ನವದೆಹಲಿ: ಹಲವಾರು ವಿವಾದಗಳಿಂದಲೇ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಕಂಗನಾ ರನೌತ್ ಇದೀಗ ವಿಡಿಯೋ ಒಂದರ ಮೂಲಕ ದೇಶದ ಜನರೆದುರು ತನ್ನ ಅಳಲನ್ನು ತೋಡಿಕೊಂಡಿದ್ದು, ದೇಶದ ಜನರಲ್ಲಿ ತನ್ನ ಪರ ನಿಲ್ಲುವಂತೆ ಮನವಿ ಮಾಡಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣವಾದ ಟ್ಟೀಟರ್ ಖಾತೆಯಲ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿರುವ ನಟಿ ಕಂಗನಾ ಯಾಕಾಗಿ ನನ್ನ ಮೇಲೆ ಮಾನಸಿಕವಾಗಿ, ದೈಹಿಕವಾಗಿ ಹಾಗೂ ಭಾವನಾತ್ಮಕವಾಗಿ ಹಿಂಸೆ ಮಾಡಲಾಗುತ್ತಿದೆ? ನನಗೆ ಈ ಇಡೀ ದೇಶವಾಸಿಗಳಿಂದ ಈ ಪ್ರಶ್ನೆಗೆ ಉತ್ತರ ಬೇಕಾಗಿದೆ ಎಂದಿದ್ದಾರೆ.
ಹಿಂದಿನಿಂದಲೂ ನಾನು ನಿಮ್ಮ ಪರವಾಗಿ ನಿಂತಿದ್ದೆ. ಈಗ ನೀವು ನನ್ನ ಪರವಾಗಿ ನಿಲ್ಲಬೇಕಾಗಿದೆ ಎಂದು ಮನವಿ ಮಾಡಿರುವ ನಟಿ, ದೇಶದ ಜನರ ಪರವಾಗಿ ನಾನು ಧನಿಎತ್ತಲು ಪ್ರಾರಂಭಿಸಿದ ಕ್ಷಣದಿಂದ ನನ್ನ ಮೇಲೆ ಹಿಂಸೆ ನಡೆಸಲಾಗುತ್ತಿದೆ. ಕೆಲವು ಜನರು ನೀಡುತ್ತಿರುವ ಈ ಹಿಂಸೆಯನ್ನು ಇಡೀ ದೇಶ ನೋಡುತ್ತಲೇ ಇದೆ ಎಂದಿದ್ದಾರೆ.
ಇದನ್ನೂ ಓದಿ:ಹೂತು ಹೋಗುವ ಹಿಮದಲ್ಲಿ ಗರ್ಭಿಣಿಯನ್ನು ಹೊತ್ತು ಆಸ್ಪತ್ರೆಗೆ ದಾಖಲಿಸಿದ ಯೋಧರು
ವಿಡೀಯೊದ ಮೂಲಕ ತಾನು ದೇಶಕ್ಕಾಗಿ ಮಾಡಿರುವ ಕಾರ್ಯಗಳನ್ನು ನೆನಪಿಸಿಕೊಂಡಿರುವ ನಟಿ, ಕೋವಿಡ್ ಸಮಯದಲ್ಲಿ ನಾನು ವೈದ್ಯರ ಪರ ಮಾತನಾಡಿದ್ದಕ್ಕಾಗಿ ನನ್ನ ಮೇಲೆ ಕೇಸ್ ದಾಖಲಿಸಲಾಯಿತು. ರೈತ ಹೋರಾಟದಲ್ಲಿ ರೈತರ ಪರ ದನಿ ಎತ್ತಿದ್ದಕ್ಕಾಗಿ ನನ್ನ ಮೇಲೆ ಪ್ರಕರಣ ದಾಖಲಿಸಲಾಗಿದೆ. ಕಾನೂನುಬಾಹಿರವಾಗಿ ನನ್ನ ಮನೆಯನ್ನು ಉರುಳಿಸಲಾಯಿತು. ನಾನು ನಕ್ಕಿದ್ದಕ್ಕೂ ಕೇಸ್ ದಾಖಲಿಸಲಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಮುಂದುವರೆದು ಮಾತನಾಡಿರುವ ಕಂಗನಾ ನಾವು ಇಂದು ಮಧ್ಯಕಾಲೀನ ಯುಗದಲ್ಲಿದ್ದೇವಾ ಎಂದು ಸುಪ್ರಿಂ ಕೋರ್ಟ್ ಅನ್ನು ಪ್ರಶ್ನಿಸಿದ್ದಾರೆ. ನಾವು ಬದುಕುತ್ತಿರುವುದು ಮಹಿಳೆಯನ್ನು ಜೀವಂತವಾಗಿ ಸುಟ್ಟುಹಾಕುತ್ತಿದ್ದ, ಮಹಿಳೆಯಾದವಳು ಯಾರೊಂದಿಗೂ ಮಾತನಾಡಬಾರದು ಎಂಬ ನಿಯಮ ಪಾಲನೆಯಾಗುತ್ತಿದ್ದ ಆ ಮಧ್ಯಕಾಲೀನ ಯುಗದಲ್ಲಿಯೇ ಎಂದು ತಮ್ಮ ವಿಡಿಯೋ ಮೂಲಕ ಕೇಳಿದ್ದಾರೆ.