ಕಂಪ್ಲಿ: ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಹಿಂಗಾರು ಹಂಗಾಮಿನ ಭತ್ತದ ಕಟಾವು ಭರದಿಂದ ನಡೆದಿದೆ. ಆದರೆ, ಕೊರೊನಾ ಲಾಕ್ ಡೌನ್ ಜಾರಿಯಿಂದ ಅಕ್ಕಿಗಿರಣಿ ಮಾಲೀಕರ, ಕಾರ್ಮಿಕರ ನಿದ್ದೆಗೆಡಿಸಿದೆ.
ತಾಲ್ಲೂಕಿನ ಕಂಪ್ಲಿ ಪಟ್ಟಣ ಹಾಗೂ ಒಂದೆರಡು ಗ್ರಾಮಗಳಲ್ಲಿ ಮಾತ್ರ ಅಕ್ಕಿ ಗಿರಣಿಗಳಿದ್ದು, ಪಟ್ಟಣದಲ್ಲಿರುವ ಸುಮಾರು 20 ಅಕ್ಕಿ ಗಿರಣಿಗಳಲ್ಲಿ ಸದ್ಯ 5-6 ಗಿರಣಿಗಳು ಮಾತ್ರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಉಳಿದವು ನಿಧಾನವಾಗಿ ನಡೆಯುತ್ತಿವೆ. ಪ್ರತಿ ಹಂಗಾಮಿನಲ್ಲಿ ತಿಂಗಳಿಗೆ ಸರಾಸರಿ 3 ರಿಂದ 4 ಸಾವಿರ ಟನ್ ಭತ್ತ ಮಿಲ್ಲಿಂಗ್ ಆಗುತ್ತದೆ. ಕೊರೊನಾದಿಂದಾಗಿ ಸದ್ಯ ಹದಿನೈದು ದಿನಗಳಿಗೆ ಸರಾಸರಿ 500 ಟನ್ ಭತ್ತದ ಮಿಲ್ಲಿಂಗ್ ಆಗಿದೆ. ಹೊರ ರಾಜ್ಯದಿಂದ ಭತ್ತದ ಆಮದಿಗೆ ಕೊಂಚ ಕಡಿವಾಣ ಹಾಕಿರುವುದರಿಂದ ಭತ್ತದ ಬೆಲೆಯಲ್ಲಿಯೂ ಅಲ್ಪ ಚೇತರಿಕೆ ಕಂಡಿದ್ದು, ಅಕ್ಕಿ ಗಿರಣಿಗಳ ಆರಂಭಕ್ಕೂ ಮುನ್ನ ಕ್ವಿಂಟಲ್‌ಗೆ 1500 ಇದ್ದ ಬೆಲೆ ಇದೀಗ 1600 ರಿಂದ 1650 ಆಗಿದೆ. ಆದರೆ ಸರ್ಕಾರ ಕೃಷಿ ಚಟುವಟಿಕೆಗಳಿಗೆ ನಿರ್ಬಂಧವಿಲ್ಲವೆಂದು ಹೇಳುತ್ತಿದೆ. ಆದರೆ ಅಕ್ಕಿಗಿರಣಿಯಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ಪಾಸ್‌ಗಳ ಕೊರತೆ ಕಾಡುತ್ತಿದೆ.
ಎರಡು ಪಾಳಿಯಲ್ಲಿ ಕಾರ್ಯನಿರ್ವಹಿಸುವ ಮೂರ್‍ನಾಲ್ಕು ಡ್ರೈವರ್‌ಗಳು, 5-6 ಜನ ಒಳ ಮತ್ತು ಹೊರ ಹಮಾಲರು, ಮೂವರು ಗುಮಾಸ್ತರು, ಪಾಲುದಾರರು ಅಕ್ಕಿಗಿರಣಿಯಲ್ಲಿ ಕಾರ್ಯದಲ್ಲಿರುತ್ತಾರೆ. ಕನಿಷ್ಠ ಒಂದು ಅಕ್ಕಿಗಿರಣಿಗೆ 25 ಪಾಸ್‌ಗಳ ಅಗತ್ಯವಿದೆ. ಆದರೆ ಸದ್ಯ ಒಂದು ಮಿಲ್ಲಿಗೆ 17 ಪಾಸ್ ಗಳನ್ನು ಮಾತ್ರ ನೀಡಲಾಗಿದೆ. ಅಕ್ಕಿಗಿರಣಿಗಳಿಗೆ ನಿತ್ಯ ಕಾರ್ಮಿಕರು ಕೂಗಳತೆ ದೂರದ ಗಂಗಾವತಿ ತಾಲ್ಲೂಕಿನ ಚಿಕ್ಕ ಜಂತಕಲ್ಲಿನಿಂದ ಬಂದು ಹೋಗಬೇಕಾಗಿದೆ. ಆದರೆ ಇದು ಅಂತರ್ ಜಿಲ್ಲಾ ಸಮಸ್ಯೆಯಾಗಿರುವುದರಿಂದ ಅಂತರ್ ಜಿಲ್ಲಾ ಗಡಿ ಚೆಕ್‌ಪೋಸ್ಟ್‌ನಲ್ಲಿ ನಿತ್ಯವೂ ಕಿರಿಕಿರಿಯಾಗುತ್ತಿದೆ. ಇದರಿಂದಾಗಿ ಅಕ್ಕಿಗಿರಣಿಗಳಲ್ಲಿ ಕಾರ್ಮಿಕರ ಕೊರತೆ ಕಾಡುತ್ತಿದೆ.
ಅಕ್ಕಿ ಗಿರಣಿಗಳನ್ನು ಲೋನ್ ಮೂಲಕ ನಿರ್ಮಾಣ ಮಾಡಿರುವುದರಿಂದ ಸಾಲದ ಕಂತುಗಳನ್ನು ಪಾವತಿಸಲು ಕಾಲಾವಕಾಶದ ಅಗತ್ಯವಿದೆ. ಸ್ವಯಂ ಆಸ್ತಿ ಘೋಷಣೆ ತೆರಿಗೆ ಪದ್ಧತಿಯೂ ಹೊರೆಯಾಗಿದೆ. ಅಕ್ಕಿಗಿರಣಿಗಳು ಕೃಷಿ ಆಧಾರಿತ ಕೈಗಾರಿಕೆಗಳಾಗಿದ್ದು, ತೆರಿಗೆ ದರದಲ್ಲಿ ಸಾಕಷ್ಟು ವಿನಾಯಿತಿ ನೀಡಬೇಕಾಗಿದೆ. ಸೆಸ್ ವಿನಾಯಿತಿ ನೀಡುವುದರ ಜೊತೆಗೆ ಬಡ್ಡಿಯನ್ನು ಕೈಬಿಡಬೇಕು ಅಥವಾ ಸರಳೀಕರಣಗೊಳಿಸಬೇಕು ಎನ್ನುವುದು ಅಕ್ಕಿಗಿರಣಿ ಮಾಲೀಕರ ಆಗ್ರಹವಾಗಿದೆ.
ಹೊರೆಯಾದ ನಿಗದಿತ ವಿದ್ಯುತ್ ಶುಲ್ಕ: ಅಕ್ಕಿ ಗಿರಣಿಗಳಿಗೆ ನಿಗ ದಿತ ವಿದ್ಯುತ್ ಶುಲ್ಕವು ಒಂದು ಲಕ್ಷದಿಂದ ಎರಡುವರೆ ಲಕ್ಷದವರೆಗೆ ಇದ್ದು, ಇದು ಗಿರಣಿ ಮಾಲೀಕರಿಗೆ ಶೂಲವಾಗಿ ಪರಿಣಮಿಸಿದೆ. ವರ್ಷದಲ್ಲಿ ಎರಡು ಹಂಗಾಮು ಸೇರಿ 5-6 ತಿಂಗಳು ಮಾತ್ರ ಚಾಲನೆಯಲ್ಲಿರುತ್ತವೆ. ಉಳಿದ 5-6 ತಿಂಗಳು ಗಿರಣಿಗಳನ್ನು ಬಿಳಿಯಾನೆಯಂತೆ ಸಾಕಾಬೇಕಾಗಿದೆ. ನಿಗದಿ ತ ವಿದ್ಯುತ್ ಶುಲ್ಕ ಪದ್ಧತಿ ತೆಗೆದು, ಬಳಸಿದ ವಿದ್ಯುತ್ ಶುಲ್ಕ ಪಾವತಿಸುವ ಪದ್ಧತಿ ಜಾರಿಗೆ ತರಬೇಕು ಎನ್ನುವ ಮನವಿ ಸರ್ಕಾರಕ್ಕೆ ತಲುಪುತ್ತಿಲ್ಲ.
ಅಕ್ಕಿಗಿರಣಿಗಳ ಉಳಿವಿಗಾಗಿ ಸರ್ಕಾರವೇ ಭತ್ತವನ್ನು ಖರೀದಿಸಿ ಅಕ್ಕಿಗಿರಣಿಗಳಿಗೆ ನೀಡಬೇಕು. ನಿಗ ದಿತ ಶುಲ್ಕ ಪದ್ಧತಿ ತೆಗೆದು ಹಾಕಬೇಕು. ಕಾರ್ಮಿಕರಿಗೆ ಹೆಚ್ಚಿನ ಪಾಸ್ ಗಳನ್ನು ನೀಡಬೇಕು ಹಾಗೂ ಪೊಲೀಸರು ಅನಗತ್ಯ ಕಿರಿಕಿರಿ ಮಾಡಬಾರದು ಎಂದು ಅಕ್ಕಿಗಿರಣಿ ಮಾಲೀಕರ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಎಂ. ಹೇಮಯ್ಯಸ್ವಾಮಿ ತಿಳಿಸಿದರು.