Advertisement

ಬಾಡದಲ್ಲಿ ಹಾಲೋಗ್ರಾಮ್‌ ಅಳವಡಿಸಿದ “ಕನಕ’ಚಿತ್ರ!

06:00 AM Nov 26, 2018 | Team Udayavani |

ಹಾವೇರಿ: ಕನಕದಾಸರ ಜನ್ಮಭೂಮಿ ಬಾಡ ಗ್ರಾಮದ “ಕನಕ’ ಅರಮನೆಯಲ್ಲಿ ರಾಜ್ಯದಲ್ಲೇ ಪ್ರಥಮ ಎನಿಸುವ “ಹಾಲೋಗ್ರಾಮ್‌’ ಎಂಬ ವಿದೇಶಿ ತಂತ್ರಜ್ಞಾನವಿರುವ “ಕನಕ’ ಕಿರುಚಿತ್ರ ಪ್ರದರ್ಶಿಸಲಾಗುತ್ತಿದೆ.ಕಿರುಚಿತ್ರ ಪ್ರದರ್ಶನಕ್ಕಾಗಿ ಬಹುವಿರಳ ಹಾಗೂ ಬಹುವಿಶೇಷ ತಂತ್ರಜ್ಞಾನ ಹೊಂದಿದ ಸ್ಟುಡಿಯೋವನ್ನು ಇಲ್ಲಿ ನಿರ್ಮಿಸಲಾಗಿದೆ. 

Advertisement

ಕಲಾವಿದರು ನಮ್ಮ ಎದುರೇ ನಿಂತುಕೊಂಡು ಅಭಿನಯಿಸುತ್ತಿದ್ದಾರೆಂಬ ವಿಶೇಷ ಅನುಭವ ನೀಡುವುದೇ “ಹಾಲೋಗ್ರಾಮ್‌’ ತಂತ್ರಜ್ಞಾನದ ಗತ್ತು. ಇಲ್ಲಿ ಪಾರದರ್ಶಕ ಪರದೆ ಇರುತ್ತದೆ. ಆದರೆ ಅದು ಕಣ್ಣಿಗೆ ಕಾಣುವುದಿಲ್ಲ. ಯಾವ ಕೋನದಲ್ಲಿ ವೀಕ್ಷಿಸಿದರೂ ಚಿತ್ರ ನೈಜತೆ, ಸ್ಪಷ್ಟತೆ ಈ ತಂತ್ರಜ್ಞಾನದಿಂದ ಸಿಗುತ್ತದೆ.

“ಹಾಲೋಗ್ರಾಮ್‌’ ತಂತ್ರಜ್ಞಾನ ಜರ್ಮನ್‌ ಮೂಲದ್ದು. ಈ ತಂತ್ರಜ್ಞಾನಕ್ಕೆ ಪೂರಕ ವಿಶೇಷ ಸ್ಟುಡಿಯೋ ಅವಶ್ಯಕ. ಜತೆಗೆ ಅಷ್ಟೇ ತಾಂತ್ರಿಕ ಕೌಶಲ್ಯದೊಂದಿಗೆ ಚಿತ್ರೀಕರಿಸಿದ ಚಿತ್ರವೂ ಬೇಕಾಗುತ್ತದೆ. ಕಾಗಿನೆಲೆ ಅಭಿವೃದ್ಧಿ ಪ್ರಾ ಧಿಕಾರ ಇಂಥ ಅಪರೂಪದ ಕಿರುಚಿತ್ರವನ್ನು ನಿರ್ಮಿಸಿದೆ.

ಆ್ಯನಿಮೇಶನ್‌ ಚಿತ್ರ:
ಬಾಡದಲ್ಲಿ ಕನಕರ ಜೀವನ, ಅವರ ಜೀವನ ಸಂದೇಶ ಸಾರುವ ಕಥನಗಳನ್ನು ತ್ರಿಡಿ ಆ್ಯನಿಮೇಶನ್‌ ಮಾಡಿ ಅದನ್ನು ಹಾಲೋಗ್ರಾಮ್‌ ತಂತ್ರಜ್ಞಾನಕ್ಕೆ ಅಳವಡಿಸಲಾಗಿದೆ. ಹೀಗಾಗಿ ಇದನ್ನು “ತ್ರಿಡಿ ಹಾಲೋಗ್ರಾಮ್‌’ ತಾಂತ್ರಿಕತೆ ಹೊಂದಿದ ಕಿರುಚಿತ್ರ ಎನ್ನಲಾಗುತ್ತಿದೆ.

“ಕನಕ’ ಕಿರುಚಿತ್ರ 20 ನಿಮಿಷದ್ದಾಗಿದ್ದು, ಈ ಹೊಸ ತಂತ್ರಜ್ಞಾನದ ಕಿರುಚಿತ್ರಕ್ಕೆ ಹೈದ್ರಾಬಾದ್‌ನ ಜೆನಿತೊನಿಯಾ ಮಿಡಿಯಾ ನೆಟ್‌ವರ್ಕ್‌ ಆ್ಯನಿಮೇಶನ್‌ ಮಾಡಿದೆ. ಬೆಂಗಳೂರಿನ ನಿಚ್ಚೆ ನೆಟ್‌ವರ್ಕ್‌ ಹಾಗೂ ಸಿ.ಎಸ್‌. ಕ್ರಿಯೇಶನ್‌ ಈ ಕಿರುಚಿತ್ರ ನಿರ್ಮಾಣ ಮಾಡಿದೆ. ಹಾಲೋಗ್ರಾಮ್‌ ತಂತ್ರಜ್ಞಾನ ದುಬಾರಿಯೂ ಆಗಿದ್ದು, ಬರೋಬರಿ ಒಂದು ಕೋಟಿ ವೆಚ್ಚದಲ್ಲಿ, ಒಂದು ವರ್ಷಕಾಲ ನಿರ್ಮಾಣ ಕಾರ್ಯ ನಡೆದಿದೆ. ಶನಿವಾರ ಹಾಗೂ ರವಿವಾರ ಎರಡು ದಿನ ಈ ಕಿರುಚಿತ್ರ ಪ್ರದರ್ಶಿಸಲಾಗುತ್ತಿದೆ.

Advertisement

ಇದರೊಂದಿಗೆ ಅರಮನೆ ಆವರಣದಲ್ಲಿರುವ ಕನಕರ ಜೀವನ ಕಥೆ ಸಾರುವ ಪೇಟಿಂಗ್‌ ಆಧರಿಸಿಯೂ ಹಾಲೋಗ್ರಾಮ್‌ ತಂತ್ರಜ್ಞಾನ ಹೊಂದಿದ 9 ನಿಮಿಷದ ಕಿರುಚಿತ್ರ ಸಹ ತಯಾರಿಸಲಾಗಿದೆ. ಇದರೊಂದಿಗೆ ಬಾಡದ ನೈಜ ಚಿತ್ರಗಳು ಹಾಗೂ ಕಲಾವಿದರಿಂದ ಕನಕರ ಕುರಿತು ಅಭಿನಯ ಮಾಡಿಸಿ ಅದನ್ನು ಹಾಲೋಗ್ರಾಮ್‌ ತಂತ್ರಜ್ಞಾನ ಮೂಲಕ ಪ್ರದರ್ಶಿಸುವ ಗುರಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿ ಕಾರದ್ದಾಗಿದೆ.

ಕವಿ ಶ್ರೇಷ್ಠ ಕನಕದಾಸರನ್ನು ಜನರಿಗೆ ವೈವಿಧ್ಯಮಯವಾಗಿ ಹಾಗೂ ಪ್ರಭಾವಶಾಲಿಯಾಗಿ ಪರಿಚಯಿಸುವ ಪ್ರಯತ್ನವಾಗಿ ಈ ಹಾಲೋಗ್ರಾಮ್‌ ಹೊಸ ತಂತ್ರಜ್ಞಾನ ಆಧಾರಿತ ಕಿರುಚಿತ್ರ ನಿರ್ಮಿಸಿ ಪ್ರದರ್ಶಿಸಲಾಗುತ್ತಿದೆ. ಕಳೆದೊಂದು ವರ್ಷಗಳಿಂದ ತಂತ್ರಜ್ಞರು ಬಾಡಕ್ಕೆ ಬಂದು ವಿವಿಧ ರೀತಿಯಲ್ಲಿ ಪ್ರಯೋಗ ಮಾಡಿ ಯಶಸ್ವಿ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಇದು ರಾಜ್ಯದಲ್ಲೇ ಮೊದಲು ಎನ್ನಬಹುದಾಗಿದೆ.
-ಮಲ್ಲೇಶಪ್ಪ ಹೊರಪೇಟೆ, ಆಯುಕ್ತರು, ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ.

ಪಾತ್ರಗಳಿಗೆ ನೈಜತೆಯ ಜೀವ ತುಂಬುವ ವಿಶೇಷ ತಂತ್ರಜ್ಞಾನವೇ ಹಾಲೋಗ್ರಾಮ್‌. ಈ ತಂತ್ರಜ್ಞಾನ ದೇಶದಲ್ಲಿ ಇನ್ನೂ ಪ್ರಯೋಗ ಹಂತದಲ್ಲಿರುವಾಗಲೇ ಬಾಡದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ.  ಇಂಥ ತಂತ್ರಜ್ಞಾನ ಉತ್ತರ ಕರ್ನಾಟಕದ ಭಾಗ ಅದರಲ್ಲೂ ಹಾವೇರಿ ಜಿಲ್ಲೆಗೆ ಬಂದಿರುವ ಹಿಂದೆ ಶಿಗ್ಗಾವಿ ಶಾಸಕ ಬಸವರಾಜ ಬೊಮ್ಮಾಯಿಯವರ ಸಹಕಾರ ಮರೆಯುವಂತಿಲ್ಲ.
– ಚಂದ್ರಕಾಂತ ಸೊನ್ನದ, ಸಾಕ್ಷ್ಯಚಿತ್ರ ನಿರ್ದೇಶಕರು

– ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next