ಮುಂಬೈ: ಲಾಕ್ ಡೌನ್ ನಿಂದಾಗಿ ದೇಶದ ಸಾಕಷ್ಟು ಜನರು ತೊಂದರೆಗೆ ಸಿಲುಕಿದರು. ದುಡಿಯಲು ಕೆಲಸ ಇಲ್ಲದೆ ಆರ್ಥಿಕ ಬಿಕ್ಕಟ್ಟು ಎದುರಿಸಿದರು. ಒಂದು ಹೊತ್ತಿನ ಊಟಕ್ಕೂ ಪರಿತಪಿಸುವಂತಹ ದುಸ್ಥಿತಿಗೆ ಬಂದು ತಲುಪಿದರು. ಈ ಲಾಕ್ ಡೌನ್ ಬಿಸಿ ಬಾಲಿವುಡ್ ನಟಿ ಕಂಗನಾ ರಣಾವತ್ ಅವರಿಗೂ ತಟ್ಟಿದೆ.
ಹೌದು, ಕಳೆದ ವರ್ಷದಿಂದ ದುಡಿಮೆ ಇಲ್ಲ, ಹೀಗಾಗಿ ನನಗೆ ತೆರಿಗೆ ಕಟ್ಟಲು ಸಾಧ್ಯವಾಗಿಲ್ಲ ಎಂದು ಬಿಟೌನ್ ಬೋಲ್ಡ್ ಬೆಡಗಿ ಕಂಗನಾ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.
ಬಾಲಿವುಡ್ ನಟಿ ಕಂಗನಾ ರಣಾವತ್ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಒಂದು ಸಿನಿಮಾಗೆ ಏನಿಲ್ಲ ಅಂದರೂ ಕೋಟ್ಯಂತರ ರೂ. ಸಂಭಾವನೆ ಪಡೆಯುತ್ತಾರೆ. ಹೀಗಿದ್ದರೂ ಕಂಗನಾ ಕಳೆದ ವರ್ಷದ ತೆರಿಗೆಯಲ್ಲಿ ಅರ್ಧದಷ್ಟನ್ನು ಮಾತ್ರ ಪಾವತಿ ಮಾಡಿದ್ದು, ಈ ಬಾರಿ ನನಗೆ ತೆರಿಗೆ ಕಟ್ಟಲು ಸಾಧ್ಯವಾಗುತ್ತಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ನಟಿ ಕಂಗನಾ ರಣಾವತ್‍ರವರು ತಮ್ಮ ಇನ್ ಸ್ಟಾಗ್ರಾಮ್ ಖಾತೆಯ ಸ್ಟೋರಿಯಲ್ಲಿ, ನನ್ನ ಒಟ್ಟು ಆದಾಯದಲ್ಲಿ ಶೇ. 45ರಷ್ಟು ತೆರಿಗೆ ಪಾವತಿಸುತ್ತೇನೆ. ನಾನು ಅತೀ ಹೆಚ್ಚು ತೆರಿಗೆ ಪಾವತಿಸುವ ನಟಿಯಾಗಿದ್ದೇನೆ. ಆದರೆ ಕೆಲಸ ಇಲ್ಲದೆ, ಕಳೆದ ವರ್ಷ ಅರ್ಧದಷ್ಟು ತೆರಿಗೆಯನ್ನು ಪಾವತಿಸಿದ್ದೇನೆ. ಇದೀಗ ತೆರಿಗೆ ಪಾವತಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿದ್ದು, ನನ್ನ ಜೀವನದಲ್ಲಿ ಇದೇ ಮೊದಲ ಬಾರಿಗೆ ಎಂದಿದ್ದಾರೆ.
ನಾನು ತೆರಿಗೆ ಪಾವತಿಸುವುದು ತಡ ಮಾಡಿದರೆ ಸರ್ಕಾರ ನನಗೆ ಬಡ್ಡಿ ವಿಧಿಸುತ್ತದೆ. ಇದನ್ನು ನಾನು ಸ್ವಾಗತಿಸುತ್ತೇನೆ. ಈ ಸಮಯ ನಮ್ಮೆಲ್ಲರಿಗೂ ಕಠಿಣವಾಗಿರಬಹುದು. ಆದರೆ ಎಲ್ಲರೂ ಒಂದಾದರೆ ಸಮಯಕ್ಕಿಂತ ಕಠಿಣವಾಗಬಹುದು ಎಂದು ಬರೆದುಕೊಂಡಿದ್ದಾರೆ.