ಯಾದಗಿರಿ: ವಿಧಾನಸಭಾ ಮತಕ್ಷೇತ್ರದಲ್ಲಿ ಸ್ಥಾಪಿಸಲಾಗಿದ್ದ ಮಾದರಿ ಮತದಾನ ಕೇಂದ್ರ ಮತ್ತು ಸಖೀ (ಪಿಂಕ್) ಮತಗಟ್ಟೆಗಳಿಗೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಮಂಜುನಾಥ ಜೆ. ಅವರು ಭೇಟಿ ನೀಡಿ ಮತದಾನ ಪ್ರಕ್ರಿಯೆ ಪರಿಶೀಲಿಸಿದರು.
ನಗರದ ಜಿಪಂ ಕಾರ್ಯನಿರ್ವಾಹಕ ಇಂಜಿನಿಯರ್ ಕಚೇರಿ ಕಟ್ಟಡ (ಬಲಭಾಗ)ಸ್ಥಾಪಿಸಲಾಗಿದ್ದ ಮಾದರಿ ಮತಗಟ್ಟೆಯಲ್ಲಿ ಮತದಾರರ ಸಹಾಯ ಕೇಂದ್ರ, ಪ್ರಥಮ ಚಿಕಿತ್ಸಾ ಕೇಂದ್ರ, ಮತದಾರರ ನಿರೀಕ್ಷಣಾ ಕೊಠಡಿ, ಕುಡಿಯುವ ನೀರು ಹಾಗೂ ಶೌಚಾಲಯದ ವ್ಯವಸ್ಥೆ ಪರಿಶೀಲಿಸಿದರು.
ಸುರಪುರ ಕ್ಷೇತ್ರದ ತಿಮ್ಮಾಪುರ ಬೀಚ್‌ಮೊಹಲ್ಲಾದ ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆ (ಮಧ್ಯ ಭಾಗ), ಶಹಾಪುರದ ಖವಾಸಪುರ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಹೊಸ ಕಟ್ಟಡ (ಎಡಭಾಗ) ಹಾಗೂ ಗುರುಮಠಕಲ್‌ನ ಉಪ್ಪರಗಡ್ಡ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ (ಬಲಭಾಗ) ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 4 ಮಾದರಿ ಮತದಾನ ಕೇಂದ್ರಗಳಾಗಿವೆ ಎಂದು ಅವರು ಹೇಳಿದರು.
ನಂತರ ಯಾದಗಿರಿ ನಗರದ ಕೋಲಿವಾಡದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ (ಬಲಭಾಗ) ಹಾಗೂ ಮಾರ್ಕೆಟ್ ರಸ್ತೆಯ ಮುಸ್ಲಿಂಪುರದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ (ಬಲಭಾಗ) ಸ್ಥಾಪಿಸಲಾಗಿದ್ದ ಸಖೀ (ಪಿಂಕ್) ಮತಗಟ್ಟೆಗಳಿಗೆ ಭೇಟಿ ನೀಡಿದರು. ಅಲ್ಲಿನ ಮತಗಟ್ಟೆ ಅಧ್ಯಕ್ಷಾಧಿಕಾರಿ (ಪಿಆರ್‌ಒ) ಅವರಿಂದ ಒಟ್ಟು ಮತದಾರರ ಸಂಖ್ಯೆ ಹಾಗೂ ಶೇಕಡವಾರು ಮತದಾನದ ಮಾಹಿತಿ ಪಡೆದರು. ಪಿಂಕ್ ಬೂತ್‌ನ ಮಹಿಳಾ ಅಧಿಕಾರಿಗಳಾದ ಪಿಆರ್‌ಒ, ಎಪಿಆರ್‌ಒ, ಪೋಲಿಂಗ್ ಅಧಿಕಾರಿಗಳು ಸೇರಿದಂತೆ ಮಹಿಳಾ ಮತದಾರರು ಪಿಂಕ್ ಮತಗಟ್ಟೆ ಸ್ಥಾಪನೆ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ಎರಡರಂತೆ ಮಹಿಳಾ ಮತದಾರರು ಹೆಚ್ಚಾಗಿರುವ 8 ಕಡೆಗಳಲ್ಲಿ ಪಿಂಕ್ ಬೂತ್ ಸ್ಥಾಪಿಸಲಾಗಿದೆ. ಮಹಿಳೆಯರನ್ನು ಮತಗಟ್ಟೆಗೆ ಆಕರ್ಷಿಸಲು ಹಾಗೂ ಯಾವುದೇ ಭಯ, ಒತ್ತಡವಿಲ್ಲದೇ ಮುಕ್ತ ಮತದಾನಕ್ಕೆ ಅವಕಾಶ ನೀಡಲು ಚುನಾವಣಾ ಆಯೋಗ ಪಿಂಕ್ ಬೂತ್ ಸ್ಥಾಪಿಸಿದೆ.
ಈ ಮತಕೇಂದ್ರದ ಅಧಿಕಾರಿಗಳು, ಭದ್ರತಾ ಸಿಬ್ಬಂದಿ ಮಹಿಳೆಯರೇ ಇದ್ದಾರೆ ಎಂದು ಅವರು ತಿಳಿಸಿದರು. ನಾಲ್ಕು ವಿಧಾನಸಭಾ ಕ್ಷೇತ್ರಗಳ ನೋಡಲ್ ಅಧಿಕಾರಿ ಹಾಗೂ ಜಿಪಂ ಉಪ ಕಾರ್ಯದರ್ಶಿ ಡಾ| ಬಿ.ಎಸ್. ಮಂಜುನಾಥ ಸ್ವಾಮಿ ಹಾಗೂ ಅಧಿ ಕಾರಿಗಳು ಇದ್ದರು.
ಚುನಾವಣಾ ವೀಕ್ಷಕರಿಂದ ಪರಿಶೀಲನೆ: ಸುರಪುರ ಮತ್ತು ಶಹಾಪುರ ವಿಧಾನಸಭಾ ಮತಕ್ಷೇತ್ರಗಳ ಸಾಮಾನ್ಯ ವೀಕ್ಷಕರಾದ ಬೀರೇಂದ್ರ ಭೂಷಣ್, ಯಾದಗಿರಿ ಕ್ಷೇತ್ರದ ಸಾಮಾನ್ಯ ವೀಕ್ಷಕರಾದ ಡಾ| ಶಕೀಲ್ ಪಿ. ಅಹ್ಮದ್, ಗುರುಮಠಕಲ್ ಕ್ಷೇತ್ರದ ಸಾಮಾನ್ಯ ವೀಕ್ಷಕರಾದ ಕೆ.ಶಾರದಾ ದೇವಿ ಅವರು ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾನ ಪ್ರಕ್ರಿಯೆ ಪರಿಶೀಲಿಸಿದರು. ನಾಲ್ಕೂ ವಿಧಾನಸಭಾ ಕ್ಷೇತ್ರಗಳ ಪೊಲೀಸ್ ವೀಕ್ಷಕ ಎಚ್. ಹಿಮೇಂದ್ರನಾಥ್ ಅವರೂ ಜಿಲ್ಲೆಯ ಹಲವು ಮತಗಟ್ಟೆಗಳಿಗೆ ತೆರಳಿ ಪೊಲೀಸ್ ಬಂದೋಬಸ್ತ್ ವೀಕ್ಷಿಸಿದರು.