ರಾಮನಗರ: ಅಪ್ರಾಪ್ತೆಯನ್ನು ಮದುವೆ ಮಾಡಿಕೊಡುವುದಿಲ್ಲ ಎಂದು ಹೇಳಿದ್ದಕ್ಕೆ ಹಾಡಹಗಲೇ ಆಕೆಗೆ ಡ್ರಾಗನ್ ನಿಂದ ತಿವಿದು, ಅಪಹರಣ ಮಾಡಿದ್ದ ಪಾಗಲ್ ಪ್ರೇಮಿಯ ಕೈಗೆ ರಾಮನಗರ ಪೊಲೀಸರು ಕೆಲವೇ ತಾಸಿನಲ್ಲಿ ಕೋಳತೊಡಿಸಿದ್ದಾರೆ.
ಬೆಳಗ್ಗಿನ ಜಾವದಲ್ಲಿ ಜಿಲ್ಲೆಯನ್ನು ಬೆಚ್ಚಿಬೀಳಿಸಿದ್ದ ಪ್ರಕರಣಕ್ಕೆ ಪೊಲೀಸರು ಅಂತ್ಯವಾಡಿದ್ದು, ತೀವ್ರ ಗಾಯಗೊಂಡಿರುವ ಯುವತಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ವಿಕೃತಿ ಮೆರೆದಿದ್ದ ಯುವಕ ಚೇತನ್ ಇದೀಗ ಪೊಲೀಸ್ ಠಾಣೆಯಲ್ಲಿ ಕಂಬಿ ಏಣಿಸುತ್ತಿದ್ದಾನೆ.
ಘಟನೆಯ ಹಿನ್ನೆಲೆ
ಯುವಕ ಮತ್ತು ಅಪ್ರಾಪ್ತ ವಯಸ್ಕ ವಿದ್ಯಾರ್ಥಿನಿ ಇಬ್ಬರೂ ಕನಕಪುರ ತಾಲೂಕಿನ ದಾಳಿಂಬ ಗ್ರಾಮದವರಾಗಿದ್ದು, ಕೃತ್ಯ ಎಸಗಿರುವ ಆರೋಪಿ ಚೇತನ್ ಬೆಂಗಳೂರಿನ ಟ್ರಾವೆಲ್ಸ್ ಕಂಪನಿಯೊಂದರಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಮೂರು ವರ್ಷಗಳ ಹಿಂದೆ ಲಾಕ್‌ಡೌನ್ ಸಮಯದಲ್ಲಿ ಊರಿನಲ್ಲೇ ಇದ್ದ ಈತನಿಗೆ ಆಕೆಯ ಮೇಲೆ ಪ್ರೀತಿ ಮೂಡಿದೆ. ಅಂದಿನಿಂದ ಅಪ್ರಾಪ್ತ ಬಾಲಕಿ ಹಾಗೂ ಕುಟುಂಬದವರನ್ನು ಈತ ಪೀಡಿಸುತ್ತಿದ್ದ. ಇನ್ನು ಇಬ್ಬರು ಬೇರೆ ಬೇರೆ ಜಾತಿಗೆ ಸೇರಿದ್ದವರೆಂದು ಮೂಲಗಳು ತಿಳಿಸಿವೆ.
ಬಾಲಕಿಗೆ ತಂದೆ ಇಲ್ಲದಿದ್ದು, ಈಕೆ ರಾಮನಗರದಲ್ಲಿ ದೊಡ್ಡಮ್ಮನ ಮನೆಯಲ್ಲಿ ಇದ್ದುಕೊಂಡು ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ನಾಲ್ಕು ತಿಂಗಳ ಹಿಂದೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸ್ವಗ್ರಾಮದಲ್ಲಿ ಯುವತಿಯ ಮನೆಯವರಿಗೂ ಯುವಕನ ಕಡೆಯವರಿಗೂ ಗಲಾಟೆ ನಡೆದಿತ್ತು. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಆದರೆ, ಸಾತನೂರು ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಯುವತಿಯ ಪೋಷಕರು ಆರೋಪಿಸಿದ್ದಾರೆ.
ಮದುವೆ ಮಾಡಿಕೊಡದಿದ್ದಕ್ಕೆ ಕಿಡ್ನಾಪ್
ಅಪ್ರಾಪ್ತೆಯನ್ನು ಮದುವೆ ಮಾಡಿಕೊಡುವಂತೆ ಚೇತನ್ ಒತ್ತಾಯಿಸಿದ್ದ. ಇದಕ್ಕೆ ನಿರಾಕರಿಸಿದ್ದ ಹುಡುಗಿಯ ಮನೆಯವರು, ಆಕೆ ಇನ್ನೂ ಓದುತ್ತಿದ್ದಾಳೆ ಎಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಕುಪಿತಗೊಂಡ ಯುವಕ ಸೋಮವಾರ ತನ್ನ ಕಂಪನಿಗೆ ಬೇರೆಡೆ ಪಿಕ್‌ಅಪ್ ಇದೆ ಎಂದು ಹೇಳಿ ರಾಮನಗರಕ್ಕೆ ಬಂದು ಯುವತಿಗೆ ಕಾರಿನಿಂದ ಗುದ್ದಿದ್ದಾನೆ. ಯುವತಿ ಕೆಳಗೆ ಬೀಳುತ್ತಿದ್ದಂತೆ ಆಕೆಯ ಮೇಲೆ ಡ್ರಾಗನ್ ನಿಂದ ದಾಳಿಮಾಡಿ, ಯುವತಿಯನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಪರಾರಿಯಾಗಿದ್ದಾನೆ.
ಒಂದು ತಾಸು ಸುತ್ತಾಡಿದ, ರಕ್ತಕಂಡು ಆಸ್ಪತ್ರೆಗೆ ಬಂದ
ಬೆಳಿಗ್ಗೆ 9 ಗಂಟೆಯ ಸುಮಾರಿನಲ್ಲಿ ಯುವತಿಗೆ ಡ್ರಾಗನ್ ನಿಂದ ಇರಿದು ಇನ್ನೋವಾ ಕಾರಿನಲ್ಲಿ ಹತ್ತಿಸಿಕೊಂಡ ಆರೋಪಿ ರಾಮನಗರದಲ್ಲಿ ಒಂದು ತಾಸುಗಳ ಕಾಲ ಕಾರಿನಲ್ಲಿ ಸುತ್ತಾಡಿದ್ದಾನೆ. ಯುವತಿಗೆ ತೀವ್ರ ರಕ್ತಸ್ರಾವವಾದ ಕಾರಣ ಆತಂಕಗೊಂಡ ಚೇತನ್ ಆಕೆಯನ್ನು ರಾಮಕೃಷ್ಣ ಖಾಸಗಿ ಆಸ್ಪತ್ರೆಗೆ ಕರೆತಂದು ದಾಖಲಿಸಿದ್ದಾನೆ. ಆಸ್ಪತ್ರೆಯ ಬಳಿ ಕಾರು ನಿಂತಿರುವ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಚೇತನ್ ನನ್ನು ವಶಕ್ಕೆ ಪಡೆದಿದ್ದಾರೆ.
ಡ್ರಾಗನ್ ತಿವಿತದಿಂದ ತೀವ್ರ ಗಾಯಗೊಂಡಿರುವ ಯುವತಿ ರಾಮಕೃಷ್ಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಪಿ ಚೇತನ್ ನನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ರಾಮನಗರ ನಗರ ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಸ್ಪತ್ರೆಗೆ ಶಾಸಕ ಇಕ್ಬಾಲ್ ಹುಸೇನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಭೇಟಿಮಾಡಿ ಯುವತಿಯ ಆರೋಗ್ಯ ವಿಚಾರಿಸಿದರು.
ಟವರ್ ಲೊಕೇಷನ್ ಆಧಾರದ ಮೇಲೆ ಆರೋಪಿ ಚೇತನ್ ನನ್ನು ಬಂಧಿಸಲಾಗಿದೆ. ಈತ ಅಪ್ರಾಪ್ತ ಬಾಲಕಿಗೆ ಕಾರಿನಿಂದ ಗುದ್ದಿ, ಚಾಕುವಿನಿಂದ ತಿವಿದಿದ್ದಾನೆ. ಬಂಧಿತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ. ಹಿಂದೆ ಸಾತನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಳ್ಳಲಾಗುವುದು. ಯುವತಿಯ ಆರೋಗ್ಯ ಸ್ಥಿರವಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ ಎಂದು ರಾಮನಗರ ಜಿಲ್ಲಾ ಪೊಲೀಸ್ ವರೀಷ್ಟಾಧಿಕಾರಿ ಕಾರ್ತಿಕ್ ರೆಡ್ಡಿ ಹೇಳಿದ್ದಾರೆ.
ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹುಡುಗಿಯ ದೊಡ್ಡಮ್ಮ, ಮೂರು ತಿಂಗಳ ಹಿಂದೆ ಈತ ನಮ್ಮ ಹುಡುಗಿಗೆ ತೊಂದರೆ ನೀಡುತ್ತಿದ್ದ ಎಂಬ ಕಾರಣಕ್ಕೆ ಸಾತನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ಅಲ್ಲಿನ ಪೊಲೀಸರು ಯಾವುದೇ ರೀತಿಯ ಕ್ರಮ ಕೈಗೊಳ್ಳಲಿಲ್ಲ. ಅವರು ಕ್ರಮ ಕೈಗೊಂಡಿದ್ದರೆ ಈ ಪರಿಸ್ಥಿತಿ ಎದುರಾಗುತ್ತಿರಲಿಲ್ಲ ಎಂದರು.