Advertisement

ಕಂದಾವರ: ಡಾಮರು ಕಾಣದ ಹಲವು ರಸ್ತೆಗಳು 

08:20 PM Aug 22, 2021 | Team Udayavani |

ಕೈಕಂಬ: ಕಂದಾವರ ಗ್ರಾಮದ ಪ್ರಮುಖ ರಸ್ತೆಗಳು ಅಭಿವೃದ್ಧಿಗೊಂಡಿವೆಯಾದರು ಆದರೆ ಕೆಲವು ಅಗತ್ಯ ಸಂಪರ್ಕ ರಸ್ತೆಗಳು ಕಚ್ಚಾ (ಮಣ್ಣ )ರಸ್ತೆಗಳಾಗಿಯೇ ಉಳಿದಿವೆ. ಇದರಿಂದಾಗಿ ಗ್ರಾಮೀಣ ಜನರಿಗೆ ಸಂಪರ್ಕಕ್ಕೆ ತೊಂದರೆಯಾಗಿದ್ದು, ಈ ರಸ್ತೆಗಳನ್ನು ಡಾಮರು ಕಾಮಗಾರಿಗೊಳಿಸಬೇಕಿದೆ.

Advertisement

ಕಂದಾವರ-ಮೂಡುಕರೆ-ಅದ್ಯಪಾಡಿ ಮುಖ್ಯ ರಸ್ತೆಯ ಕಂದವಾರ, ಮುಂಗ್ಲಿತೋಟ, ಸುಬ್ರಹ್ಮಣ್ಯ ವಾಸುಕೀ ದೇವಸ್ಥಾನದ ಪ್ರದೇಶಗಳಲ್ಲಿ ರಾಯರ ಕೋಡಿ -ಗುರುಪುರ ಚರ್ಚ್‌ ರಸ್ತೆ ಕಚ್ಚಾರಸ್ತೆಯಾಗಿದ್ದು, ಇಲ್ಲಿಯೂ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯಬೇಕಿದೆ. ಕೌಡೂರು ಬೈಲಗುಂಡಿ ರಸ್ತೆ ತೀರ ಹದಗೆಟ್ಟಿದೆ. ಕಂದಾವರ ಪದವು ಉಮೇಶ್‌ ಕಾಂಪೌಂಡ್‌ ರಸ್ತೆ, ಕಿನ್ನಿಕಂಬಳ ಕೌಡೂರು ರಸ್ತೆ, ಪಡ್ಡಾಯಿಪದವು ಶ್ರೀ ನೀಲಕಂಠ ದೇವಸ್ಥಾನ ಈ ರಸ್ತೆಗಳ ಅಭಿವೃದ್ಧಿಗೆ ಗ್ರಾ.ಪಂ.ಗೆ ಹತ್ತು ವರ್ಷಗಳಿಂದ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜವಾಗಿಲ್ಲ ಎಂಬುದು ಗ್ರಾಮಸ್ಥರ ಅಳಲು.

ಕೌಡೂರಿನಿಂದ-ಬೈಲಬಂಡಿ ಶ್ರೀ ಧೂಮಾವತಿ ಬಂಟ ದೈವಸ್ಥಾನಕ್ಕೆ ಹೋಗುವ ರಸ್ತೆಯಾಗಬೇಕು. ಇದು ಕಂದಾವರ ಮೂಡುಕರೆ ರಸ್ತೆಗೆ ಕೂಡು ರಸ್ತೆಯಾಗಲಿದೆ. ಇಲ್ಲಿನ ತೋಡಿಗೆ ಸೇತುವೆ ನಿರ್ಮಾಣ ಅಗತ್ಯವಿದೆ.

ಬೈಲಗುಂಡಿ: 15 ಮನೆಗಳಿಗೆ ನೀರು ಸರಬರಾಜು ಅಗತ್ಯ ಕಂದಾವರ ಬೈಲಗುಂಡಿಯ 15 ಮನೆಗಳಿಗೆ ಈವರೆಗೂ ಕುಡಿಯುವ ನೀರಿನ ಪೈಪ್‌ ಲೈನ್‌ ಬಂದಿಲ್ಲ. ಬೇಸಗೆಯಲ್ಲಿ ಇಲ್ಲಿಯ ನಿವಾಸಿಗಳು ದೂರದ ಬಾವಿಗಳಿಂದ ನೀರು ಎಳೆದೇ ತರಬೇಕಿದೆ.

ಕಂದಾವರ ತೇಂಜದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಪಂಪ್‌ ಆಪರೇಟರ್‌ಗಳ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂಬುದು ಜನರ ದೂರು.

Advertisement

ಗುರುಪುರ ನಾಡ ಕಚೇರಿಗೆ ನೂತನ ಕಟ್ಟಡದ ಅಗತ್ಯ :

ಗುರುಪುರ ನಾಡಕಚೇರಿ ಈಗ ಕಂದಾವರ ಗ್ರಾಮ ಪಂಚಾಯತ್‌ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಹಳೆಯ ಕಂಪ್ಯೂಟರ್‌, ಸಿಬಂದಿ ಕೊರತೆಯಿಂದ ಇಲ್ಲಿ ತಾಂತ್ರಿಕ ತೊಂದರೆಗಳು ಕಾಣಿಸುತ್ತಿವೆ.  ಸ್ಥಳಾವಕಾಶದ ಕೊರತೆ ಇದೆ. ಈಗಾಗಲೇ ನಾಡಕಚೇರಿಗೆ ಜಾಗವನ್ನು ಗುರುತಿಸಲಾಗಿದ್ದು, ಇಲ್ಲಿಗೆ ನೂತನ ಕಟ್ಟಡ, ಹೊಸ ಕಂಪ್ಯೂಟರ್‌ಗಳನ್ನು ಒದಗಿಸಬೇಕಿದೆ.

ನೆಟ್‌ವರ್ಕ್‌ ಸಮಸ್ಯೆ :

ಕಂದಾವರ ಗ್ರಾಮ ಕೆಲವು ಪ್ರದೇಶಗಳು ಪೇಟೆ ಸಮೀಪದಲ್ಲಿಯೇ ಇದ್ದರೂ ಮೊಬೈಲ್‌ ನೆಟ್‌ವರ್ಕ್‌ ಸಿಗುತ್ತಿಲ್ಲ. ಕಿನ್ನಿಕಂಬಳ ಶಾಲಾ ವಠಾರ, ಕಂದಾವರ ಪದವು, ಬೈಲಗುಂಡಿ, ಕೌಡೂರು ಈ ಪ್ರದೇಶದಲ್ಲಿ ಮೊಬೈಲ್‌ ನೆಟ್‌ವರ್ಕ್‌ ಇಲ್ಲ. ಶಾಲಾ ಮಕ್ಕಳ ಆನ್‌ಲೈನ್‌ ತರಗತಿಗಳು ಇಲ್ಲಿ ಕಷ್ಟಕರವಾಗಿದೆ. ಈ ಸಮಸ್ಯೆಯಿಂದಾಗಿ ಪ್ರೌಢಶಾಲೆಯಲ್ಲಿ ವೈಫೈ ಹಾಕಲಾಗಿದೆ. ಇಲ್ಲಿ ನಡೆದ ಲಸಿಕೆ ಕಾರ್ಯಕ್ರಮದಲ್ಲಿಯೂ ನೆಟ್‌ವೆರ್ಕ್‌ ಸಮಸ್ಯೆಯಿಂದಾಗಿ ಕಾರ್ಯಕ್ರಮಕ್ಕೆ ಭಾರೀ ತೊಂದರೆಯಾಗಿತ್ತು.

ಇತರ ಸಮಸ್ಯೆಗಳೇನು? :

  • ಗುರುಪುರ -ಕೈಕಂಬ ಪೇಟೆಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಮಧ್ಯದಲ್ಲಿರುವ ಡಿವೈಡರ್‌ಗಳಲ್ಲಿರುವ ಕಂಬಗಳಲ್ಲಿ ದಾರಿ ದೀಪ ಉರಿಯುತ್ತಿಲ್ಲ. ಗ್ರಾಮೀಣ ಪ್ರದೇಶದಲ್ಲೂ ರಸ್ತೆಗಳಿಗೆ ದಾರಿದೀಪದ ಸಮಸ್ಯೆ ಎದುರಾಗಿದೆ.
  • ಕಂದಾವರ ಪಟ್ಲ ಪ್ರದೇಶದಲ್ಲಿ ಗದ್ದೆಯಲ್ಲಿ ಅದ್ಯಪಾಡಿ ಹಾಗೂ ವಿಮಾನ ನಿಲ್ದಾಣಕ್ಕೆ ಹೋಗುವ ವಿದ್ಯುತ್‌ಲೈನ್‌ಗಳ ಕಂಬಗಳು ವಾಲಿ ಕೊಂಡು ಅಪಾಯ ಸ್ಥಿತಿಯಲ್ಲಿವೆ. ಇದನ್ನು ಸರಿಪಡಿಸಬೇಕಿದೆ.
  • ಕಂದಾವರದಿಂದ ಕೊಳಂಬೆ- ಅದ್ಯಪಾಡಿ ಗ್ರಾಮೀಣ ಪ್ರದೇಶವನ್ನು ವ್ಯಾಪ್ತಿಯಲ್ಲಿ ಸಂಚರಿಸಿ ಕೆಂಜಾರಿಗೆ ಹೋಗುವ ಬಸ್‌ ಇಲ್ಲಿಗೆ ಆವಶ್ಯಕತೆಯಿದೆ.
  • ಪೇಟೆಯಲ್ಲಿ ತ್ಯಾಜ್ಯ ವಿಲೇವಾರಿ ಹಾಗೂ ಸ್ವತ್ಛತೆಗೆ ಕ್ರಮ ತೆಗೆದುಕೊಳ್ಳಬೇಕು.
  • ಓವರ್‌ಹೆಡ್‌ ಟ್ಯಾಂಕ್‌ನ ಜತೆಗೆ ನೀರಿನ ಮೂಲಗಳನ್ನು ಸಂರಕ್ಷಿಸುವ ಕಡೆಗೆ ಗಮನಹರಿಸಬೇಕಿದೆ.
  • ಮೂಡುಬಿದಿರೆಗೆ ಹೋಗುವ, ಬಜಪೆಗೆ ಹೋಗುವ ಬಸ್‌ಗಳಿಗೆ ಪ್ರಯಾಣಿಕರ ತಂಗುದಾಣ ಈ ವ್ಯಾಪ್ತಿಗೆ ಬರುತ್ತದೆ.ಅದರೆ ಇಲ್ಲಿ ಸಾರ್ವಜನಿಕ ಶೌಚಾಲಯ ಇಲ್ಲ.ಇದರಿಂದ ಇಲ್ಲಿ ವಯಸ್ಕರಿಗೆ, ಮಹಿಳೆಯರಿಗೆ ಭಾರೀ ತೊಂದರೆಯಾಗುತ್ತಿದೆ ಕಂದಾವರ: ಡಾಮರು ಕಾಣದ ಹಲವು ರಸ್ತೆಗಳು

 

-ಸುಬ್ರಾಯ ನಾಯಕ್‌ ಎಕ್ಕಾರು

Advertisement

Udayavani is now on Telegram. Click here to join our channel and stay updated with the latest news.

Next