Advertisement

ಕನಕ ಜಯಂತಿ ಅದ್ಧೂರಿ ಆಚರಣೆಗೆ ನಿರ್ಧಾರ

03:23 PM Nov 20, 2018 | |

ಯಾದಗಿರಿ: ಜಿಲ್ಲಾಡಳಿತ ವತಿಯಿಂದ ಭಕ್ತ ಕನಕದಾಸ ಜಯಂತ್ಯುತ್ಸವ ಕಾರ್ಯಕ್ರಮವನ್ನು ನ. 26ರಂದು ಮಧ್ಯಾಹ್ನ 12:00 ಗಂಟೆಗೆ ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಸಹಾಯಕ ಆಯುಕ್ತ ಡಾ| ಬಿ.ಎಸ್‌. ಮಂಜುನಾಥಸ್ವಾಮಿ ತಿಳಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಭಕ್ತ ಕನಕದಾಸ ಜಯಂತಿ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದ ಅವರು, ಜಯಂತಿ ಅಂಗವಾಗಿ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಅಂದು ಬೆಳಗ್ಗೆ 9:00 ಗಂಟೆಗೆ ಭಕ್ತ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಗುವುದು. ನಂತರ ಯಾದಗಿರಿ ನಗರದ ಕನಕದಾಸ ವೃತ್ತದಲ್ಲಿ ಭಕ್ತ ಕನಕದಾಸರ ಮೂರ್ತಿಗೆ ಪೂಜೆ ನೆರವೇರಿಸಲಾಗುವುದು. 

ಬಳಿಕ 10:00 ಗಂಟೆಗೆ ವೃತ್ತದಿಂದ ವಿದ್ಯಾಮಂಗಲ ಕಾರ್ಯಾಲಯದವರೆಗೆ ಕಲಾತಂಡದೊಂದಿಗೆ ಮೆರವಣಿಗೆ ನಡೆಯಲಿದೆ ಎಂದು ಹೇಳಿದರು. ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿ ಹಾಗೂ ಸರ್ಕಾರಿ, ಅನುದಾನಿತ ಶಾಲಾ-ಕಾಲೇಜುಗಳಲ್ಲಿಯೂ ಸಹ ಶ್ರದ್ಧಾ, ಭಕ್ತಿಯೊಂದಿಗೆ ಭಕ್ತ ಕನಕದಾಸ ಜಯಂತಿ ಕಡ್ಡಾಯವಾಗಿ ಆಚರಿಸಬೇಕು ಎಂದು ಸೂಚಿಸಿದರು. 

ಜಯಂತಿ ನಿಮಿತ್ತ ಕನಕ ಸಾಹಿತ್ಯ ಲೋಕ ಪ್ರಬಂಧ ರಚನಾ ಸ್ಪರ್ಧೆಯನ್ನು ಏರ್ಪಡಿಸಿ ಪ್ರಥಮ, ದ್ವಿತೀಯ, ತೃತೀಯ, 4ನೇ ಹಾಗೂ 5ನೇ ಸ್ಥಾನಗಳ ವಿದ್ಯಾರ್ಥಿಗಳಿಗೆ ಜಯಂತ್ಯುತ್ಸವ ಸಮಾ ರಂಭದಲ್ಲಿ ಪ್ರಶಸ್ತಿ, ನಗದು ಬಹುಮಾನ ವಿತರಿಸಲು ಸೂಕ್ತ ವ್ಯವಸ್ಥೆ ಮಾಡುವಂತೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲರು ಹಾಗೂ ಉಪನಿರ್ದೇಶಕರಿಗೆ ತಿಳಿಸಿದರು. 

ಭಕ್ತ ಕನಕದಾಸರ ಮೂರ್ತಿ ಹಾಗೂ ಕನಕ ವೃತ್ತಕ್ಕೆ ಲೈಟಿಂಗ್‌ ಹಾಗೂ ರಸ್ತೆ ಸ್ವತ್ಛತೆ ಮಾಡಿಸಲು ಕ್ರಮ ಕೈಗೊಳ್ಳುವಂತೆ ನಗರಸಭೆ ಪೌರಾಯುಕ್ತ ಸಂಗಪ್ಪ ಉಪಾಸೆ ಅವರಿಗೆ ತಿಳಿಸಲಾಯಿತು. ಕಾರ್ಯಕ್ರಮದ ನೋಡಲ್‌ ಅಧಿಕಾರಿಯಾಗಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳನ್ನು ನೇಮಿಸಲಾಯಿತು. ಸದರಿ ಜಯಂತಿ ಕಾರ್ಯಕ್ರಮದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಸೂಕ್ತ ಪೊಲೀಸ್‌ ಬಂದೋಬಸ್ತ್ ವ್ಯವಸ್ಥೆ ಮಾಡುವಂತೆ ಜಿಲ್ಲಾ ಪೊಲೀಸ್‌ ಇಲಾಖೆಗೆ ತಿಳಿಸಲಾಯಿತು. ಜಿಲ್ಲಾಡಳಿತ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾರ್ವಜನಿಕರು, ಗಣ್ಯ ವ್ಯಕ್ತಿಗಳಿಗೆ ಹಾಗೂ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಿಬ್ಬಂದಿಗೆ ಕುಡಿಯುವ ನೀರು ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಕೈಗೊಳ್ಳಲು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ವಿಜಯಾನಂದ ಡಿಗ್ಗಿಕರ್‌ ಅವರಿಗೆ ಸೂಚಿಸಿದರು.

Advertisement

ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕ ರಘುವೀರಸಿಂಗ್‌ ಠಾಕೂರ್‌ ಸಭೆಯ ನಡಾವಳಿ ಓದಿದರು. ನಗರಸಭೆ ಪೌರಾಯುಕ್ತ ಸಂಗಪ್ಪ ಉಪಾಸೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ವಿಶ್ವನಾಥ ನೀಲಹಳ್ಳಿ, ಕಾರ್ಯಾಧ್ಯಕ್ಷ ಗಿರೆಪ್ಪಗೌಡ, ಮಲ್ಲಿಕಾರ್ಜುನ ಕರ್ಕಿಹಳ್ಳಿ, ಚನ್ನಕೇಶವಗೌಡ ಬಾಣತಿಹಾಳ, ಮಲ್ಲಿಕಾರ್ಜುನ ಐಕೂರ, ಮಲ್ಲಿಕಾರ್ಜುನ ಕಸವಿ, ಮಂಜುನಾಥ ಊರನ್‌, ಸಾಯಬಣ್ಣ ಕೆಂಗೂರಿ ಅವರು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು  ಸಭೆಯಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next