Advertisement

ತಂಡ ಸಮಗ್ರ ಪ್ರದರ್ಶನ ನೀಡಿದೆ: ಕೇನ್‌ ವಿಲಿಯಮ್ಸನ್‌

10:30 AM May 01, 2019 | keerthan |

ಹೈದರಾಬಾದ್‌: ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಿದ ಬಳಿಕ ಪ್ರತಿಕ್ರಿಯೆ ನೀಡಿರುವ ಸನ್‌ರೈಸರ್ ಹೈದರಾಬಾದ್‌ ತಂಡದ ಕಪ್ತಾನ ಕೇನ್‌ ವಿಲಿಯಮ್ಸನ್‌ ತಂಡವು ಎಲ್ಲ ವಿಭಾಗದಲ್ಲಿಯೂ ಅತ್ಯುತ್ತಮ ಪ್ರದ ರ್ಶನ ನೀಡಿದೆ ಎಂದು ಹೇಳಿದ್ದಾರೆ.

Advertisement

“ಈ ಕೂಟದ ನಿರ್ಣಾಯಕ ಹಂತಕ್ಕೆ ಬಂದಿರುವುದರಿಂದ ನಮಗೆ ಅಂಕಗಳ ಅಗತ್ಯವಿತ್ತು. ಇದು ನಮಗೆ ಬಹುದೊಡ್ಡ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ತಂಡವು ಎಲ್ಲ ವಿಭಾಗ ದಲ್ಲಿಯೂ ಉತ್ತಮ ಆಟವಾಡಿ ಪರಿಪೂರ್ಣ ಪ್ರದರ್ಶನ ನೀಡಿದೆ. ವಾರ್ನರ್‌ ಮತ್ತು ಬೇರ್‌ಸ್ಟೊ ವರ್ಲ್ಡ್ ಕ್ಲಾಸ್‌ ಪ್ರದರ್ಶನ ನೀಡಿದ್ದಾರೆ. ಅವರ ಸ್ಥಾನಕ್ಕೆ ಬದಲಿ ಆಟಗಾರರನ್ನು ತರುವುದು ಕಷ್ಟ. ಆದರೆ ತಂಡವಾಗಿ ಈ ಸಡಿಲತೆಯಿಂದ ಹೊರಬರಬೇಕು’ ಎಂದು ಕೇನ್‌ ವಿಲಿಯಮ್ಸನ್‌ ಹೇಳಿದ್ದಾರೆ.

ಸದ್ಯ 12 ಪಂದ್ಯಗಳಲ್ಲಿ 12 ಅಂಕಗಳನ್ನು ಸಂಪಾದಿಸಿರುವ ಹೈದರಾಬಾದ್‌ ಸೋಮವಾರದ ಗೆಲುವಿನಿಂದ ಪ್ಲೇ ಆಫ್ ಪ್ರವೇಶದ ಅವಕಾಶವನ್ನು ಕೊಂಚ ಸುಗಮಗೊಳಿಸಿದೆ. ಇನ್ನೆರಡು ಪಂದ್ಯಗಳನ್ನು ಹೈದರಾಬಾದ್‌ ಆಡಲಿದ್ದು, ಗುರುವಾರ ವಾಂಖೇಡೆ ಸ್ಟೇಡಿಯಂನಲ್ಲಿ ಮುಂಬೈ ಎದುರು ಮುಖಾಮುಖೀಯಾಗಲಿದೆ. ಈ ಬಗ್ಗೆ ಮಾತನಾಡಿರುವ ನಾಯಕ ಮುಂದಿನೆರಡೂ ಪಂದ್ಯಗಳು ನಮ್ಮ ಪಾಲಿಗೆ ಪ್ರಾಮುಖ್ಯ ಎಂದು ಹೇಳಿದ್ದಾರೆ.
“ಇನ್ನು 2 ಪಂದ್ಯಗಳು ಉಳಿದಿವೆ. ಎರಡೂ ಪಂದ್ಯಗಳು ಕೂಡ ಅತೀ ಮುಖ್ಯ. ಒಂದು ದಿನ ವಿರಾಮವಿರುವುದರಿಂದ ಮುಂಬೈ ವಿರುದ್ಧದ ಪಂದ್ಯವನ್ನು ಎದುರು ನೋಡುತ್ತಿದ್ದೇವೆ. ಇದೇ ಸಂಘಟಿತ ಪ್ರದರ್ಶನ ನೀಡುವ ವಿಶ್ವಾಸವಿದೆ’ ಎಂದು ಹೇಳಿದ್ದಾರೆ.

ಮುಂಬೈ ವಿರುದ್ಧದ ಮೊದಲ ಪಂದ್ಯದಲ್ಲಿ ತಂಡವು 40 ರನ್‌ಗಳ ಸೋಲನುಭವಿಸಿತ್ತು. ವಾರ್ನರ್‌ ಭರ್ಜರಿ ಆಟ ತವರಿನ ಆಟದಲ್ಲಿ ಮೊದಲ ಬ್ಯಾಟಿಂಗ್‌ಗಿಳಿದ ಹೈದರಾಬಾದ್‌ 20 ಓವರ್‌ಗಳಲ್ಲಿ 6 ವಿಕೆಟಿಗೆ 212 ರನ್‌ ಬಾರಿಸಿತು. ಇದು ಈ ಬಾರಿಯ ಆವೃತ್ತಿಯಲ್ಲಿ ಹೈದರಾಬಾದ್‌ನ 2ನೇ ಅತ್ಯಧಿಕ ಸ್ಕೋರ್‌. ಆರ್‌ಸಿಬಿ ವಿರುದ್ಧ 231 ರನ್‌ ಬಾರಿಸಿದ್ದು ದಾಖಲೆಯಾಗಿದೆ. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫ‌ಲವಾದ ಪಂಜಾಬ್‌ 20 ಓವರ್‌ಗಳಲ್ಲಿ 8 ವಿಕೆಟಿಗೆ 167 ರನ್‌ ಬಾರಿಸಿ ಸೋಲನುಭವಿಸಿತು. ಹೈದರಾಬಾದ್‌ ಪರ ಭರ್ಜರಿ ಆಟವಾಡಿದ ಡೇವಿಡ್‌ ವಾರ್ನರ್‌ 56 ಎಸೆತಗಳಲ್ಲಿ 81 ರನ್‌ ಬಾರಿಸಿದರು (2 ಸಿಕ್ಸರ್‌, 7 ಬೌಂಡರಿ). ಬೌಲಿಂಗ್‌ನಲ್ಲಿ ಖಲೀಲ್‌ ಹಾಗೂ ರಶೀದ್‌ ಖಾನ್‌ ತಲಾ 3 ವಿಕೆಟ್‌ ಕಿತ್ತರೆ, ಸಂದೀಪ್‌ ಶರ್ಮ 2 ವಿಕೆಟ್‌ ಕಬಳಿಸಿ ತಂಡದ ಗೆಲುವಿಗೆ ಕಾರಣರಾದರು. ಪಂಜಾಬ್‌ ಪರ ಆರಂಭಕಾರ ರಾಹುಲ್‌ ಅವರದು ಹೆಚ್ಚಿನ ಗಳಿಕೆ (79).

ಸಂಕ್ಷಿಪ್ತ ಸ್ಕೋರ್‌: ಹೈದರಾಬಾದ್‌- 6 ವಿಕೆಟಿಗೆ 212, ಪಂಜಾಬ್‌- 8 ವಿಕೆಟಿಗೆ 167 (ರಾಹುಲ್‌ 79, ಮಾಯಾಂಕ್‌ ಅಗರ್ವಾಲ್‌ 27, ನಿಕೋಲಸ್‌ ಪೂರಣ್‌ 21, ರಶೀದ್‌ ಖಾನ್‌ 21ಕ್ಕೆ 3, ಖಲೀಲ್‌ 40ಕ್ಕೆ 3, ಸಂದೀಪ್‌ ಶರ್ಮ 33ಕ್ಕೆ2).
ಪಂದ್ಯಶ್ರೇಷ್ಠ: ಡೇವಿಡ್‌ ವಾರ್ನರ್‌

Advertisement

ವಾರ್ನರ್‌ ಅದ್ಭುತ ಕಂಬ್ಯಾಕ್‌
ಈ ಬಾರಿಯ ಸನ್‌ರೈಸರ್ ಹೈದರಾಬಾದ್‌ ತಂಡದ ಪರ ಕೊನೆಯ ಪಂದ್ಯವನ್ನಾಡಿದ ಡೇವಿಡ್‌ ವಾರ್ನರ್‌ ವಿಶ್ವಕಪ್‌ ತಯಾರಿಗಾಗಿ ಐಪಿಎಲ್‌ನಿಂದ ಹೊರಹೋಗುತ್ತಿದ್ದು, ತವರಿಗೆ ಹಿಂದಿರುಗುವ ಮುನ್ನ ಟ್ವಿಟರ್‌ನಲ್ಲಿ ಭಾವನಾತ್ಮಕ ಸಂದೇಶವನ್ನು ಸನ್‌ರೈಸರ್ ಕುಟುಂಬ, ಅಭಿಮಾನಿ ವರ್ಗಕ್ಕೂ ಕಳುಹಿಸಿ ಧನ್ಯವಾದ ಹೇಳಿದ್ದಾರೆ. “ಕೇವಲ ಈ ಆವೃತ್ತಿ ಮಾತ್ರವಲ್ಲದೇ ಕಳೆದ ವರ್ಷದ ಆವೃತ್ತಿಯಲ್ಲೂ ನನಗೆ ಪ್ರೋತ್ಸಾಹ ನೀಡಿದ ಸನ್‌ರೈಸರ್ ಕುಟುಂಬಕ್ಕೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು. ಬಹಳ ಸಮಯಗಳಿಂದ ತಂಡಕ್ಕೆ ಹಿಂದಿರುಗಲು ಕಾತರನಾಗಿದ್ದೆ. ನನ್ನ ಕಂಬ್ಯಾಕ್‌ ಅದ್ಭುತವಾಗಿತ್ತು’ ಎಂದು ಹೇಳಿದ್ದಾರೆ.

ಎಕ್ಸ್‌ಟ್ರಾ ಇನ್ನಿಂಗ್ಸ್‌
* ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ರಾಜೀವ್‌ ಗಾಂಧಿ ಇಂಟರ್‌ನ್ಯಾಶನಲ್‌ ಸ್ಟೇಡಿಯಂನಲ್ಲಿ ಹೈದರಾಬಾದ್‌ ವಿರುದ್ಧ ಕಳೆದ ಎಲ್ಲ 5 ಪಂದ್ಯಗಳಲ್ಲಿ ಸೋತಿದೆ. ಪಂಜಾಬ್‌ಗ ಕೊನೆಯ ಜಯ ಬಂದಿದ್ದು 2014ರ ಆವೃತ್ತಿಯಲ್ಲಿ. ಆ ಪಂದ್ಯದಲ್ಲಿ ಪಂಜಾಬ್‌ 206 ರನ್‌ಗಳ ಗುರಿಯನ್ನು 5 ವಿಕೆಟ್‌ ನಷ್ಟದಲ್ಲಿ ತಲುಪಿತ್ತು.
* ಡೇವಿಡ್‌ ವಾರ್ನರ್‌ ಪಂಜಾಬ್‌ ವಿರುದ್ಧದ ಕಳೆದ 8 ಪಂದ್ಯಗಳಲ್ಲಿ ಅರ್ಧಶತಕ ಬಾರಿಸಿದ್ದಾರೆ. 2014-16ರ ಅವಧಿಯಲ್ಲಿ ಆರ್‌ಸಿಬಿ ವಿರುದ್ಧದ 7 ಪಂದ್ಯಗಳಲ್ಲಿ ಮತ್ತು ಚೆನ್ನೈ ವಿರುದ್ಧದ 5 ಪಂದ್ಯಗಳಲ್ಲಿ ವಾರ್ನರ್‌ ಅರ್ಧಶತಕ ಹೊಡೆದಿದ್ದಾರೆ. ಇಲ್ಲಿಯ ವರೆಗೆ ಒಂದು ತಂಡದ ವಿರುದ್ಧ ಯಾವುದೇ ಆಟಗಾರ ಸತತ 4 ಫಿಫ್ಟಿ ಪ್ಲಸ್‌ ರನ್‌ ದಾಖಲಿಸಿಲ್ಲ.
* ಪಂಜಾಬ್‌ ವಿರುದ್ಧ ವಾರ್ನರ್‌ ಒಟ್ಟು 10 ಬಾರಿ ಫಿಫ್ಟಿ ಪ್ಲಸ್‌ ರನ್‌ ದಾಖಲಿಸಿದ್ದಾರೆ. ಇದೊಂದು ದಾಖಲೆ. ಒಂದು ತಂಡದ ವಿರುದ್ಧ ಯಾವುದೇ ಆಟಗಾರ 8ಕ್ಕಿಂತ ಹೆಚ್ಚು ಬಾರಿ ಫಿಫ್ಟಿ ಪ್ಲಸ್‌ ರನ್‌ ಮಾಡಿಲ್ಲ.
* ರಾಜೀವ್‌ ಗಾಂಧಿ ಇಂಟರ್‌ನ್ಯಾಶನಲ್‌ ಸ್ಟೇಡಿಯಂನಲ್ಲಿ ವಾರ್ನರ್‌ 31 ಇನ್ನಿಂಗ್ಸ್‌ಗಳಲ್ಲಿ 18 ಫಿಫ್ಟಿ ಪ್ಲಸ್‌ ರನ್‌ ದಾಖಲಿಸಿದರು. ಈ ಮೂಲಕ ಐಪಿಎಲ್‌ನ ಕ್ರೀಡಾಂಗಣ ಒಂದರಲ್ಲಿ ಅತ್ಯಧಿಕ ಫಿಫ್ಟಿ ಪ್ಲಸ್‌ ರನ್‌ ಬಾರಿಸಿದ 2ನೇ ಆಟಗಾರ ಎನಿಸಿಕೊಂಡರು. ವಿರಾಟ್‌ ಕೊಹ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 70 ಇನ್ನಿಂಗ್ಸ್‌ನಲ್ಲಿ 19 ಫಿಫ್ಟಿ ಪ್ಲಸ್‌ ಸ್ಕೋರ್‌ ಹೊಡೆದಿದ್ದಾರೆ.
* ಆರು ವಿಕೆಟಿಗೆ 212 ರನ್‌ ಗಳಿಸಿದ್ದು ಹೈದರಾಬಾದಿನ 2ನೇ ಅತ್ಯಧಿಕ ಸ್ಕೋರ್‌. ಇದೇ ಆವೃತ್ತಿಯಲ್ಲಿ ರಾಯಲ್‌ ಚಾಲೆಂಜರ್ ಬೆಂಗಳೂರು ವಿರುದ್ಧ 2 ವಿಕೆಟಿಗೆ 231 ರನ್‌ ಗಳಿಸಿದ್ದು ತಂಡದ ಅತ್ಯಧಿಕ ಸ್ಕೋರ್‌ ಆಗಿದೆ.
ಜ ಮುಜೀದ್‌ ಉರ್‌ ರೆಹಮಾನ್‌ 4 ಓವರ್‌ಗಳಲ್ಲಿ 66 ರನ್‌ ನೀಡಿದರು. ಇದು ಐಪಿಎಲ್‌ನಲ್ಲಿ ಅತ್ಯಧಿಕ ರನ್‌ ನೀಡಿದ ಯಾದಿಯಲ್ಲಿ ಜಂಟಿ 2ನೇ ಸ್ಥಾನ. ಕಳೆದ ವರ್ಷ ಆರ್‌ಸಿಬಿ ವಿರುದ್ಧ ಬಾಸಿಲ್‌ ಥಂಪಿ 70 ರನ್‌ ನೀಡಿದ್ದು ದಾಖಲೆ. 2013ರಲ್ಲಿ ಚೆನ್ನೈ ವಿರುದ್ಧ ಇಶಾಂತ್‌ ಶರ್ಮ 66 ರನ್‌ ನೀಡಿದ್ದರು.
* ಮಾಯಾಂಕ್‌ ಅಗರ್ವಾಲ್‌ ಅವರ ವಿಕೆಟ್‌ ಕೀಳುವ ಮೂಲಕ ರಶೀದ್‌ ಖಾನ್‌ ಐಪಿಎಲ್‌ನಲ್ಲಿ 50 ವಿಕೆಟ್‌ ಪಡೆದರು. ಹೈದರಾಬಾದ್‌ ಪರ 50 ಪ್ಲಸ್‌ ವಿಕೆಟ್‌ ತೆಗೆದವರಲ್ಲಿ ರಶೀದ್‌ ದ್ವಿತೀಯ ಸ್ಥಾನದಲ್ಲಿದ್ದಾರೆ. ಭುವನೇಶ್ವರ್‌ ಮೊದಲಿಗ (104).

Advertisement

Udayavani is now on Telegram. Click here to join our channel and stay updated with the latest news.

Next