ಚಿತ್ರಮಂದಿರ ತೆರೆಯಲು ಅನುಮತಿ ಸಿಕ್ಕ ಬಳಿಕ ಅನೇಕ ಚಿತ್ರಗಳು ಮರು ಬಿಡುಗಡೆಯಾಗಿವೆ. ಹೀಗೆ ಮರುಬಿಡುಗಡೆಯಾದ ಸಿನಿಮಾಗಳಿಗೆ ಪ್ರೇಕ್ಷಕರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ದಿನದಿಂದ ದಿನಕ್ಕೆ ಸಿನಿಮಾ ನೋಡುವವರ ಸಂಖ್ಯೆಯಲ್ಲೂಏರಿಕೆಯಾಗುತ್ತಿವೆ. ಪರಿಣಾಮವಾಗಿ ಚಿತ್ರತಂಡಗಳು ಖುಷಿಯಾಗಿವೆ. ಅದರಲ್ಲಿ “ಕಾಣದಂತೆ ಮಾಯವಾದನು’ ಚಿತ್ರವೂ ಸೇರಿದೆ. ಈ ಚಿತ್ರಕ್ಕೆ ಈಗ50 ದಿನದ ಸಂಭ್ರಮ. ಈ ಚಿತ್ರ ಲಾಕ್‌ಡೌನ್‌ಘೋಷಣೆಯಾಗುವ ವೇಳೆಗೆ43 ದಿನಗಳನ್ನ ಪೂರೈಸಿತು. ಈಗ ಮತ್ತೆ ಪ್ರದರ್ಶನ ಆರಂಭವಾಗಿದ್ದು, ಈ ವಾರ 50 ದಿನಗಳನ್ನು ಪೂರೈಸಿದೆ.
ಈ ಚಿತ್ರದಕನ್ನಡ ಹೊರತುಪಡಿಸಿ ಮಿಕ್ಕೆಲ್ಲಾ ಭಾರತೀಯ ಭಾಷೆಗಳ ಡಿಜಿಟಲ್ ಹಕ್ಕುಗಳು ಮಾರಟವಾಗಿವೆ. ಈ ಚಿತ್ರದಲ್ಲಿ ವಿಕಾಸ್, ಸಿಂಧು ಲೋಕನಾಥ್ ನಾಯಕ-ನಾಯಕಿಯಾಗಿ ನಟಿಸಿದ್ದಾರೆ ಖಳನಾಯಕರಾಗಿ ಉದಯ್ ಹಾಗು ಭಜರಂಗಿ ಲೋಕಿ. ವಿಶೇಷ ಪಾತ್ರದಲ್ಲಿ ಧರ್ಮಣ್ಣ, ಪೋಷಕ ಪಾತ್ರಗಳಲ್ಲಿ ಅಚ್ಯುತ್, ವಿನಯಾ ಪ್ರಸಾದ್, ಸುಚೇಂದ್ರ ಪ್ರಸಾದ್ ಮುಂತಾದವರಿದ್ದಾರೆ. ರಾಜ್ ಪತ್ತಿಪಾಟಿ ಈ ಚಿತ್ರದ ನಿರ್ದೇಶಕರು.
ಚಿಕ್ಕಣ್ಣ ಈಗ ಉಪಾಧ್ಯಕ್ಷ :
ಸ್ಯಾಂಡಲ್‌ವುಡ್‌ನಲ್ಲಿ ಇಲ್ಲಿಯವರೆಗೆ ಹಲವು ಚಿತ್ರಗಳಲ್ಲಿ ಕಾಮಿಡಿ ಪಾತ್ರಗಳ ಮೂಲಕ ಕಮಾಲ್ ಮಾಡಿದ್ದ ಚಿಕ್ಕಣ್ಣ ಈಗ ನಾಯಕ ನಟನಾಗಿ ಬಡ್ತಿ ಪಡೆಯುತ್ತಿದ್ದಾರೆ. ಸದ್ಯ ಚಿಕ್ಕಣ್ಣ “ಉಪಾಧ್ಯಕ್ಷ’ ಎನ್ನುವ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಮೂಲಕ ಸೋಲೋ ಹೀರೋ ಆಗಿ ಲಾಂಚ್ ಆಗುತ್ತಿದ್ದಾರೆ. ಸೋಮವಾರ ಈ ಚಿತ್ರದ ಟೈಟಲ್ ಅನೌನ್ಸ್ ಆಗಿದ್ದು, ಜೊತೆಗೆ ಚಿತ್ರದ ಹಾಡಿನ ರೆಕಾರ್ಡಿಂಗ್‌ಕೂಡ ಶುರುವಾಗಿದೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸ್ಟುಡಿಯೋದಲ್ಲಿ ನಡೆದ ಸರಳ ಸಮಾರಂಭದಲ್ಲಿ ಚಿತ್ರದ ಸ್ಕ್ರಿಪ್ಟ್ ಪೂಜೆ ನೆರವೇರಿಸಿ, ರೆಕಾರ್ಡಿಂಗ್ ಪ್ರಾರಂಭ ಮಾಡುವ ಮೂಲಕ ಚಿಕ್ಕಣ್ಣ ಹೊಸ ಸಿನಿಮಾಗೆ ಚಾಲನೆ ನೀಡಲಾಯಿತು. ಚಂದ್ರಮೋಹನ್ “ಉಪಾಧ್ಯಕ್ಷ’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಉಮಾಪತಿ ಶ್ರೀನಿವಾಸ ಗೌಡ ಈ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ.