Advertisement
16ನೇ ಶತಮಾನದಲ್ಲಿ ಕೆಳವ ರ್ಗದ ಒಬ್ಬ ಸಂತ ಈ ಹಂತಕ್ಕೆ ಏರಿದ ಎತ್ತರವನ್ನು ಗಮನಿಸಿದರೆ ಅದು ಸಾಮಾನ್ಯ ದಾರಿಯೇನಲ್ಲ. ಅವರ ಬದುಕು ಕೂಡ ತಿಮ್ಮಪ್ಪ, ತಿಮ್ಮಪ್ಪ ನಾಯಕ, ಕನಕ ನಾಯಕ, ಕನಕದಾಸ ಹೀಗೆ ಹಲವು ತಿರುವುಗಳನ್ನು ಪಡೆಯುತ್ತ ಕೊನೆಗೆ ವಿಶ್ವಮಾನವನಾಗಿ ಬೆಳೆದು ನಿಂತ ಪರಿಯನ್ನು ನೋಡಿದರೆ ಅಚ್ಚರಿಯನ್ನುಂಟು ಮಾಡುತ್ತದೆ. ಜತೆಗೆ ಕನಕದಾಸರ ಚಿಂತನೆಗಳ ಗಟ್ಟಿತನ ಎದ್ದು ತೋರುತ್ತದೆ.
Related Articles
Advertisement
ಯಾವ ವ್ಯಕ್ತಿ ಏನೇ ಕಾಯಕ ಮಾಡಿದರೂ ಅದರ ಹಿಂದೆ ಆತನ ಹೊಟ್ಟೆ-ಬಟ್ಟೆಯ ಆವಶ್ಯಕತೆಯಿರುತ್ತದೆ. ಮನುಷ್ಯ ಕಾಯಕ, ವೇಷಭೂಷಣದಲ್ಲಿ ಬದಲಾವಣೆ ಇರಬಹುದು. ಸಮಾಜ ಸುಧಾರಕ, ಸಾಧು ಸನ್ಯಾಸಿ, ರಾಜ-ರಾಜಕಾರಣ ಹೀಗೆ ಅನೇಕ ವೇಷಗಳನ್ನು ತೊಟ್ಟು ಮಾಡುವ ಕಾರ್ಯ ಇನ್ನೊಬ್ಬರ ಉದ್ಧಾರದ ಜತೆಗೆ ವೈಯಕ್ತಿಕ ಹಿತಾಸಕ್ತಿಗಳು ಅದರ ಹಿಂದಿರುತ್ತವೆ. ಆದ್ದರಿಂದ ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ. ಇಲ್ಲಿ ವೃತ್ತಿಯ ತಾರತ್ಯಮ್ಯ ಸಲ್ಲದು. ಎಲ್ಲ ವೃತ್ತಿಗಳು ಸಮಾನವೆಂದು ಅವರು ನೀಡಿದ ಸಂದೇಶ ಗಮನೀಯವಾಗಿದೆ.
“ಮೋಹನ ತರಂಗಿಣಿ’ ಕಾವ್ಯದಲ್ಲಿ ಮೂರು ತಲೆಮಾರುಗಳ ಪ್ರೇಮಕತೆಯನ್ನು ಹೇಳುತ್ತಾರೆ. ಅದರಲ್ಲಿ ಶೃಂಗಾರ ಬೆರೆಸಿ ಕನ್ನಡ ನಾಡಿನ ಅನೇಕ ಐತಿಹಾಸಿಕ ದಾಖಲೆಗಳನ್ನು ನೀಡುತ್ತಾರೆ. ನಳ ಚರಿತ್ರೆ ಮೂಲಕ ಆದರ್ಶ ಪ್ರೇಮ ಮತ್ತು ಆದರ್ಶ ದಾಂಪತ್ಯ ಕುರಿತು ಹೇಳುತ್ತಾರೆ. “ರಾಮಧಾನ್ಯ ಚರಿತ್ರೆ’ ಈ ಮಣ್ಣಿನ ಬಡವ, ದೀನ-ದಲಿತ ತನ್ನ ಹಕ್ಕಿಗಾಗಿ ಹೋರಾಡಬೇಕು. ಜಯ ಸಿಕ್ಕೇ ಸಿಗುತ್ತದೆ ಎಂದು ವಿಶೇಷವಾಗಿ ಆಹಾರ ಸಂಸ್ಕೃತಿಯ ಹಿನ್ನೆಲೆಯಲ್ಲಿ ಮನದಟ್ಟು ಮಾಡುತ್ತಾರೆ. ಮನುಷ್ಯ ತನ್ನ ಬದುಕು ಕಟ್ಟಿಕೊಳ್ಳಲು ಹಲವು ರೀತಿಯಲ್ಲಿ ಪ್ರಯತ್ನಿಸುತ್ತಾನೆ. ಆ ಪ್ರಯತ್ನ ರೀತಿ-ನೀತಿ-ಧರ್ಮ ಮಾರ್ಗದಿಂದ ಕೂಡಿರಬೇಕು. ಜ್ಞಾನದಿಂದ ಭಕ್ತಿ; ಭಕ್ತಿಯಿಂದ ಮುಕ್ತಿ ಎಂದು “ಹರಿ ಭಕ್ತಿ ಸಾರ’ದಲ್ಲಿ ಹೇಳುತ್ತಾರೆ. ಒಂದೊಂದು ಕಾವ್ಯದ ಹಿಂದೆ ಒಂದೊಂದು ಆಶಯವನ್ನಿಟ್ಟುಕೊಂಡು ಕನಕದಾಸರು ಕಾವ್ಯಗಳನ್ನು ರಚಿಸುತ್ತಾರೆ.
ಜಗತ್ತು ಇಂದು ಜಾತಿ, ಮತ, ಪಂಥ, ಭ್ರಷ್ಟಾಚಾರ, ಯುದ್ಧ ಭೀತಿ ಪ್ರಕೃತಿ ವಿಕೋಪಗಳ ಮಧ್ಯೆ ತಲ್ಲಣಗೊಂಡಿದೆ. ಜೀವಪರ ನಿಲುವು ಎನ್ನುವುದು ಮರೀಚಿಕೆಯಾಗಿದೆ. ಬದುಕು ಎನ್ನುವುದು ಚೌಕಟ್ಟಿಲ್ಲದ ಕನ್ನಡಿಯಂತಾಗಿದೆ. ಆದ್ದರಿಂದ ಕನಕದಾಸರ ದಾರ್ಶನಿಕ ತಣ್ತೀ ಇಂದು ಜಾಗತಿಕ ಮಟ್ಟಕ್ಕೆ ಪ್ರಚುರಗೊಂಡು “ತಲ್ಲಣಿಸದಿರು ಕಂಡ್ಯ ತಾಳು ಮನವೆ’ ಎಂಬ ತಾಯ್ತತನದ ಸಾಂತ್ವನ ಬೇಕಾಗಿದೆ. ಕುಲ ಕುಲ ವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನ್ನಾದರೂ ಬಲ್ಲಿರಾ, ಕುಲವ್ಯಾವುದು ಸತ್ಯ ಸುಖವುಳ್ಳ ಜನರಿಗೆ, ಆತ್ಮ ಯಾವ ಕುಲ, ಜೀವ ಯಾವ ಕುಲ. ಇಲ್ಲಿ ಯಾವ ವೃತ್ತಿಗಳೂ ಮತ್ತು ವೃತ್ತಿ ಮಾಡುವ ಸಮುದಾ ಯವರು ಮೇಲಲ್ಲ-ಕೀಳಲ್ಲ. ಏಕೆಂದರೆ ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎಂಬಂತಹ ಕನಕದಾಸರ ದಾರ್ಶನಿಕ ತಣ್ತೀ ಗಳ ಸಂದೇಶ ವಿಶ್ವಕ್ಕೆ ಆವಶ್ಯಕತೆ ಇದೆ.
ಕನಕದಾಸರು ತಮಗೆ ನಿಧಿ ದೊರೆತಿದ್ದನ್ನು ದಾನ ಮಾಡಿದರು. ಭಗವಂತನನ್ನು ಪ್ರಾರ್ಥಿಸಬೇಕಾದರೆ ತಮ್ಮ ವೈಯಕ್ತಿಕ ಹಿತಾಸಕ್ತಿಗಳಿಗಾಗಿ ಪ್ರಾರ್ಥಿಸದೇ “ರಕ್ಷಿಸು ನಮ್ಮನ ನವರತ’ ಎಂದು ವಿಶ್ವ ಜೀವಿಗಳ ಒಳಿತನ್ನು ಬಯಸಿ ಪ್ರಾರ್ಥಿಸಿದರು. ತಮಗಾಗಿ ಏನನ್ನೂ ಬಯಸದೆ ಮನುಷ್ಯ ಪರ, ಜೀವ ಪರ ನಿಲುವು ತಾಳಿ ಹಸಿದು ಬಂದವರಿಗೆ ಅಶನವೀಯಲುಬೇಕು ಎಂದು ಹೇಳಿದ ಕನಕದಾಸರ ಬದುಕು ಹಾಗೂ ಚಿಂತನೆಗಳು ಪರೋಪಕಾರಿಯೇ ಆಗಿವೆ. ಹೀಗಾಗಿ ಇಂದು ತಲ್ಲಣಗೊಂಡಿರುವ ಜಗತ್ತಿಗೆ ದಾರ್ಶನಿಕ ಕನಕದಾಸರ ತತ್ವದರ್ಶಗಳ ಬಗ್ಗೆ ತಿಳಿವಳಿಕೆ ನೀಡುವ ಆವಶ್ಯಕತೆ ಇದೆ.
– ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು, ಕನಕ ಗುರುಪೀಠ, ಸುಕ್ಷೇತ್ರ ಕಾಗಿನೆಲೆ