ಕ್ರೈಸ್ಟ್ ಚರ್ಚ್: ದಿಢೀರ್ ಬೆಳವಣಿಗೆಯಲ್ಲಿ ನ್ಯೂಜಿಲ್ಯಾಂಡ್ ಕ್ರಿಕೆಟ್ ತಂಡದ ಮೂರು ಮಾದರಿಯ ನಾಯಕನಾಗಿದ್ದ ಕೇನ್ ವಿಲಿಯಮ್ಸನ್ ಅವರು ಟೆಸ್ಟ್ ತಂಡದ ನಾಯಕತ್ವ ತ್ಯಜಿಸಿದ್ದಾರೆ. ನೂತನ ನಾಯಕನಾಗಿ ಟಿಮ್ ಸೌಥಿ ಅವರನ್ನು ನೇಮಿಸಲಾಗಿದೆ.
2021 ರಲ್ಲಿ ಏಜಸ್ ಬೌಲ್ ನಲ್ಲಿ ಭಾರತದ ವಿರುದ್ಧದ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ವಿಜಯದತ್ತ ಮುನ್ನಡೆಸಿದ ವಿಲಿಯಮ್ಸನ್ ಅವರು ವೈಟ್-ಬಾಲ್ ನಾಯಕರಾಗಿ ಮುಂದುವರಿಯುತ್ತಾರೆ.
“ನಾಯಕತ್ವದಿಂದಾಗಿ ಮೈದಾನದ ಒಳಗೆ ಮತ್ತು ಹೊರಗೆ ಕೆಲಸದ ಒತ್ತಡ ಹೆಚ್ಚುತ್ತಿದೆ. ನನ್ನ ವೃತ್ತಿಜೀವನದ ಈ ಹಂತದಲ್ಲಿ ಈ ನಿರ್ಧಾರಕ್ಕೆ ಸರಿಯಾದ ಸಮಯ ಎಂದು ನಾನು ಭಾವಿಸುತ್ತೇನೆ” ಎಂದು ಕೇನ್ ಹೇಳಿಕೊಂಡಿದ್ದಾರೆ.
“ನ್ಯೂಜಿಲ್ಯಾಂಡ್ ಕ್ರಿಕೆಟ್ ಮಂಡಳಿಯೊಂದಿಗೆ ಚರ್ಚಿಸಿದ ಬಳಿಕ, ಮುಂದಿನ ಎರಡು ವರ್ಷಗಳಲ್ಲಿ ಎರಡು ವಿಶ್ವಕಪ್ ಇರುವ ಕಾರಣ ವೈಟ್ ಬಾಲ್ ಮಾದರಿಯಲ್ಲಿ ನಾಯಕನಾಗಿ ಮುಂದುವರಿಯುವುದು ಉತ್ತಮ ಎಂದು ತೀರ್ಮಾನಿಸಿದ್ದೇನೆ” ಎಂದು ಅವರು ಹೇಳಿದ್ದಾರೆ.
ನ್ಯೂಜಿಲ್ಯಾಂಡ್ ಗಾಗಿ ಆಡುವುದು ಮತ್ತು ಮೂರು ಮಾದರಿಯಲ್ಲಿ ಆಡುವುದು ಎಂದಿಗೂ ನನ್ನ ಮೊದಲ ಆದ್ಯತೆಯಾಗಿದೆ ಎಂದು ಕೇನ್ ಹೇಳಿದ್ದಾರೆ.
22 ಟಿ20 ಪಂದ್ಯಗಳಲ್ಲಿ ಕಿವೀಸ್ ತಂಡವನ್ನು ಮುನ್ನಡೆಸಿರುವ ಟಿಮ್ ಸೌಥಿ ಅವರು ಇನ್ನು ಟೆಸ್ಟ್ ತಂಡದ ನಾಯಕತ್ವ ವಹಿಸಲಿದ್ದಾರೆ. ಲ್ಯಾಥಂ ಉಪ ನಾಯಕನಾಗಿ ಮುಂದುವರಿಯಲಿದ್ದಾರೆ.