳಿರುವ ನಟಿ ಕಂಗನಾ ರಣಾವತ್ ಮಹಾರಾಷ್ಟ್ರದ ಜನತೆಯ ಮುಂದೆ ಕ್ಷಮೆಯಾಚಿಸಿದರೆ ನಾನು ಕೂಡ ಆಕೆಯ ಕ್ಷಮೆ ಕೇಳುತ್ತೇನೆ ಎಂದು ಶಿವಸೇನೆ ಪಕ್ಷದ ನಾಯಕ ಸಂಜಯ್ ರಾವತ್ ಹೇಳಿಕೆ ನೀಡಿದ್ದಾರೆ.
ತಾವು ಕಂಗನಾ ಬಳಿ ಕ್ಷಮೆ ಕೇಳುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ರಾವತ್, ಕಂಗನಾ ಮಹಾರಾಷ್ಟ್ರಿಗರ ಮುಂದೆ ಕ್ಷಮೆ ಕೇಳಿದರೆ ನಾನು ಮತ್ತೆ ಕ್ಷಮೆ ಕೇಳುವ ಬಗ್ಗೆ ಯೋಚಿಸುತ್ತೇನೆ. ಆಕೆ ಮುಂಬೈಯನ್ನು ಮಿನಿ ಪಾಕಿಸ್ತಾನ ಎಂದು ಕರೆದಿದ್ದಾರೆ. ಅಹಮದಾಬಾದನ್ನು ಕೂಡ ಹೀಗೆ ಹೇಳಲು ಆಕೆಗೆ ಧೈರ್ಯವಿದೆಯೇ ಎಂದು ಪ್ರಶ್ನಿಸಿದ್ದಾರೆ.
ಕಂಗನಾ ಇತ್ತೀಚೆಗೆ ಟ್ವಿಟ್ಟರ್ ನಲ್ಲಿ, ಸಂಜಯ್ ರಾವತ್ ಅವರು ನನಗೆ ಬಹಿರಂಗವಾಗಿ ಬೆದರಿಕೆ ಹಾಕಿದ್ದು ಮುಂಬೈಗೆ ಬರಬೇಡಿ ಎಂದು ಹೇಳಿದ್ದಾರೆ. ಮುಂಬೈ ನಗರಿಯಲ್ಲಿ ಸ್ವಾತಂತ್ರ್ಯ ಹತ್ತಿಕ್ಕಲು ನೋಡಿದ ನಂತರ ಇದೀಗ ಮುಕ್ತವಾಗಿ ಬೆದರಿಕೆ ಹಾಕುತ್ತಿದ್ದಾರೆ. ಮುಂಬೈ ಪಾಕ್ ಆಕ್ರಮಿತ ಕಾಶ್ಮೀರದಂತೆ ಅನಿಸುತ್ತಿದೆ ಎಂದಿದ್ದರು.
ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ನಾನು ಮುಂಬೈಯ ಡ್ರಗ್ ಮಾಫಿಯಾ, ಚಲನ ಚಿತ್ರ ಮಾಫಿಯಾ ದಂಧೆ ಬಗ್ಗೆ ಮಾತನಾಡಿದ್ದೇನೆ, ನನಗೆ ಮುಂಬೈ ಪೊಲೀಸರ ಬಗ್ಗೆ ನಂಬಿಕೆಯಿಲ್ಲ. ತನ್ನನ್ನು ಸಾಯಿಸಲು ನೋಡುತ್ತಿದ್ದಾರೆ. ಸುಶಾಂತ್ ಸಿಂಗ್ ಹೇಳಿದ್ದರೂ ಪೊಲೀಸರು ಅವರ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ನನಗೆ ಅಸುರಕ್ಷತೆ ಎನಿಸಿದರೆ ಅದರರ್ಥ ಬಾಲಿವುಡ್, ಮುಂಬೈಯನ್ನು ದ್ವೇಷ ಮಾಡುತ್ತೇನೆಂದೇ ಎಂದು ಕಂಗನಾ ಟ್ವೀಟ್ ನಲ್ಲಿ ಕೇಳಿದ್ದರು.
ಇದಕ್ಕೆ ಉತ್ತರಿಸಿರುವ ಸಂಜಯ್ ರಾವತ್, ಮುಂಬೈ ಕಂಗನಾಗೆ ಸಾಕಷ್ಟು ಹೆಸರು, ಹಣ, ಕೀರ್ತಿಯನ್ನು ನೀಡಿದೆ, ಇಂದು ಮುಂಬೈ ಮತ್ತು ಮುಂಬೈ ಪೊಲೀಸರ ಹೆಸರು ಕೆಡಿಸಲು ಅವರು ನೋಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ