Advertisement
ಇತ್ತೀಚೆಗೆ “ನಟರಂಗ’ ರಂಗತಂಡ, ಚಂದ್ರಶೇಖರ ಕಂಬಾರರ “ಸಿಂಗಾರೆವ್ವ ಮತ್ತು ಅರಮನೆ’ ಕಾದಂಬರಿಯನ್ನು ರಂಗಶಂಕರದಲ್ಲಿ ರಂಗರೂಪಕ್ಕೆ ಇಳಿಸಿತ್ತು. ಕಾದಂಬರಿಕಾರರ ಆಶಯಗಳನ್ನು ಕಾಣಿಸುತ್ತಲೇ ನಾಟಕ ಕಟ್ಟಲು ಬೇಕಾದ ಕೇಂದ್ರವನ್ನು ಕಂಡುಕೊಂಡು ಅದರ ಧ್ವನಿಯನ್ನು ದೃಶ್ಯಗಳಾಗಿ ಕಟ್ಟಿದರು. ಕಂಬಾರರು “ಸಿಂಗಾರೆವ್ವ ಮತ್ತು ಅರಮನೆ’ ಅಂತ ಹೆಸರಿಸಿರುವುದನ್ನು ದಿವ್ಯಾ ಕಾರಂತ್ “ಕಂಚುಕಿ’ ಎಂದು ಮರುನಾಮಕರಿಸಿದ್ದು, ಕುತೂಹಲವೆನಿಸಿತು.
Related Articles
Advertisement
ಅಭಿನಯದ ಸಾಧ್ಯತೆಗಳಿಗೆ ಒತ್ತು ನೀಡಿದ್ದು ಪ್ರತಿ ಹಂತದಲ್ಲೂ ಸ್ಪಷ್ಟವಾಗುತ್ತಿತ್ತು. ಸಾಧ್ಯತೆಗಳನ್ನು ಪಕ್ವಗೊಳಿಸಿಕೊಂಡಿರುವ ಬಗೆಯೂ ಆಗಾಗ ಇಣುಕುತ್ತಿತ್ತು. ಪ್ರತಿಯೊಬ್ಬರ ಅಭಿನಯವೂ ಸಹಜವಾಗಿತ್ತು; ಅಂದರೆ, ಅಭಿನಯವನ್ನು ನಾಟಕೀಯಗೊಳಿಸಲು ದಿವ್ಯಾ ಮುಂದಾಗಿಲ್ಲ. ಹಾಗಾಗಿ ಇಲ್ಲಿ ಅತೀ ಕಸರತ್ತುಗಳಿರಲಿಲ್ಲ. ಎಲ್ಲೋ ಸ್ವಗತದ ಮಾದರಿಯ ಮಾತುಗಳನ್ನು ಮತ್ತು ಭಯ ಆತಂಕಗಳನ್ನು ವ್ಯಕ್ತಪಡಿಸುವ ಸಂದರ್ಭಗಳಲ್ಲಿ ಮಾತ್ರ ಚೂರು ನಾಟಕೀಯ- ಅದೂ ಸಹಜತೆಯ ಕಕ್ಷೆಯ ಒಳಗೇ ಬರುವಂತೆ ನೋಡಿಕೊಳ್ಳಲಾಗಿದೆ.
ಇಲ್ಲಿ ತಂತ್ರಗಾರಿಕೆಯನ್ನು ಮೇಲಾಟ ಮಾಡಿಕೊಳ್ಳದ ಪರಿಣಾಮ ನಿರೂಪಿತ ಬದುಕಿನ ಸಹಜ ಗತಿ ಆವರಿಸಿಕೊಳ್ಳಲಾರಂಭಿಸಿತು. ಇಲ್ಲಿ ತಂತ್ರಗಾರಿಕೆ ಇರಲೇ ಇಲ್ಲವೆಂದಲ್ಲ; ರಂಗವನ್ನು ನೆರಳು ಬೆಳಕಿನಲ್ಲಿ ವಿಭಾಗಿಸಿಕೊಂಡ ಕ್ರಮ ಸರಳವಾಗಿಯೂ, ಪೂರಕವಾಗಿಯೂ ಇತ್ತು. ಸಿಂಗಾರಿ ಮತ್ತು ಆಕೆಯ ಅಂತಃಪುರದ ಅಧಿಕಾರಿ ಮಿಲನದಲ್ಲಿ ಸೇರುವ ದೃಶ್ಯವನ್ನು ಕಟ್ಟಿಕೊಟ್ಟ ಪರಿ ಶ್ಲಾಘನೀಯ.
ಪ್ರತಿಯೊಬ್ಬರ ಅಭಿನಯವೂ ಆಯಾ ಪಾತ್ರಗಳ ನೋವಿನ ಅನುಭವದಲ್ಲಿ ಪಾಲುಗೊಳ್ಳುವಷ್ಟು ದಟ್ಟವಾಗಿತ್ತು. ಸಿಂಗಾರಿ ಪಾತ್ರದಾಕೆ ತನ್ನ ಸಾಮರ್ಥ್ಯವನ್ನು ತೋರಿಸಿದರು. ಶ್ರೀನಿಂಗಿ ಪಾತ್ರದ ನಟಿ ಅಭಿನಯದ ಬೇರೆ ಬೇರೆ ಮಜಲುಗಳನ್ನು ಸಮರ್ಥವಾಗಿ ಕಾಣಿಸಿದರು. ದೇಸಾಯಿ ಪಾತ್ರ ನಿರ್ವಹಣೆ ತಾರಕ ಮುಟ್ಟಿತ್ತು.
ಹಿನ್ನೆಲೆ ಸಂಗೀತ ತುಸು ಪೇಲವವಾಗಿತ್ತು. ಸಾಹಿತ್ಯ ಚೆಂದವಿದ್ದರೂ, ಅದು ಸಂಗೀತದಲ್ಲಿ ಸಮರ್ಥವಾಗಿ ಧ್ವನಿಸಲಿಲ್ಲ. ಮಂಜು ನಾರಾಯಣ್ ಉತ್ತಮವಾಗಿ ಬೆಳಕಿನ ನಿರ್ವಹಣೆ ಮಾಡಿದ್ದಾರೆ.
ಎನ್. ಸಿ. ಮಹೇಶ್