ಕಂಪ್ಲಿ; ಸ್ಥಳೀಯ ಪುರಸಭೆಯಲ್ಲಿ ಬಿಜೆಪಿ 13 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ಪಷ್ಟ ಬಹುಮತಗಳಿಸಿದ್ದರೂ ಸಹಿತ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳು ಎಲ್ಲಿ ಕೈತಪ್ಪಿ ಕೇವಲ 10 ಸ್ಥಾನಗಳನ್ನು ಗಳಿಸಿರುವ ಕಾಂಗ್ರೆಸ್ ಪಾಲಾಗುವುದೋ ಎನ್ನುವ ಮಾತುಗಳು ಪಟ್ಟಣದಲ್ಲಿ ಕೇಳಿ ಬರುತ್ತಿವೆ.
ಇದೀಗ ಚುನಾವಣೆ ಮುಗಿದು ನಾಲ್ಕು ತಿಂಗಳ ನಂತರ ಮೀಸಲಾತಿ ಪ್ರಕಟವಾಗಿದ್ದು, ಅಧ್ಯಕ್ಷ ಸ್ಥಾನ ಸ್ಥಾನ ಸಾಮಾನ್ಯವರ್ಗಕ್ಕೆ ಮತ್ತು ಉಪಾಧ್ಯಕ್ಷ ಸ್ಥಾನ ಬಿಸಿಎ ವರ್ಗಕ್ಕೆ ಮೀಸಲಾಗಿದ್ದು, ಈ ಎರಡು ಸ್ಥಾನಗಳಿಗೂ ಎರಡು ಪಕ್ಷಗಳಲ್ಲಿ ಸಾಕಷ್ಟು ಪ್ರಭಾವಿಗಳು ಹಾಗೂ ಆಕಾಂಕ್ಷಿಗಳು ಇದ್ದಾರೆ.
ಬಿಜೆಪಿದಿಂದ 13 ಅಭ್ಯರ್ಥಿಗಳು ಜಯಗಳಿಸಿದ್ದು, ಇದರಲ್ಲಿ ಅಧ್ಯಕ್ಷ ಆಕಾಂಕ್ಷಿಗಳು ಹಲವರಿದ್ದು, ಇದರಲ್ಲಿ ಮುಖ್ಯವಾಗಿ ಸಾಮಾನ್ಯ ವರ್ಗದಿಂದ ಜಯಗಳಿಸಿರುವ ಎಸ್.ಎಂ. ನಾಗರಾಜ, ಬಿ. ರಮೇಶ್, ವಿ. ಶಾಂತಲಾ ವಿದ್ಯಾಧರ, ಎನ್. ರಾಮಾಂಜಿನೇಯಲು, ಟಿ.ವಿ. ಸುದರ್ಶನರೆಡ್ಡಿ, ಡಾ| ವಿ.ಎಲ್. ಬಾಬು, ಸಿ.ಆರ್. ಹನುಮಂತ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಆದರೆ ಇದರಲ್ಲಿ ಇಬ್ಬರು ಇತ್ತೀಚೆಗೆ ಬಿಜೆಪಿ ಸೇರಿರುವುದರಿಂದ ಪಕ್ಷದ ಕಟ್ಟಾಳುಗಳನ್ನು ಪರಿಗಣಿಸಿದರೆ ಹಾಗೂ ಮೀಸಲಾತಿ ಇದ್ದಾಗ ಅದೇ ಸಮುದಾಯದವರು ಅಧ್ಯಕ್ಷರಾಗುತ್ತಾರೆನ್ನುವುದು ಗಣನೆಗೆ ತೆಗೆದುಕೊಂಡರೆ ಹಾಗೂ ಮಹಿಳಾ ಮೀಸಲಾತಿ ಇದ್ದಾಗ ಮಹಿಳೆಯೇ ಅಧ್ಯಕ್ಷರಾಗುತ್ತಾರೆನ್ನುವುದನ್ನು ಗಮನಿಸಿದರೆ ಬಿಜೆಪಿದಲ್ಲಿ ಎಸ್.ಎಂ. ನಾಗರಾಜ ಹಾಗೂ ಬಿ. ರಮೇಶ್ ಅಧ್ಯಕ್ಷರಾಗುವ ಅವಕಾಶಗಳಿವೆ. ಆದರೆ ಅವಧಿಯನ್ನು ಹಂಚಿಕೆ ಮಾಡಿದರೆ ಮೂರುಜನ ಅಧ್ಯಕ್ಷರಾಗಬಹುದು.
ಮೂರು ಭಾರಿ ಜಯಗಳಿಸಿದ್ದಾರೆಂದು ಭಾವಿಸಿದರೆ ಎನ್.ರಾಮಾಂಜಿನೇಯಲು ಅಧ್ಯಕ್ಷರಾಗುವ ಅದೃಷ್ಟ ಪಡೆಯಬಹುದೆನ್ನುವ ಮಾತುಗಳು ಪಟ್ಟಣದಲ್ಲಿ ಕೇಳಿ ಬರುತ್ತಿವೆ. ಇನ್ನು ಉಪಾಧ್ಯಕ್ಷ ಸ್ಥಾನ ಬಿಸಿಎ ವರ್ಗಕ್ಕೆ ಮೀಸಲಾಗಿದ್ದು, ಇದಕ್ಕೇನು ಅಷ್ಟು ಪೈಪೋಟಿ ಇಲ್ಲದಿದ್ದರೂ ಸಹಿತ ಎಲ್ಲರಿಗೂ ಸಮ್ಮತವಾದ ಅಭ್ಯರ್ಥಿಯನ್ನು ಆಯ್ಕೆ ಮಾಡಬಹುದು. ಇನ್ನು ಕಾಂಗ್ರೆಸ್ ಕಡೆ ನೋಡೋದಾದರೆ ಈ ಪಕ್ಷದಿಂದ 10 ಜನ ಅಭ್ಯರ್ಥಿಗಳು ಜಯಗಳಿಸಿದ್ದು, ಅಧ್ಯಕ್ಷ ಸ್ಥಾನಕ್ಕೆ ಭಟ್ಟ ಪ್ರಸಾದ್, ಕೆ.ಎಸ್. ಚಾಂದ್ ಭಾಷಾ, ವೀರಾಂಜಿನೇಯಲು, ಎಂ. ಉಸ್ಮಾನ್ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿಯಲ್ಲಿದ್ದಾರೆ. ಇಲ್ಲಿನ ಬಿಜೆಪಿಯು ಬಹುಮತ ಸಾಧಿ ಸಿದ ಹಿನ್ನೆಲೆ ಪುರಸಭೆ ಗದ್ದುಗೆಗೆ ಏರಬಹುದು ಎಂಬದು ಒಂದು ಕಡೆಯಾದರೆ ಮತ್ತೂಂದು ಕಡೆ 10 ಸ್ಥಾನಗಳನ್ನು ಹೊಂದಿರುವ ಕಾಂಗ್ರೆಸ್ ನಾನಾ ತಂತ್ರಗಳನ್ನು ಹೆಣೆಯುವ ಮೂಲಕ ಪುರಸಭೆ ಅಧಿಕಾರ ಹಿಡಿದರೂ ಅಚ್ಚರಿ ಇಲ್ಲ.
ಉಪಾಧ್ಯಕ್ಷ ಸ್ಥಾನ: ಇನ್ನೂ ಉಪಾಧ್ಯಕ್ಷ ಸ್ಥಾನ ಬಿಸಿಎ ಮೀಸಲಾಗಿದೆ. ಬಿಜೆಪಿಯಲ್ಲಿ ಕೆ.ನಿರ್ಮಲ, ಗಂಗಮ್ಮ ಉಡೆಗೋಳ್ ಆಕಾಂಕ್ಷಿಗಳಾಗಿದ್ದರೆ, ಕಾಂಗ್ರೆಸ್‌ನಲ್ಲಿ ಕೆ.ಎಸ್. ಚಾಂದ್‌ಭಾಷಾ, ಎಂ.ಉಸ್ಮಾನ್, ಲೊಡ್ಡು ಹೊನ್ನೂರವಲಿ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಇಲ್ಲಿನ ಉಪಾಧ್ಯಕ್ಷ ಸ್ಥಾನಕ್ಕೆ ಪ್ರಬಲ ಪೈಪೋಟಿ ನಡೆದಿದ್ದು, ಯಾರು ಉಪಾಧ್ಯಕ್ಷ ಸ್ಥಾನ ಒಲಿಸಿಕೊಳ್ಳಲಿದ್ದಾರೆ ಎಂಬುದನ್ನು ಕಾದುನೋಡಬೇಕಾಗಿದೆ.
ಜಿ. ಚಂದ್ರಶೇಖರಗೌಡ