ಶಹಾಪುರ: ನೀರನ್ನು ಮಿತವಾಗಿ ಬಳಕೆ ಮಾಡುವುದರ ಜೊತೆಗೆ ನೀರಿನ ಸಂರಕ್ಷಣೆ ಬಹು ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಮಕ್ಕಳು ಸೇರಿದಂತೆ ನಾಗರಿಕರೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹಿರಿಯ ಗಣಿ ಮತ್ತು ಭೂ ವಿಜ್ಞಾನಿ
ಆಸೀಫ್ ಉಲ್ಲಾ ಹೇಳಿದರು.
ತಾಲೂಕಿನ ಖಾನಾಪುರದ ಸರಕಾರಿ ಪ್ರೌಢಶಾಲೆಯಲ್ಲಿ ಅಂತರ್ಜಲ ನಿರ್ದೇಶನಾಲಯ ಮತ್ತು ಹಿರಿಯ ಭೂ ವಿಜ್ಞಾನಿ ಜಿಲ್ಲಾ ಅಂತರ್ಜಲ ಕಚೇರಿ ಮತ್ತು ಶ್ರೀಗುರು ಪುಟ್ಟರಾಜ ಜನಕಲ್ಯಾಣ ಸೇವಾ ಸಮಿತಿ ಹಾಗೂ ಯುವಕ ಸಂಘದ
ಆಶ್ರಯದಲ್ಲಿ ಆಯೋಜಿಸಿದ್ದ ಅಂತರ್ಜಲ ಸದ್ಬಳಕೆ, ಸಂರಕ್ಷಣೆ, ಅತಿ ಬಳಕೆ ನಿಯಂತ್ರಣ ಮತ್ತು ಅಭಿವೃದ್ಧಿಪಡಿಸುವ ಜನಜಾಗೃತಿ ಶಿಬಿರ ಉದಾಘಾಟಿಸಿ ಅವರು ಮಾತನಾಡಿದರು.
ಅಂತರ್ಜಲ ಸಂವರ್ಧನೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಕೆರೆ ಕಟ್ಟೆಗಳ ಒತ್ತುವರಿ ತೆರವುಗೊಳಿಸಿ, ಹೂಳು ತೆಗೆದು ನೀರು ತುಂಬಿಸುವುದು. ಮಳೆ ನೀರು ಪೋಲಾಗದಂತೆ ಹಿಂಗು ಗುಂಡಿ ನಿರ್ಮಿಸುವುದು, ಕೊಳಚೆ ನೀರನ್ನು ಶುದ್ಧೀಕರಿಸಿ ಬಳಸುವಂತೆ ಕ್ರಮ ಕೈಗೊಳ್ಳುವುದು ಮುಖ್ಯ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ವಿಜ್ಞಾನಿ ಕೃಷ್ಣ ಮಾತನಾಡಿ, ಈ ಕುರಿತು ಅಂತರ್ಜಲ ಬಳಕೆದಾರ, ಸಾರ್ವಜನಿಕ ಜಿಲ್ಲಾ ಮತ್ತು ತಾಲೂಕು ಮಟ್ಟದ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಸರ್ವರೂ ಈ ಕುರಿತು ಜಾಗೃತಿ ಪಡಿಸಬೇಕು. ಅಲ್ಲದೆ ನೀರನ್ನು ಹಿತಮಿತ ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಅಂತರ್ಜಲ ಕುರಿತು ಕೈಪಿಡಿ ಬಿಡುಗಡೆ ಮಾಡಿ ಜಿಲ್ಲಾ ಬಾಲ ಕಾರ್ಮಿಕರ ಯೋಜನಾ ನಿರ್ದೇಶಕ ರಘುವೀರ ಸಿಂಗ್ ಠಾಕೂರ್ ಮಾತನಾಡಿದರು. ಮುಖ್ಯ ಗುರು ಎಲ್. ಪರಮೇಶ್ವರಪ್ಪಾ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ವೇದಿಕೆಯ ಮೇಲೆ ಮಹಾಲಕ್ಷೀ ಸಜ್ಜನ್, ಗುರುಕುಲ ಕಾಲೇಜಿನ ಪ್ರಾಂಶುಪಾಲ ಸುರೇಶ ಕುಂಬಾರ, ಕಿರಣ ಇದ್ದರು. ವೆಂಕಟಯ್ಯ ಉಪನ್ಯಾಸ ನೀಡಿದರು.
ಸಮಿತಿಯ ಅಧ್ಯಕ್ಷ ಕ್ಷೀರಲಿಂಗಯ್ಯ ಹಿರೇಮಠ ಬೋನ್ಹಾಳ ಪ್ರಾಸ್ತವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಶಿಬಿರದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಚಿತ್ರಕಲಾ ಮತ್ತು ಪ್ರಬಂಧ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮವನ್ನು ವರಸ್ವಾಮಿ ಡಿ. ಪಾಟೀಲ್ ನಿರೂಪಿಸಿದರು. ನಿಂಗಣ್ಣ ಕುಂಬಾರ ಸ್ವಾಗತಿಸಿದರು. ಸುಭಾಷ ವಂದಿಸಿದರು. ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು.